ಅರಸೀಕೆರೆ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಸಿದ್ಧತೆ: ಶಾಸಕ
ಅರಸೀಕೆರೆ: ತಾಲೂಕು ಜನತೆಯ ತುಂಬು ಹೃದಯದ ಸಹಕಾರದಿಂದ 72ನೇ ವರ್ಷದ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವವನ್ನು ಅತ್ಯಂತ ವೈಭವಯುತವಾಗಿ ನೆರವೇರಿಸಲು ಸಕಲ ರೀತಿಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಉತ್ಸವ ಸಮಿತಿ ಗೌರವಾಧ್ಯಕ್ಷ ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದ ಭಾಗವಹಿಸಿದ್ದ ಅವರು ನಂತರ ಸುದ್ದಿಗಾರರ ಜತೆ ಮಾತನಾಡಿದರು. ಸುಮಾರು 72 ವರ್ಷದ ಇತಿಹಾಸವುಳ್ಳ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ ರಾಜ್ಯದಲ್ಲಿಯೇ ಅತ್ಯಂತ ಹೆಸರುವಾಸಿಯಾಗಿದ್ದು, ಮತ್ತೆ ಅಂತಹ ಗತಕಾಲದ ವೈಭವವನ್ನು ಮರುಕಳಿಸುವಂತೆ ಮಾಡುವ ಸಲುವಾಗಿ ಕಳೆದ ವರ್ಷ ಅನೇಕ ವೈವಿಧ್ಯ ಪೂರ್ಣವಾದ ವಾದ್ಯತಂಡಗಳು, ಸಾಂಸ್ಕೃತಿಕ ಕಲಾ ತಂಡಗಳು ಹಾಗೂ ನೃತ್ಯ ಪ್ರದರ್ಶನಗಳನ್ನು ಮಹೋತ್ಸವದಲ್ಲಿ ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ಆದರೆ ಕ್ಷುಲ್ಲಕ ಕಾರಣಕ್ಕಾಗಿ ಉಂಟಾದ ಗಲಾಟೆ ಒಂದು ರೀತಿ ಕಪ್ಪು ಚುಕ್ಕೆಯಾಗಿದ್ದು, ಅಂತಹ ಘಟನೆಯು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ ಅ.25 ಶುಕ್ರವಾರ ಸಂಜೆ 4 ಗಂಟೆಗೆ ತಿಪಟೂರಿನ ಮಣಿಕಂಠ ಪ್ಲವರ್ ಡೆಕೋರೇಟರ್ ನಿರ್ಮಿಸಿರುವ ವಿವಿಧ ಬಗೆಯ ಪುಷ್ಪಾಲಂಕೃತ ರಥದಲ್ಲಿ ಪ್ರಾರಂಭವಾಗುವುದು. 26 ಶನಿವಾರ ಸಂಜೆ ಕಂತೇನಹಳ್ಳಿ ಸಮೀಪದ ಕೆರೆಯಲ್ಲಿ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ನಂತರ ಗಣಪತಿಯನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿಸರ್ಜನೆ ಮಾಡಲಾಗುವುದು ಎಂದು ಹೇಳಿದರು.
ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ, ಈ ಬಾರಿ ವಿಸರ್ಜನಾ ಮಹೋತ್ಸವವನ್ನು ಆದ್ದೂರಿಯಾಗಿ ಆಚರಿಸುವ ಹಿನ್ನೆಲೆಯಲ್ಲಿ ಅನೇಕ ಕಲಾ ತಂಡಗಳನ್ನು ಆಹ್ವಾನಿಸುತ್ತಿದ್ದು, ಮಡಿಕೇರಿಯ ಟ್ಯಾಬ್ಲೋ, ಕೇರಳ ಚಂಡೇ ವಾದ್ಯ, ಹೆಗ್ಗೋಡಿನ ಮಹಿಳೆಯರ ಡೊಳ್ಳು ಕುಣಿತ, ಮಂಗಳೂರಿನ ಹುಲಿವೇಷ, ಬೆಂಗಳೂರಿನ ಅಣ್ಣಮ್ಮದೇವಿ ತಮಟೆ ವಾದ್ಯ ತಂಡ, ನಾಗಮಂಗಲದ ಮಹದೇವಯ್ಯ ಅವರ ವೀರಭದ್ರದೇವರ ಕುಣಿತ, ತಮಿಳುನಾಡಿನ ತಂಜಾವೂರಿನ ಕೀಲುಕುದುರೆ ನರ್ತನ, ನಾಯಂಡಿ ಮೇಳ ಸೇರಿದಂತೆ 25ಕ್ಕೂ ಹೆಚ್ಚಿನ ಕಲಾತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಮತ್ತಷ್ಟು ರಂಗುಗೊಳಿಸುವಂತೆ ಮಾಡುತ್ತವೆ ಎಂದು ತಿಳಿಸಿದರು.
ಮಾಜಿ ಶಾಸಕ ಎ.ಎಸ್.ಬಸವರಾಜು ಮಾತನಾಡಿ ಕಾರ್ಯಕ್ರಮದಲ್ಲಿ ಜಾತಿ ಧರ್ಮಗಳ ಭೇದ ಭಾವ ಇಲ್ಲದೆ ಅನೇಕ ವರ್ಷಗಳಿಂದ ಎಲ್ಲರೂ ಕೂಡಿ ನಡೆಸಿಕೊಂಡು ಬಂದಿದ್ದಾರೆ. ಕಳೆದ ವರ್ಷದ ಕಹಿಘಟನೆಯನ್ನು ಎಲ್ಲರೂ ಮರೆತು ಅತ್ಯಂತ ಸಡಗರ ಸಂಭ್ರಮದಿಂದ ಈ ಮಹೋತ್ಸವವನ್ನು ವೈಭವಪೂರ್ಣವಾಗಿ ಆಚರಣೆ ಮಾಡಬೇಕಾಗಿದೆ ಎಂದು ನುಡಿದರು.
ಪುರಸಭೆ ಅಧ್ಯಕ್ಷ ಮೋಹನ್ಕುಮಾರ್ ಹಾಗೂ ವಿಸರ್ಜನಾ ಮಹೋತ್ಸವ ಸಮಿತಿ ಗೌರವ ಕಾರ್ಯದರ್ಶಿ ಉದ್ಯಮಿ ಬಿ.ಎಸ್.ಅರುಣ್ಕುಮಾರ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷ ಎಸ್.ಎನ್.ಸುಬ್ಬಣ್ಣ, ರಾಜಣ್ಣ, ಶಾಂತವೀರಪ್ಪ, ನಾಗಭೂಷಣ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

