ಕ್ಷುಲ್ಲಕ ಕಾರಣಕ್ಕಾಗಿ ಆಟೋ ಚಾಲಕನಿಂದ ಮತ್ತೊಬ್ಬ ಚಾಲಕನಿಗೆ ಚಾಕುವಿನಿಂದ ಇರಿತ
ಕನ್ನಡಪ್ರಭ ವಾರ್ತೆ ಹಾಸನ ಸೆ.1
ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕ ಮತ್ತೊಬ್ಬ ಆಟೋ ಚಾಲಕನಿಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆಟೋ ಚಾಲಕ ಮಧು ಹಲ್ಲೆಗೊಳಗಾಗಿದ್ದು, ಇದೀಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2-3 ದಿನದ ಹಿಂದೆ ಮಂಜುನಾಥ್ ಎಂಬವರು ಹೊಸ ಬಸ್ನಿಲ್ದಾಣದಲ್ಲಿ ಮಹಿಳೆಯೊಬ್ಬರನ್ನು ಆಟೋದಲ್ಲಿ ಕೂರಿಸಿಕೊಂಡು ಬಾಡಿಗೆ ಹೊರಡುವ ಸಂದರ್ಭದಲ್ಲಿ ಚನ್ನಪಟ್ಟಣದ ನಿವಾಸಿ ಆಟೋ ಚಾಲಕ ಪಾಪಣ್ಣಿ ಸ್ಥಳಕ್ಕೆ ಬಂದು ಏಕಾಏಕಿ ಅವಾಚ್ಯ ಪದಗಳಿಂದ ಮಂಜುನಾಥನನ್ನು ನಿಂದಿಸಿದ್ದಾನೆ.
ಈ ಜಗಳವನ್ನು ಬಿಡಿಸಲು ಮಂಜುನಾಥನ ಸಹೋದರ ಮಧು ಹೋಗಿದ್ದಾನೆ. ಇದರಿಂದ ಇನ್ನೂ ಕುಪಿತಗೊಂಡ ಪಾಪಣ್ಣಿ ಮಧುನನ್ನು ಕೊಲೆ ಮಾಡುವುದಾಗಿ ಬೆದರಿಸಿ ತನ್ನ ಆಟೋದಲ್ಲಿದ್ದ ಚಾಕು ತಂದು ಮಧು ದೇಹದ ಎಡ ಪಕ್ಕೆ ಹಾಗೂ ಇತರೆಡೆ ಇರಿದಿದ್ದಾನೆ ಎಂದು ಸಂಬಂಧಿಕರು ದೂರಿದ್ದಾರೆ.
ಇರಿತ ಘಟನೆ ನಡೆದ ಕೂಡಲೇ ನಗರದ ಸರ್ಕಾರಿ ಆಸ್ಪತ್ರೆಗೆ ಮಧುನನ್ನು ಸೇರಿಸಲಾಯಿತು. ತೀವ್ರ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಧು ಅವರನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಬಗ್ಗೆ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆರೋಪಿ ಪಾಪಣ್ಣಿಯನ್ನು ಇನ್ನೂ ಬಂಧಿಸಿಲ್ಲ. ತಕ್ಷಣ ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕಾಗಿ ಮಧು ಸಂಬಂಧಿಕರು ಆಗ್ರಹಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು
ಅರಕಲಗೂಡು: ತಾಲೂಕಿನ ಕೊಣನೂರಿನಲ್ಲಿ ಶನಿವಾರ ಮ್ಯಾಕ್ಸಿಕ್ಯಾಬ್ ಹಾಗೂ ಮಾರುತಿ ಓಮ್ನಿ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಗಾಯಗೊಂಡಿದ್ದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದಾರೆ. ಕೊಣನೂರು ಹೋಬಳಿಯ ಮಾದಾಪುರ ಗ್ರಾಮದ ರಾಮಶೇಷ (65) ಮೃತಪಟ್ಟ ದುರ್ದೈವಿ.
ರಾಮಶೇಷ ಅವರು ಮಾರುತಿ ಓಮಿನಿ ಕಾರಿನಲ್ಲಿ ಸ್ನೇಹಿತ ಚಂದ್ರೇಗೌಡ ಅವರನ್ನು ಕೂರಿಸಿಕೊಂಡು ಕೊಣನೂರು ಸೊಸೈಟಿ ಮುಂದೆ ಹೋಗುತ್ತಿದ್ದರು. ಆಗ ಎದುರಿನಿಂದ ಬಂದ ಮ್ಯಾಕ್ಸಿಕ್ಯಾಬ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ್ದಾನೆ.
ಇದರಿಂದ ರಾಮಶೇಷ ಮತ್ತು ಚಂದ್ರೇಗೌಡ ತೀವ್ರ ಗಾಯಗೊಂಡರು. ಇಬ್ಬರನ್ನು ಕೊಣನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ರಾಮಶೇಷ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ಚಂದ್ರೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಬೈಕ್ ಕಳ್ಳರ ಬಂಧನ
ಅರಸೀಕೆರೆ: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಾಣಾವರ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ ಕಾರೇಹಳ್ಳಿ ಗ್ರಾಮದ ರಂಗನಾಥ್ (23) ಹಾಗೂ ಮಂಜುನಾಥ (25) ಬಂಧಿತ ಆರೋಪಿಗಳು.
ಬಾಣಾವರದ ಗವಿಮಠದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಪಿಐ ಗಂಗಾಧರಪ್ಪ ಮತ್ತು ಪಿಎಸ್ಐ ನರೇಂದ್ರಕುಮಾರ್ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಅರಸೀಕೆರೆ ಕಡೆಯಿಂದ ಈ ಆರೋಪಿಗಳು ಹಿರೋಹೊಂಡಾದಲ್ಲಿ ಬರುತ್ತಿದ್ದರು. ಅನುಮಾನದಿಂದ ಪೊಲೀಸರು ಪರಿಶೀಲಿಸಿಸಿದಾಗ ಬೈಕನ್ನು ಕಳವು ಮಾಡಿಕೊಂಡು ನಂಬರ್ ಪ್ಲೇಟ್ ಬದಲಾಯಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ತಕ್ಷಣವೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು,ಅವರ ಬಳಿ ಇದ್ದ 35 ಸಾವಿರ ರು. ಬೆಲೆಯ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಮದ್ಯ ಮಾರಾಟ: ಒಬ್ಬ ಬಂಧನ
ಹಳೇಬೀಡು: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಬಂಧಿಸಿರುವ ಪೊಲೀಸರು 1093 ರು. ಬೆಲೆಯ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ಶನಿವಾರ ಹೋಬಳಿಯ ಬಂಡಿಲಕ್ಕನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಬಂಡಿಲಕ್ಕನಕೊಪ್ಪಲು ಗ್ರಾಮದ ಈಶ್ವರನಾಯ್ಕ (30) ಬಂಧಿತ ಆರೋಪಿ.ಈತ ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮದ್ಯ ಮಾರಾಟಕ್ಕಿಟ್ಟಿದ್ದ 1093 ರು. ಬೆಲೆಯ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವ ಹಳೇಬೀಡು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

