ಎತ್ತಿನಹೊಳೆ ಕಾನೂನು ಬಾಹಿರ
ಹಾಸನ: ಪ್ರಸ್ತಾಪಿತ ಕರ್ನಾಟಕ ನೀರಾವರಿ ನಿಗಮದ ಎತ್ತಿನಹೊಳೆ ತಿರುವು ಯೋಜನೆಗೆ ಶಂಕುಸ್ಥಾಪನೆ ಮಾಡುವುದು ಕಾನೂನಿಗೆ ವಿರುದ್ಧವಾಗಿರುವ ಬಗ್ಗೆ ಮಲೆನಾಡು ಜನಪರ ಹೋರಾಟ ಸಮಿತಿ ನೇತೃತ್ವದಲ್ಲಿ ಪರಿಸರ ಪ್ರೇಮಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಅರ್ಪಿಸಿದ ರು.
ಮಲೆನಾಡು ಜನಪರ ಹೋರಾಟ ಸಮಿತಿಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಂ. ಕಿಶೋರ್ ಕುಮಾರ್, ಕಾಂಗ್ರೆಸ್ ಮುಖಂಡ ಎಚ್.ಪಿ.ಮೋಹನ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಂ.ಸಿ.ಡೋಂಗ್ರೆ, ಲೇಖಕಿ ರೂಪಹಾಸನ, ಅನುಗನಾಳು ಕೃಷ್ಣಮೂರ್ತಿ, ಮಂಜುನಾಥ ದತ್ತ, ಆರ್.ಪಿ. ವೆಂಕಟೇಶಮೂರ್ತಿ ಮತ್ತಿತರರು ಇದ್ದರು.
ಸಿಎಂ ಭರವಸೆ: ಪ್ರಸ್ತಾಪಿತ ಕರ್ನಾಟಕ ನೀರಾವರಿ ನಿಗಮದ ಎತ್ತಿನಹೊಳೆ ತಿರುವು ಯೋಜನೆಗೆ ಸಂಬಂಧಿಸಿದಂತೆ ಸಭೆ ಕರೆದು ಚರ್ಚಿಸಿದ ನಂತರೇ ಸೂಕ್ತ ಕ್ರಮ ತೆಗೆದುಕೊಳ್ಲಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಬಯಲುಸೀಮೆ ಪ್ರದೇಶಗಳಾದ ತುಮಕೂರು, ಚಿತ್ರದುರ್ಗ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮುಂತಾದ ಪ್ರದೇಶಗಳಿಗೆ ನೀರು ಕೊಡುವ ಸಲುವಾಗಿ ಕರ್ನಾಟಕ ನೀರಾವರಿ ನಿಗಮದ ಮುಖೇನ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಎತ್ತಿನಹೊಳೆ ತಿರುವು ಯೋಜನೆ ಕಾನೂನು ರೀತ್ಯ ಪಡೆದುಕೊಳ್ಳಲೇ ಬೇಕಾಗಿರುವ ಅನುಮತಿ ಇನ್ನೂ ದೊರೆತಿಲ್ಲವಾದ ಕಾರಣ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವುದು ಕಾನೂನು ಬಾಹಿರವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸಕಲೇಶಪುರ ತಾಲೂಕು ಕೆಂಚನ ಕುಮಾರಿ, ಕಾಡುಮನೆ ಇನ್ನೂ ಮುಂತಾದ ರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ಯೋಜನೆ ಬರುವುದರಿಂದ ಮತ್ತು ಯೋಜನೆಯಲ್ಲಿ ಪೂರ್ವಕ್ಕೆ ತಿರುಗಿಸಲು ಉದ್ದೇಶಿಸಲಾಗಿರುವ ಎತ್ತಿನಹೊಳೆ, ಕೇರಿಹೊಳೆ, ಹೊಂಗಡಹಳ್ಳ ಹೊಳೆ, ಕಾಗಿನಹರೆ ರಕ್ಷಿತಾರಣ್ಯ, ಕೆಂಪುಹೊಳೆ ರಕ್ಷಿತಾರಣ್ಯ, ಕಬ್ಬಿನಾಲೆ ರಕ್ಷಿತಾರಣ್ಯ ಮುಂತಾದ ದಟ್ಟ ಅರಣ್ಯಗಳೊಳಗೆ ಹರಿದು ಹೋಗುವುದರಿಂದ ಅಲ್ಲಿನ ವನ್ಯಜೀವಿಗಳು, ಸಸ್ಯ ಪ್ರಭೇದಗಳು, ಜಲಚರಗಳು ಮುಂತಾದುವುಗಳ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುವುದರಿಂದ ಅದು ಕುಡಿಯುವ ನೀರಿನ ಯೋಜನೆ ಯಾದರೂ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಅರಣ್ಯ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಎತ್ತಿನಹೊಳೆ ತಿರುವು ಯೋಜನೆಯ ಅನುಷ್ಠಾನಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಈ ಎರಡೂ ಅನುಮತಿಗಳನ್ನು ಪಡೆದುಕೊಳ್ಳದೆ ಕಾನೂನು ಬಾಹಿರವಾಗಿ ಯಾವುದೇ ಕಾರಣಕ್ಕೂ ಎತ್ತಿನಹೊಳೆ ತಿರುವು ಯೋಜನೆಗೆ ಸಾಮಾಜಿಕ ನ್ಯಾಯದ ಪ್ರತಿಪಾದಕರಾದ ಪ್ರಜ್ಞಾವಂತ ಜನಪ್ರಿಯ ಮುಖ್ಯಮಂತ್ರಿಗಳಾದ ತಾವು ಶಂಕುಸ್ಥಾಪನೆ ಮಾಡಬಾರದಾಗಿ ಮನವಿ ಮಾಡಿದ್ದಾರೆ.
ಬಯಲು ಪ್ರದೇಶದ ಜನರಿಗೆ ನೀರು ಕೊಡುವ ಉದ್ದೇಶದಿಂದ ಮಲೆನಾಡು, ಕರಾವಳಿ ಪ್ರದೇಶದ ಜನರ ಹಕ್ಕುಗಳಿಗೆ ಚ್ಯುತಿಬಾರದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ನಿಮ್ಮ ಮೇಲಿರುವುದರಿಂದ ಮಲೆನಾಡು ಮತ್ತು ದಕ್ಷಿಣ ಕನ್ನಡ ಪ್ರದೇಶದ ಜನರ ಸಂವಿಧಾನಿಕ ಹಕ್ಕುಗಳನ್ನು ತಾವು ಗೌರವಿಸಬೇಕು ಎಂದು ತಿಳಿಸಿದ್ದಾರೆ. ವನ್ಯ ಜೀವಿಗಳಿಂದ ಸಮಸ್ಯೆ: ಈಗಾಗಲೇ ದಶಕಗಳಿಂದಲೂ ಮಲೆನಾಡು ಪ್ರದೇಶದಲ್ಲಿ ಕಾಡಾನೆ, ಕಾಡುಕೋಣ, ಕಾಡು ಹಂದಿ, ಚಿರತೆ, ಹುಲಿ ಮುಂತಾದ ವನ್ಯಜೀವಿಗಳಿಂದ ತೀವ್ರ ಸಮಸ್ಯೆ ಎದುರಾಗಿದೆ. ಅವುಗಳ ನಿರಂತರ ದಾಳಿಯಿಂದ ಕೋಟ್ಯಾಂತರ ರೂಪಾಯಿಗಳ ಬೆಳೆ ಹಾನಿ ಜೀವಹಾನಿಯಾಗಿದೆ. ಇದಕ್ಕೆ ವಿರುದ್ಧವಾಗಿ ಜನರ ರಕ್ಷಣೆಗಾಗಿ ವನ್ಯಜೀವಿಗಳ ಜೀವಹಾನಿಯೂ ಬಹುಸಂಖ್ಯೆಯಲ್ಲಿಯೇ ಆಗಿದೆ. ಈ ಸಮಸ್ಯೆಗೆ ಮುಖ್ಯ ಕಾರಣ ವನ್ಯಜೀವಿಗಳ ನೆಲೆಯಾದ ಕಾಡುನಾಶ ಮತ್ತು ಪಶ್ಚಿಮಘಟ್ಟದ ಒಡಲಲ್ಲಿ ನಡೆದ ಅವೈಜ್ಞಾನಿಕ ನೆಲೆಯ ಅಭಿವೃದ್ಧಿ ಕಾರ್ಯಗಳೇ ಆಗಿವೆ.
ಪಶ್ಚಿಮಘಟ್ಟಗಳು ಪ್ರಪಂಚದ 18 ಪ್ರಮುಖ ಜೀವವೈವಿಧ್ಯ ತಾಣಗಳಲ್ಲಿ ಒಂದೆಂಬುದನ್ನು ಮತ್ತು ದಕ್ಷಿಣ ಭಾರತದ ಬಹುತೇಕ ನದಿಗಳ ಮೂಲವೆಂಬುದನ್ನೂ, ಆದ್ದರಿಂದಲೇ ಇದನ್ನು ವಿಶ್ವಸಂಸ್ಥೆಯು ಜೈವಿಕ ಸೂಕ್ಷ್ಮ ತಾಣ ಎಂದು ಗುರುತಿಸಿರುವುದರ ಬಗ್ಗೆ ಸಮಿತಿ ಸದಸ್ಯರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

