ಹಾಸನ

ಕೋಡಿಮಠದ ಸ್ವಾಮೀಜಿ - ಸೋಮಣ್ಣ ರಹಸ್ಯ ಮಾತುಕತೆ

Published On :

ಅರಸೀಕೆರೆ: ಮಾಜಿ ಸಚಿವ ವಿ. ಸೋಮಣ್ಣ ಶನಿವಾರ ಸುಕ್ಷೇತ್ರ ಕೋಡಿಮಠಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯೊಂದಿಗೆ ಕೆಲ ಕಾಲ ರಹಸ್ಯ ಮಾತುಕತೆ ನಡೆಸಿದರು.
ಈ ರಹಸ್ಯ ಮಾತುಕತೆಯಲ್ಲಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಸೇರ್ಪಡೆಯಾಗುವರೇ ಅವರ ಆಗಮನದಿಂದ ಆ ಪಕ್ಷಕ್ಕೆ ಅನುಕೂಲವಾಗುವುದೆ, ತಾವು ಬಿಜೆಪಿಯಲ್ಲಿ ಮುಂದುವರಿಯುವುದು ಸೂಕ್ತವೇ ಇಲ್ಲವೇ ಹಾಗೂ ನರೇಂದ್ರ ಮೋದಿ ಪ್ರಧಾನಿಯಾಗುವರೇ ಇವೇ ಮುಂತಾದ ವಿಚಾರಗಳ ಬಗ್ಗೆ ಸ್ವಾಮೀಜಿ ಜತೆ ಮಾಜಿ ಸಚಿವರು ರಹಸ್ಯ ಮಾತುಕತೆ ನಡೆಸಿದರು ಎನ್ನಲಾಗಿದೆ.
ಕೋಡಿಮಠ ಭೇಟಿ ಬಗ್ಗೆ ಸೋಮಣ್ಣ ಉತ್ತರಿಸಿ, ನಾನು ಈ ಹಿಂದಿನಿಂದಲೂ ಕೋಡಿಮಠದ ಭಕ್ತನಾಗಿ ಹಲವಾರು ಬಾರಿ ಭೇಟಿ ನೀಡಿದ್ದೀನಿ. ಈ ಬಾರಿಯೂ ಸ್ವಾಮೀಜಿ ಆಶೀರ್ವಾದ ಪಡೆದು ಶಿವಲಿಂಗಜ್ಜಯ್ಯನವರ ಗದ್ದುಗೆಗೆ ನಮಿಸಲು ಬಂದಿದ್ದೇನೆಯೇ ಹೊರತು ಇದರಲ್ಲಿ ಯಾವುದೇ ರಾಜಕಾರಣ ಇಲ್ಲ ಎಂದರು.
ಕುತೂಹಲ ಮೂಡಿಸಿದ ಭೇಟಿ: ಬಿಜೆಪಿ ಆಂತರಿಕ ಕಚ್ಚಾಟ ಹಾಗೂ ಪಕ್ಷದ ಇಬ್ಭಾಗದಿಂದ ಬೇಸತ್ತು ಪಕ್ಷದಿಂದ ಹೊರನಡೆದು ಕಾಂಗ್ರೆಸ್ ಸೇರಿದ್ದ ಜಿಪಂ ಮಾಜಿ ಅಧ್ಯಕ್ಷ ಗೀಜಿಹಳ್ಳಿ ಗುರುಸಿದ್ದಪ್ಪ ಹಾಗೂ ತಾ. ಬಿಜೆಪಿ ಮಾಜಿ ಅಧ್ಯಕ್ಷ ಕಾಟೀಕೆರೆ ಪ್ರಸನ್ನಕುಮಾರ್  ಅವರು ಸೋಮಣ್ಣರನ್ನು ಭೇಟಿ ಮಾಡಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಸೋಮಣ್ಣ ಸುದ್ದಿಗೋಷ್ಠಿ ವೇಳೆ ತಾವು ಕಾಂಗ್ರೆಸ್‌ನಲ್ಲಿ ರಾಜನಾಗಿ ಮೆರೆಯುತ್ತಿದ್ದೆ. ಅದನ್ನೆಲ್ಲ ತೊರೆದು ಯಡಿಯೂರಪ್ಪನವರ ಹಿಂದೆ ಬಂದು ಬಿಜೆಪಿ ಸೇರಿದೆ ಎಂದು ಹೇಳಿದ್ದು, ಹಾಗೂ ಕೋಡಿಮಠದಲ್ಲಿ ಔಪಚಾರಿಕವಾಗಿ ಮಾತನಾಡುವಾಗ ಮನೆಮನೆಗೆ ತೆರಳಿ ಚಪಾತಿ ಎತ್ತುವ ಸಂಸ್ಕೃತಿಯನ್ನು ಬಿಜೆಪಿ ಇನ್ನೂ ಬಿಟ್ಟಿಲ್ಲ, ಈ ಚಡ್ಡಿಗಳ ಕಾಟ ಸಾಕಾಗಿದೆ ಎಂದಿದ್ದು ಕಾರ್ಯಕರ್ತರನ್ನು ಸೌಜನ್ಯಕ್ಕಾದರೂ ವಿಶ್ವಾಸದಿಂದ ಮಾತನಾಡಿಸದಿದ್ದುದು ಕಾರ್ಯಕರ್ತರ ಮುನಿಸಿಗೆ ಕಾರಣವಾಗಿತ್ತು.
ಇದರಿಂದ ಕೆರಳಿದ ಅನೇಕ ಕಾರ್ಯಕರ್ತರು ಕಾಂಗ್ರೆಸ್‌ನಲ್ಲಿ ಸೋತು ಸುಣ್ಣವಾಗಿ ಮನೆ ಸೇರಿದ್ದ ಸೋಮಣ್ಣನನ್ನು ಬಿ.ಎಸ್.ವೈ ಕರೆತಂದು ಮಂತ್ರಿ ಮಾಡಿ ಈಗ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದ್ದಾರೆ. ಆದರೂ ಪಕ್ಷದ ಬಗ್ಗೆ ಇವರಿಗೇ ಗೌರವವಿಲ್ಲ. ಇವರು ಕಾಂಗ್ರೆಸ್ ಸೇರಲು ಜ್ಯೋತಿಷ್ಯ ಕೇಳಲು ಬಂದಿದ್ದಾರೆ ಎಂದು ಜರಿದ ಕಾರ್ಯಕರ್ತರು ವಿ.ಸೋಮಣ್ಣ ಜ್ಯೋತಿಷ್ಯ ಕೇಳಲು ಹೋದ ತಕ್ಷಣವೇ ಹೇಳದೆ ಕೇಳದೆ ವಾಪಸ್ಸಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.