ರೋಟಾ ವೈರಸ್ನಿಂದ ಮಕ್ಕಳಿಗೆ ಬೇಧಿ: ಡಾ. ಸುಧೀರ್
ಹೊಳೆನರಸೀಪುರ: ಮಕ್ಕಳಲ್ಲಿ ಹೆಚ್ಚಾಗಿ ರೋಟಾ ವೈರಸ್ನಿಂದಾಗಿ ಬೇಧಿ ಆಗುವ ಸಾಧ್ಯತೆಗಳಿದ್ದು, ಈ ರೀತಿಯ ವೈರಲ್ ಬೇಧಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಿ ತಡೆಯಬಹುದಾಗಿದ್ದು, ಅಮೀಬಿಯಾದಿಂದ ಬೇಧಿ ಆಗುವ ಸಂಭವ ಅತಿ ವಿರಳವಾಗಿರುವ ಕಾರಣದಿಂದ ಅನವಶ್ಯಕವಾಗಿ ಮಕ್ಕಳಿಗೆ ಅಮೀಬಿಯಾ ನಿರೋಧ ಔಷಧಿಗಳನ್ನು ಮಕ್ಕಳಿಗೆ ನೀಡುವ ಅಗತ್ಯತೆ ಇರುವುದಿಲ್ಲ ಎಂದು ಹಾಸನದ ಮಕ್ಕಳ ತಜ್ಞ ಡಾ. ಬಿ. ಸುಧೀರ್ ಹೇಳಿದ್ದಾರೆ.
ಅವರು ಭಾರತೀಯ ವೈದ್ಯಕೀಯ ಸಂಘದ ತಾಲೂಕು ಘಟಕವು ತಾಲೂಕಿನ ಪಾಲಕಾ ರೆಸಾರ್ಟ್ನಲ್ಲಿ ವೈದ್ಯರಿಗಾಗಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬೇಧಿಗೆ ಚಿಕಿತ್ಸೆ ನೀಡಬೇಕಾದಲ್ಲಿ ವೈದ್ಯರು ಎಚ್ಚರ ವಹಿಸುವುದು ಮುಖ್ಯವಾಗಿದ್ದು, ಸಾಮಾನ್ಯವಾಗಿ ಎಲ್ಲಾ ಬೇಧಿಯೂ ಸೋಂಕಿತವಾಗಿರುವುದಿಲ್ಲ ಮತ್ತು ಇವುಗಳಿಗೆ ಹೆಚ್ಚಿನ ಜೀವ ನಿರೋಧಕ ಔಷಧಿಗಳ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬೇಧಿಗಳಿಗೂ ಸತು(ಜಿಂಕ್) ಹಾಗೂ ಒಆರ್ಎಸ್ ಜಲಗಳ ಅವಶ್ಯಕತೆ ಹೆಚ್ಚಿರುತ್ತದೆ ಎಂದು ನುಡಿದ ಡಾ. ಸುಧೀರ್, ವೈರಲ್ ಬೇಧಿಗೆ ನಿಯಮಿತವಾದ ಪರಿವೀಕ್ಷಣೆಯೊಂದಿಗೆ ಅವಶ್ಯಕ ಚುಚ್ಚುಮದ್ದನ್ನು ನೀಡುವ ಮೂಲಕ ಮಕ್ಕಳಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸುವ ಬೇಧಿಯನ್ನು ನಿಯಂತ್ರಣಕ್ಕೆ ತರಬಹುದಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಪಟ್ಟಣದ ಮಕ್ಕಳ ತಜ್ಞ ಡಾ. ಹೊನ್ನೇಗೌಡ ಅವರನ್ನು ತಾಲೂಕು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹಾಸನದ ಮಣಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದಿನೇಶ್ ಬಿ. ಕಬ್ಬಳಿಗೆರೆ, ಡಾ. ಜೆ.ಕೆ. ಯತೀಶ್, ಕೆ.ಆರ್. ನಗರದ ಹಿರಿಯ ವೈದ್ಯರಾದ ಡಾ. ಎನ್.ಡಿ. ಜಗನ್ನಾಥ್, ಡಾ. ಎಚ್.ಟಿ. ರವೀಂದ್ರ, ಡಾ. ಎನ್. ಶಿವಪ್ರಸಾದ್, ಡಾ. ಬಿ.ಎಸ್. ಮಹೇಶ್ ಮತ್ತಿತರನ್ನು ಗುರುತಿಸಿ ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಡಾ. ಕೆ. ಶ್ರೀನಿವಾಸಮೂರ್ತಿ ಸ್ವಾಗತಿಸಿದರು. ಅಧ್ಯಕ್ಷರು ಹಾಗೂ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಟಿ.ಎಸ್. ಲಕ್ಷ್ಮೀಕಾಂತ್ ವಂದಿಸಿದರು. ಅರವಳಿಕೆ ತಜ್ಞ ಡಾ. ಡಿ.ಎಸ್. ವಿಜಯಕುಮಾರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

