ಕಾಲುಬಾಯಿ ಜ್ವರ ಸೋಂಕಿತ ಜಿಲ್ಲೆಗಳಿಂದ ರಾಸು ಖರೀದಿಸದಿರಿ
ಕ.ಪ್ರ. ವಾರ್ತೆ ಹೊಳೆನರಸೀಪುರ ಅ.20
ಕಾಲು ಬಾಯಿ ಜ್ವರ ಜಿಲ್ಲೆ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಆ ಜಿಲ್ಲೆಗಳಿಂದ ರಾಸುಗಳನ್ನು ಖರೀದಿಸದಿರುವಂತೆ ಪಶು ವೈದ್ಯಕೀಯ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಡಾ.ಮುರಳೀಧರ್ ತಾಲೂಕಿನ ರೈತರಿಗೆ ಕಿವಿಮಾತು ಹೇಳಿದರು.
ತಾಲೂಕಿನ ಶ್ರವಣೂರು ಹಾಗೂ ಕಡವಿನಬಾಚಹಳ್ಳಿ ಗ್ರಾಮಗಳಲ್ಲಿ ತಾಲೂಕಿನ ಪಶು ಸಂಗೋಪನಾ ಇಲಾಖೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾನುವಾರುಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಾಲು ಬಾಯಿ ರೋಗಗಳಿಗೆ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ಲಸಿಕಾ ಕಾರ್ಯಕ್ರಮ ನಡೆಸಲಾಗಿದೆಯಾದರೂ ಶೇ.100ರಷ್ಟು ಪ್ರಗತಿಯಾಗದ ಕಾರಣದಿಂದಾಗಿ ಉಚಿತ ಆರೋಗ್ಯ ತಪಾಸಣಾ ಹಾಗು ಲಸಿಕಾ ಶಿಬಿರವನ್ನು ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ರೈತರು ಇಂತಹ ಶಿಬಿರಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು. ಜೊತೆಗೆ ಪಶುಪಾಲನಾ ಇಲಾಖೆಯಲ್ಲಿ ನೀಡಲಾಗುವ ನಾನಾ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಅವರು ರೈತರಿಗೆ ಕರೆ ನೀಡಿದರು.
ಕೃಷಿ ಅಧಿಕಾರಿ ಚಂದ್ರಪ್ಪ ಮಾತನಾಡಿ, ದೇಶದ ಕೃಷಿ ಅನಾದಿ ಕಾಲದಿಂದಲೂ ಗೋವುಗಳ ಆಧಾರಿತವಾಗಿದ್ದು, ಭೀಕರ ರೋಗಗಳು ಹಾಗೂ ಯಾಂತ್ರೀಕೃತ ಜೀವನ ಕ್ರಮದಿಂದಾಗಿ ಗೋ ತಳಿಗಳು ಅಪಾಯದಲ್ಲಿದ್ದು, ಅವುಗಳ ರಕ್ಷಣೆಗೆ ಹಾಗೂ ಕೃಷಿಕರ ಶ್ರೇಯೋಭಿವೃದ್ಧಿಗೆ ಗ್ರಾಮಾಭಿವೃದ್ಧಿ ಯೋಜನೆಯು ಅವಿರತವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಶಿಬಿರದಲ್ಲಿ ಬರಡು ರಾಸುಗಳ ಪರೀಕ್ಷೆ ಹಾಗೂ ಚಿಕಿತ್ಸೆ, ಜಂತುನಾಶಕ ಔಷಧಿ ಉಚಿತವಾಗಿ ವಿತರಿಸಲಾಯಿತು. ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಚೌಡಯ್ಯ, ಬಸವರಾಜಪ್ಪ, ಧನಲಕ್ಷ್ಮೀ, ಶಿವರಾಜ್, ತಿಮ್ಮಪ್ಪ ಭಾಗವಹಿಸಿದ್ದರು. ಯೋಜನೆಯ ವಲಯ ಮೇಲ್ವಿಚಾರಕ ಜಯರಾಂ, ಸೇವಾ ಪ್ರತಿನಿಧಿ ವಸಂತಕುಮಾರಿ, ಸುಗುಣ ಹಾಜರಿದ್ದರು. ಶಿಬಿರದಲ್ಲಿ 200ಕ್ಕೂ ಹೆಚ್ಚು ರಾಸುಗಳನ್ನು ಪರೀಕ್ಷಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

