ಯಾರೊಂದಿಗೂ ಚುನಾವಣೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ: ಎಚ್.ಡಿ.ದೇವೇಗೌಡ
ಕ.ಪ್ರ. ವಾರ್ತೆ ಹಾಸನ ಅ. 14
ಮುಂದಿನ ಲೋಕಸಭಾ ಚುನಾವಣೆಗೆ ನವೆಂಬರ್ ಅಂತ್ಯದೊಳಗೆ ಅಭ್ಯರ್ಥಿಗಳ ಅಯ್ಕೆ ಮಾಡುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ನಾಯಕ ಎಚ್.ಡಿ.ದೇವೇಗೌಡರು ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಎಲ್ಲಾ ಕ್ಷೇತ್ರಗಳಲ್ಲಿ ಅರ್ಹ ಹಾಗೂ ಪ್ರಬಲ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನವೆಂಬರ್ ಅಂತ್ಯದೊಳಗೆ ನಡೆಸಲಾಗುತ್ತದೆ ಎಂದ ಅವರು, ಈ ಬಾರಿ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣೆ ಮಾಡಿಕೊಳ್ಳುವಂತಹ ಪ್ರಶ್ನೆಯೇ ಇಲ್ಲ ಎಂದು ಸ್ವಷ್ಟಪಡಿಸಿದರು.
ಈಗಾಗಲೇ ಹಲವು ಜಿಲ್ಲೆಗಳ ಪ್ರವಾಸವನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹಲವು ಜಿಲ್ಲೆಗಳ ಪ್ರವಾಸವನ್ನು ಕೈಗೊಂಡು ಪಕ್ಷ ಸಂಘಟನ ಕಾರ್ಯ ನಡೆಸುವುದಾಗಿ ಹೇಳಿದರು.
ಸರ್ಕಾರದಿಂದ ತಾರತಮ್ಯ ಸಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವುದಾಗಿ ಹೇಳಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಅಭ್ಯಂತರವಿಲ್ಲ. ನಾನು ಪ್ರಧಾನಿ ಹಾಗೂ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಸಮುದಾಯದವರನ್ನು ಗಣನೆಗೆ ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸರ್ಕಾರ ಯಾವುದೇ ಕಾರಣಕ್ಕೂ ತಾರತಮ್ಯ ಮಾಡಬಾರದು ಎಂದ ಅವರು, ಈ ತಿಂಗಳ 27 ಮತ್ತು 28ರಂದು ಕಾಫಿ ಬೋರ್ಡ್ ಮತ್ತು ರೈಲ್ವೆ ಇಲಾಖೆ ಸೇರಿದಂತೆ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸುವುದಾಗಿ ಹೇಳಿದರು.
ಪರಿಹಾರ ಸಮರ್ಪಕವಾಗಿಲ್ಲ: ಜಾನುವಾರುಗಳಿಗೆ ಕಾಲುಬಾಯಿ ರೋಗ ಸಂಬಂಧ ಸರ್ಕಾರ ನೀಡುತ್ತಿರುವ ಪರಿಹಾರ ಸಮರ್ಪಕವಾಗಿಲ್ಲ. ರೈತರು ಪರಿಹಾರವನ್ನು ಪಡೆದುಕೊಳ್ಳಬೇಕಾದರೆ ವೈದ್ಯರಿಂದ ದೃಢೀಕರಣ ಪತ್ರ ಹಾಗೂ ವಿಮೆ ಮಾಡಿಸಿದಂತಹ ರೈತರಿಗೆ ಮಾತ್ರ ಸರ್ಕಾರ ನೀಡುವಂತಹ ಪರಿಹಾರ ಲಭ್ಯವಾಗಲಿದೆ. ಇದರಿಂದ ಕಾಲುಬಾಯಿ ರೋಗಕ್ಕೆ ತುತ್ತಾದಂತಹ ರಾಸುಗಳ ಮಾಲೀಕರಿಗೆ ಪರಿಹಾರ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂದು ನುಡಿದರು.
ಕಾಡಾನೆ ಸಮಸ್ಯೆ ನಿಯಂತ್ರಣಕ್ಕೆ ಬಿದಿರು, ಹಲಸು ಬೆಳೆಸಿ: ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವಂತಹ ಮಾನವ-ಕಾಡಾನೆಗಳ ನಡುವಿನ ಸಂಘರ್ಷವನ್ನು ನಿಯಂತ್ರಣಕ್ಕೆ ತರಲು ಕಾಡಾನೆಗಳು ಇರುವಂತಹ ಭಾಗದಲ್ಲಿ ಹೆಚ್ಚಾಗಿ ಬಿದಿರು ಹಾಗೂ ಹಲಸಿನಹಣ್ಣನ್ನು ಬೆಳೆಸಬೇಕು ಹಾಗೂ ಈ ಭಾಗದಲ್ಲಿ ಸುತ್ತಲು ಫೆನ್ಸಿಂಗ್ ಹಾಕುವ ಮೂಲಕ ತಕ್ಕಮಟ್ಟಿಗೆ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದಾಗಿದೆ ಎಂದರು.
ಅರಕಲಗೂಡಿನಲ್ಲಿ ಅ.26ರಂದು ನಡೆಯುವ ಕಾರ್ಯಕ್ರಮ ನ್ಯಾಯಾಧೀಶರೊಂದಿಗಿನದಾಗಿದ್ದು, ನ್ಯಾಯಾಧೀಶರಿರುವಂತಹ ವೇದಿಕೆ ಹಂಚಿಕೊಂಡರೆ ಬೇರೆ ಅರ್ಥ ಕಲ್ಪಿಸುವುದರಿಂದ ನಾನು ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದರು.
ಮಾಜಿ ಸೈನಿಕರ ಭವನ ನಿರ್ಮಾಣಕ್ಕೆ ಕೋಟಿ ಸಂಗ್ರಹ: ಭರವಸೆ
ಹಾಸನ: ಮಾಜಿ ಸೈನಿಕರ ಭವನ ನಿರ್ಮಾಣಕ್ಕೆ ಜೆಡಿಎಸ್ ವತಿಯಿಂದ 1 ಕೋಟಿ ರು. ಸಂಗ್ರಹಿಸಿ ನೀಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭರವಸೆ ನೀಡಿದರು. ನಗರದಲ್ಲಿ ಜಿಲ್ಲಾ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿಯಿಂದ ಸೋಮವಾರ ನಡೆದ ಸೈನಿಕ ಭವನ ಕಟ್ಟಡ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭ ಉದ್ಘಾಟಸಿ ಮಾತನಾಡಿದ ಅವರು, ದೇಶವನ್ನು ಕಾಯುವಂತಹ ಸೈನಿಕರ ನೆರವಿಗೆ ನಿಲ್ಲಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಾಜಿ ಸೈನಿಕರ ಭವನ ನಿರ್ಮಾಣಕ್ಕೆ ನಮ್ಮ ಪಕ್ಷದ ಶಾಸಕರ ತಲಾ 10 ಲಕ್ಷ ರು.ಅನುದಾನವನ್ನು ಸಂಗ್ರಹಿಸಿ ಕೋಟಿ ರು. ನೀಡುವುದಾಗಿ ಹೇಳಿದರು.
ಮಳೆ, ಗಾಳಿ, ಚಳಿ ಬಿಸಿಲೆನ್ನದೆ ದೇಶವನ್ನು ಕಾಯುವಂತಹ ಯೋಧರಿಗಾಗಿ ಹುತಾತ್ಮರ ಸ್ಥೂಪವನ್ನು ನಿರ್ಮಿಸುವ ಮೂಲಕ ಸೈನಿಕರಿಗೆ ಗೌರವ ಸಲ್ಲಿಸಬೇಕು. ಸೈನಿಕರ ಜನತೆಯ ಪ್ರಾಣವನ್ನು ಕಾಪಾಡುತ್ತಾರೆ. ಅಂತಹ ಯೋಧರಿಗೆ ನಾವು ಗೌರವ ಸಲ್ಲಿಸಬೇಕು ಎಂದರು. ಲಾಲ್ ಬಹದ್ದೂರ್ ಶಾಸ್ತ್ರಿಯವರು ಸೈನಿಕರು ಹಾಗೂ ಮಾಜಿ ಸೈನಿಕರ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದರು. ಅದೇ ರೀತಿ ನಾನು ರಾಜ್ಯದಲ್ಲಿ ಪ್ರತ್ಯೇಕ ಕರ್ನಾಟಕ ಬೆಟಾಲಿಯನ್ ನಿರ್ಮಿಸಲು ಸಾಕಷ್ಟು ಪ್ರಯತ್ನಿಸಿದೆ. ಅದರೆ ಪ್ರಧಾನಿಯಾಗಿ 11 ತಿಂಗಳು ಹಾಗೂ ಮುಖ್ಯಮಂತ್ರಿಯಾಗಿ 14 ತಿಂಗಳ ಮಾತ್ರ ಅಧಿಕಾರದಲ್ಲಿದ್ದರಿಂದ ಈ ಕಾರ್ಯಕ್ಕೆ ಅಡಚಣೆಯಗಳು ಉಂಟಾದವು ಎಂದು ಹೇಳಿದರು.
ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟ ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ. ಆದರೆ ಅವರಿಗೆ ಇಂದಿಗೂ ಸಹ ಸರಿಯಾಗಿ ಪರಿಹಾರಗಳು ಲಭ್ಯವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು, ಎಲ್ಲಾ ಸೈನಿಕರಿಗೂ ಸರಿಯಾಗಿ ಪರಿಹಾರಗಳು ಲಭ್ಯವಾಗಬೇಕು ಹಾಗೂ ಸೌಲಭ್ಯಗಳು ಸಹ ದೊರೆಯುಂತಾಗಬೇಕು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

