ಪರಮ ಭ್ರಷ್ಟಾಚಾರ.. ಅನ್ಯಮಾರ್ಗದಲ್ಲಿ ಅನ್ನಭಾಗ್ಯ...
ಕನ್ನಡಪ್ರಭ ವಾರ್ತೆ ಹಾಸನ ಅ.8
ಅಂಗವಿಕಲರು, ವೃದ್ಧರು ಹಾಗೂ ವಿಧವೆಯರಿಗೆ ಮಾಸಾಶನ ಕಳೆದ 6 ತಿಂಗಳಿನಿಂದ ಸರಿಯಾಗಿ ಬರುತ್ತಿಲ್ಲ... ಅನ್ನಭಾಗ್ಯ ಯೋಜನೆಯ ಅಕ್ಕಿ ಅನ್ಯಮಾರ್ಗದಲ್ಲಿ ಹೋಗುತ್ತಿದೆ... ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭ್ರಷ್ಟಾಚಾರಿಗಳಾಗಿದ್ದು, ಅಧಿಕಾರಿಗಳನ್ನು ವರ್ಗಾಹಿಸಬೇಕು. ಜ್ವಲಂತ ಸಮಸ್ಯೆ ಕಾಡಾನೆ ಹಾವಳಿ ನಿಯಂತ್ರಿಸಬೇಕು ಮತ್ತು ಎತ್ತಿನ ಹೊಳೆ ಯೋಜನೆ ಕೈಬಿಡಬೇಕು.
ಈ ರೀತಿಯಾಗಿ ಜಿಲ್ಲೆಯ ಜನರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಡೆಸಿದ ಜನತಾ ದರ್ಶನದಲ್ಲಿ ಹತ್ತು ಹಲವಾರು ತಮ್ಮ ಸಮಸ್ಯೆಗಳನ್ನು ಅಲವತ್ತುಕೊಂಡದರು. ಜನತಾ ದರ್ಶನಕ್ಕೆ ಆಗಮಿಸಿದ ಸಿಎಂ ಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗೌರವ ನೀಡಲಾಯಿತು.
ಮಾಸಾಶನ ಸರಿಯಾಗಿ ಬರುತ್ತಿಲ್ಲ: ಹಾಸನಾಂಬ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಜನತಾ ದರ್ಶನದ ಸಂದರ್ಭದಲ್ಲಿ ಅಂಗವಿಕಲರು ಸಿಎಂ ಹತ್ತಿರ ಬಂದು ತಮಗೆ ಬರಬೇಕಾದ ಮಾಸಾಶನ ಸರಿಯಾಗಿ ಬರುತ್ತಿಲ್ಲ. ಶೇ.90ರಷ್ಟು ಅಂಗವೈಕಲ್ಯವಾಗಿದ್ದರೂ, ರು.400 ಮಾತ್ರ ನೀಡಲಾಗುತ್ತಿದೆ.
ಅಂಗವಿಲಕರಿಗೆ ನೀಡುವ ಸಾಲ-ಸೋಲ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಲಭ್ಯವಾಗುತ್ತಿಲ್ಲ. ಅಧಿಕಾರಿಗಳು ಕಚೇರಿಗಳಿಗೆ ಅಲೆಸುತ್ತಿದ್ದಾರೆ. ಮಧು ಹಾಗೂ ಪುಟ್ಟಸ್ವಾಮಿ ಎಂಬ ಅಂಗವಿಕಲರು ತಮಗೆ ಮಾಶಾಸನ ಸರಿಯಾಗಿ ನೀಡುಲ್ಲ ಎಂದು ಸಿಎಂ ಗೆ ದೂರು ನೀಡಿದರು.
ವೃದ್ಧರು ಹಾಗೂ ವಿಧವೆಯರೂ ಕೂಡ ತಮಗೆ ಮಾಸಿಕನ ನೀಡುವ ಮಾಶಾಸನ ಸರಿಯಾಗಿ ನೀಡುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಿಂದಿಗಳು ಹಣ ಬಂದಿದ್ದರು ಸಹ ಸರಿಯಾದ ಸಮಯಕ್ಕೆ ನೀಡದೆ ಅಲೆದಾಡಿಸುತ್ತಾರೆ. ಈ ನಿಟ್ಟಿನಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರು.
ರೈತ ಸಂಘದ ಒತ್ತಾಯ: ಚನ್ನರಾಯಪಟ್ಟಣ ಪುರಸಭೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದೆ. ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಕಳೆದ 20 ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿದೆ. ಆದೇ ರೀತಿ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಯಲ್ಲಿ ಬಡವರ ಕೆಲಸ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು, ಕೂಡಲೇ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಹಿಸುವಂತೆ ರೈತ ಸಂಘದವರು ಒತ್ತಾಯಿಸಿದರು.
ಬೆಳೆಗಳೆಡೆಗೆ ಗಮನಹರಿಸಿ: ಕಾಫಿ, ಏಲಕ್ಕಿ, ಮೆಣಸು, ಬಾಳೆ ಬೆಳೆಗಾರರ ಬೆಳೆಯು ಅತಿಯಾದ ಮಳೆಯಿಂದಾಗಿ ಸಂಪೂರ್ಣವಾಗಿ ನಾಶವಾಗಿದ್ದು, ಬೆಳೆಗಾರರ ಸಾಲವನ್ನು ಮನ್ನ ಮಾಡಬೇಕು ಎಂದು ಕಾಫಿ ಬೆಳೆಗಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಬಯಲು ಸೀಮೆ ಪ್ರದೇಶಳಿಗೆ ನೀರನ್ನು ಒದಗಿಸುವಂತಹ ನೀರಾವರಿ ನಿಗಮದ ಎತ್ತಿನಹೊಳೆ ತಿರುವು ಯೋಜನೆಗೆ ಕಾನೂನಿನ ಅನುಮತಿ ಇನ್ನೂ ಲಭ್ಯವಾಗದ ಕಾರಣ ಶಂಕುಸ್ಥಾಪನೆ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು, ಈ ಯೋಜನೆ ಕೈಬಿಡಬೇಕು ಎಂದು ಮಲೆನಾಡು ಜನಪರ ಹೋರಾಟ ಸಮಿತಿ, ಜೀವವೈವಿದ್ಯ ಸಂಸ್ಥೆ, ಪರಿಸರವಾದಿಗಳು ಸೇರಿದಂತೆ ಇತರರು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಎ.ಮಂಜು, ವೈ.ಎನ್.ರುದ್ರೇಶ್ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ, ಮುಖಂಡರಾದ ಎಸ್.ಎಂ.ಆನಂದ್, ಎಚ್.ಕೆ.ಮಹೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ್, ಜಿಲ್ಲಾಧಿಕಾರಿ ಅನ್ಬುಕುಮಾರ್, ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಸ್ಥಳದಲ್ಲೇ ಕೆಲ ಸಮಸ್ಯೆಗೆ ಪರಿಹಾರ
ಸಿಎಂ ಸಿದ್ದರಾಮಯ್ಯ ಮುಂದೆ ಅಲವತ್ತುಕೊಂಡ ಕೆಲವು ಅಂಗವಿಕರಲ ಮಾಶಾಸನವನ್ನು ಸ್ಥಳದಲ್ಲೇ ಹೆಚ್ಚಿಸುವಂತೆ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ಗೆ ಸೂಚಿಸಿದರು. ಮಂಜೇಗೌಡ ಎಂಬುವರ ಹೃದಯ ಚಿಕಿತ್ಸೆಗೆ 50 ಸಾವಿರ ನೀಡುವ ಹಾಗೂ ಇತರೆ ಎಲ್ಲಾ ಸಾರ್ವಜನಿಕರ ಸಮಸ್ಯೆಗಳನ್ನು ವಿಂಗಡಿಸಿ ಪರಿಶೀಲಿಸಿ ಪರಿಹರಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.
ಒಂದೂವರೆ ತಾಸು ತಡ
ಸಿದ್ದರಾಮಯ್ಯ ಅಧಿಕಾರವಹಿಸಿಕೊಂಡ ನಂತರ ಮೊದಲ ಬಾರಿಗೆ ಜಿಲ್ಲೆಗೆ ಆಗಸಿದ್ದರಿಂದ ಜಿಲ್ಲೆಯ ಜನತೆ ಕಾದು ಕಾದು ಸುಸ್ತಾದರು. ಬೆಳಗ್ಗೆ 11ಕ್ಕೆ ನಡೆಯಬೇಕಾದ ಜನತಾ ದರ್ಶನ ಕಾರ್ಯಕ್ರಮ ಮಧ್ಯಾಹ್ನ 12.30ಕ್ಕೆ ಪ್ರಾರಂಭವಾಯಿತು. ಸುಮಾರು ಒಂದುವರೆ ತಾಸಿಗೂ ಹೆಚ್ಚು ಕಾಲ ತಡವಾಗಿ ಕಾರ್ಯಕ್ರಮ ಪ್ರಾರಂಭವಾಗಿದ್ದರಿಂದ ಅಂಗವಿಲಕರು, ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಕಾದು ಕಂಗಾಲಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

