ಇಂದಿನಿಂದ ಶರನ್ನವರಾತ್ರಿ ಮಹೋತ್ಸವ
ಹಾಸನ: ನಗರದ ಅಂಚೆ ಮತ್ತು ತಂತಿ ಕಾಲೋನಿಯ 1ನೇ ಹಂತದಲ್ಲಿರುವ ಸಂಕಷ್ಟಹರ ಗಣಪತಿ ದೇವಾಲಯದಲ್ಲಿ ಅ.4 ರಿಂದ ಅ.14 ರವರೆಗೆ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ.4 ರಂದು ಬೆಳಗ್ಗೆ 9ಕ್ಕೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಮಹಾಭಿಷೇಕ, ಪ್ರಸೂತಿಕಾ (ಬಾಣಂತಿ) ಅಲಂಕಾರ ಮಾಡಲಾಗುವುದು. ಅ.14 ರವರೆಗೆ ಪ್ರತಿದಿನ ಬೆಳಗ್ಗೆ ಕಲ್ಪಪೂಜೆ, ಸಪ್ತಶತಿ ಪಾರಾಯಣ, ನವಗ್ರಹ ಪೂಜೆ, ಜಪ, ಮೃತ್ಯುಂಜಯ, ಸಂಜೆ 5.30 ರಿಂದ ಸಹಸ್ರನಾಮ ಅರ್ಚನೆ, ತ್ರಿಶತಿ ಅರ್ಚನೆ, ಲಲಿತಾ ಅಷ್ಟೋತ್ತರ, ನಂತರ ಮಹಾಮಂಗಳಾರತಿ ನಡೆಯಲಿದೆ.
'ಆಧುನಿಕ ಕ್ರೀಡೆಗಳ ಅಬ್ಬರದಲ್ಲಿ ಗ್ರಾಮೀಣ ಕ್ರೀಡೆಗಳ ಅವನತಿ'
ಅರಕಲಗೂಡು: ಕ್ರಿಕೆಟ್ ಹಾಗೂ ಇನ್ನಿತರ ಕೆಲ ಆಟಗಳಿಂದಾಗಿ ಗ್ರಾಮೀಣ ಕ್ರಿಡೆಗಳು ನಶಿಸುತ್ತಿದ್ದು, ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಪೋಷಿಸುವ ಅಗತ್ಯವಿದೆ ಎಂದು ಯೋಗಾನರಸಿಂಹ ವಿದ್ಯಾಸಂಸ್ಥೆ ಕಾರ್ಯದರ್ಶಿ ಎ.ಜಿ.ರಾಮನಾಥ್ ತಿಳಿಸಿದರು.
ಗೊರೂರು ಎ.ಎನ್.ವರದರಾಜುಲು ಪ್ರಥಮ ದರ್ಜೆ ಕಾಲೇಜಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್
ರೋವರ್ ಘಟಕ ಮತ್ತು ಪರಂಪರೆ ಕೂಟದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಂತರ ಕಾಲೇಜು ಪಾರಂಪರಿಕ ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಹಾಸನದ ಸರ್ಕಾರಿ ಕಲಾ ಕಾಲೇಜಿನ ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಪ್ರೊ. ಚನ್ನಯ್ಯ ಮಾತನಾಡಿ ಹಳೆಯ ಆಟಗಳು ದೈಹಿಕ ಶಕ್ತಿ ತುಂಬುವುದಷ್ಟೇ ಅಲ್ಲದೇ ಮಾನಸಿಕ ಉಲ್ಲಾಸ ತುಂಬುತ್ತವೆ ಎಂದರು. ಎನ್.ಡಿ.ಆರ್.ಕೆ. ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಪ್ರೊ. ಜಯಣ್ಣ, ಪರಂಪರಾ ಕೂಟದ ಸಂಚಾಲಕ ಎಂ.ಎಸ್.ದಶರಥ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಆರ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎ.ವೇಣುಗೋಪಾಲ್ ಮಾತನಾಡಿ ಇಂದಿನ ಕಮರ್ಷಿಯಲ್ ಆಟಗಳ ಮುಂದೆ ಪಾರಂಪರಿಕ ಆಟಗಳು ನಶಿಸುತ್ತಿದ್ದು, ಪಾರಂಪರಿಕ ಆಟಗಳಿಂದ ದೇಹಕ್ಕೆ ಮತ್ತು ಮನಸ್ಸಿಗೆ ಯೋಗ ಉಂಟಾಗಿ ಮನುಷ್ಯ ಆರೋಗ್ಯದಿಂದ ಇರಲಿಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಮುಕುಂದೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಂ.ಎಚ್.ವಾಸುದೇವ್, ಸಂಚಾಲಕ ಜಿ.ಪಿ.ಧರ್ಮೇಗೌಡ ಉಪಸ್ಥಿತರಿದ್ದರು. ಎ.ಜಿ. ಅಶ್ವಿನಿ ಪ್ರಾರ್ಥಿಸಿದರು. ಸುನಂದ ಸ್ವಾಗತಿಸಿದರು. ಯಶವಂತಕುಮಾರ್ ವಂದಿಸಿದರು.
ತಹಸೀಲ್ದಾರ್ ನಾಗರಾಜು ಅಧಿಕಾರ ಸ್ವೀಕಾರ
ಚನ್ನರಾಯಪಟ್ಟಣ: ತಾಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್ ಆಗಿ ಕೆಎಎಸ್ ಅಧಿಕಾರಿ ನಾಗರಾಜು ಗುರುವಾರ ಅಧಿಕಾರ ಸ್ವೀಕರಿಸಿದರು. ಮಂಡ್ಯ ಜಿಲ್ಲೆ ಮದ್ದೂರಿನಿಂದ ವರ್ಗಾವಣೆಗೊಂಡು ತಾಲೂಕು ತಹಸೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದು, ತಹಸೀಲ್ದಾರ್ ನಟರಾಜ್ ಅವರಿಗೆ ಅಧಿಕಾರ ವರ್ಗಾಯಿಸಿದರು. ನಟರಾಜ್ ಕಳೆದ 8 ತಿಂಗಳ ಹಿಂದಷ್ಟೇ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರನ್ನು ಸೊರಬ ತಾಲೂಕು ತಹಸೀಲ್ದಾರ್ ಆಗಿ ಸರ್ಕಾರ ವರ್ಗಾವಣೆ ಮಾಡಿದೆ.
ಹನ್ಯಾಳು ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರ
ಅರಕಲಗೂಡು: ತಾಲೂಕಿನ ರಾಮನಾಥಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಹನ್ಯಾಳು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಜರುಗಲಿದೆ. ಶಾಸಕ ಎ.ಮಂಜು ಉದ್ಘಾಟಿಸುವರು.ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ರಾಜಮ್ಮ,ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಮಾಕ್ಷಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ,ತಾಲೂಕ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ ಪಾಲ್ಗೊಳ್ಳುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

