ಹಾಸನ

ತೆಂಗಿನ ಇಳುವರಿ ಹೆಚ್ಚಿಸಲು ಪೋಷಕಾಂಶಗಳ ನಿರ್ವಹಣೆ

Published On :

ಕನ್ನಡಪ್ರಭ ವಾರ್ತೆ೤ ಹಾಸನ೤ ಸೆ. 5
ತೆಂಗು ಮುಖ್ಯವಾದ ತೋಟಗಾರಿಕೆ ಬೆಳೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದರ ಉತ್ಪಾದನೆ ಹಾಗೂ ಗುಣಮಟ್ಟ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಆಧುನಿಕ ಕೃಷಿಯಲ್ಲಿ ತೆಂಗಿನಲ್ಲಿ ನಿರಂತರ ಹೆಚ್ಚು ಪೋಷಕಾಂಶಗಳನ್ನು ಹೀರಿಕೊಳ್ಳುವ ಬೆಳೆಗಳಾದ ಅರಿಶಿಣ ಮತ್ತು ಶುಂಠಿಯನ್ನು ಅಂತರ ಬೆಳೆಯಾಗಿ ರೈತರು ಬೆಳೆಯುತ್ತಿರುವುದು.
 ಬೆಳೆಗೆ ಬೇಕಾದ ಶಿಫಾರಸು ಮಡಿದ ಪ್ರಮಾಣವನ್ನು ಒದಗಿಸದಿರುವುದು, ಕಾಂಪೋಸ್ಟ್ ಗೊಬ್ಬರ ಬಳಸದಿರುವುದು, ಹಸಿರೆಲೆಗೊಬ್ಬರ ಮತ್ತು ದ್ವಿದಳಧಾನ್ಯ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯದೇ ಇರುವುದು, ಲಘು ಪೋಷಕಾಂಶಗಳ ಕೊರತೆ ಮತ್ತು ತೆಂಗಿನ ಮರದ ಸುತ್ತ ನಿರಂತರ ಬೇಸಾಯ ಕ್ರಮಗಳಿಂದ ಬೇರುಗಳಿಗೆ ಗಾಯಮಾಡುವುದರಿಂದ ತೆಂಗಿನಲ್ಲಿ ಇಳುವರಿ ಗಣನೀಯವಾಗಿ ಕಡಿಮೆ ಆಗುವುದಕ್ಕೆ ಕಾರಣವಾಗಿದೆ.
 ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರವೆಂದರೆ ತೆಂಗಿನಲ್ಲಿ ಅಧಿಕ ಮತ್ತು ಗುಣಮಟ್ಟದ ಇಳುವರಿಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಅನುಸರಿಸುವುದು ಸೂಕ್ತವೆಂದು ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಎಸ್.ಚನ್ನಕೇಶವ ಡಾ. ಟಿ.ಎಸ್. ಮಂಜುನಾಥಸ್ವಾಮಿ ಮತ್ತು ಡಾ. ಅರ್. ವಿನಯ್ ಕುಮಾರ್ ತಿಳಿಸಿದರು.
ಸಾವಯವ ಗೊಬ್ಬರಗಳು - ಪ್ರತಿ ಗಿಡಕ್ಕೆ ಮತ್ತು ಪ್ರತಿ ವರ್ಷಕ್ಕೆ 30 ರಿಂದ 50 ಕಿ ಗ್ರಾ ಕೊಟ್ಟಿಗೆ ಗೊಬ್ಬರವನ್ನು ಕೊಡಬೇಕು. ಹಸಿರೆಲೆ ಗೊಬ್ಬರ  ಗೊಬ್ಬರವಾಗಿ ಸೆಣಬು, ಅಲಸಂದೆ,ಹುರುಳಿ, ಅಥವಾ ಅಪ್ಸೆಣಬನ್ನು ಗಿಡದ ಸುತ್ತಬೆಳೆದು ಹೂವಾಗುವ ಮೊದಲು ಮಣ್ಣಿಗೆ ಸೇರಿಸಬೇಕು
ಬೇವಿನ ಹಿಂಡಿ ಬಳಕೆ ಪ್ರತಿ ಗಿಡಕ್ಕೆ 1-2 ಕಿ.ಗ್ರಾಂ ಬೇವಿನಹಿಂಡಿಯನ್ನು ಕೊಡುವುದರಿಂದ ಕೀಟ ಮತ್ತು ರೋಗ ಭಾದೆಯನ್ನು ತಡೆಯಬಹುದು.
ಜೈವಿಕಗೊಬ್ಬರಗಳು: ಪ್ರತಿ ಗಿಡಕ್ಕೆ 50 ಗ್ರಾಂ ಟ್ರೈಕೋಡೆರ್ಮಾ, 50 ಗ್ರಾಂ ಮೈಕೊರೈಝ ಮತ್ತು 50 ಗ್ರಾಂ ರಂಜಕ ಕರಗಿಸುವ ಸೂಕ್ಷಾಣು ಜೀವಿಗಳನ್ನು ಕೊಟ್ಟಿಗೆ ಗೊಬ್ಬರದೊಂದಿಗೆ ಬೆರಸಿ ಗಿಡದ ಸುತ್ತ ಹಾಕಿ ಮಣ್ಣು ಮುಚ್ಚಬೇಕು.  
ರಾಸಾಯನಿಕ ಗೊಬ್ಬರ  4 ವರ್ಷದ ನಂತರದ ಮರಗಳಿಗೆ ಪ್ರತಿ ಗಿಡಕ್ಕೆ ಮುಂಗಾರಿನಲ್ಲಿ (ಜೂನ್-ಜುಲೈ) ಸಾರಜನಕ 170 ಗ್ರಾಂ (ಯೂರಿಯಾ 370 ಗ್ರಾಂ), ರಂಜಕ 120 ಗ್ರಾಂ (ಎಸ್.ಎಸ್.ಪಿ-750 ಗ್ರಾಂ) ಮತ್ತು ಪೊಟ್ಯಾಷ್ 400 ಗ್ರಾಂ (ಮ್ಯೂರೇಟ್ ಆಫ್ ಪೊಟ್ಯಾಷ್ 664 ಗ್ರಾಂ) ಪೋಷಕಾಂಶಗಳನ್ನು ಪ್ರತಿ ಮರದ ಐದು ಅಡಿಗಳ ಸುತ್ತಳತೆಯಲ್ಲಿ ಅರ್ಧ ಅಡಿ ಆಳ ತೆಗೆದು ಗೊಬ್ಬರಗಳನ್ನು ಹಾಕಿ ಮಣ್ಣು ಮುಚ್ಚಬೇಕು. ಮುಖ್ಯ ಪೋಷಕಾಂಶಗಳ ಜೊತೆಗೆ ದ್ವಿತೀಯ ಮತ್ತು ಲಘು ಪೋಷಕಾಂಶಗಳಾದ  1.0 ಕಿಗ್ರಾಂ ಜಿಪ್ಸಂ,  500 ಗ್ರಾಂ ಮೆಗ್ನೀಷಿಯಂ ಸಲ್ಫೇಟ್,150 ಗ್ರಾಂ ಸತುವಿನ ಸಲ್ಫೇಟ್ ಮತ್ತು 50 ಗ್ರಾಂ ಬೋರಾಕ್ಸ್‌ನ್ನು ಕಾಂಪೋಸ್ಟ್ ಗೊಬ್ಬರದೊಂದಿಗೆ ಬೆರಸಿ ಮಣ್ಣಿಗೆ ಹಾಕಿ ಮುಚ್ಚಬೇಕು.
 ಹಿಂಗಾರಿನಲ್ಲಿ  (ಅಕ್ಟೋಬರ್-ನವೆಂಬರ್)  330 ಗ್ರಾಂ ಸಾರಜನಕ (712 ಗ್ರಾಂ ), 200ಗ್ರಾಂ ರಂಜಕ (432 ಗ್ರಾಂ) ಮತ್ತು 800 ಗ್ರಾಂ ಪೊಟ್ಯಾಷ್ 1320 ಗ್ರಾಂ)ಗೊಬ್ಬರ ಕೊಡಬೇಕು.   
 ನೀರಾವರಿ ಮತ್ತು ಅಂತರ ಬೇಸಾಯ  ಮಣ್ಣು ಮತ್ತು ಹವಾಗುಣಕ್ಕೆ ಅನುಗುಣವಾಗಿ 5 ರಿಂದ 10 ದಿನಕ್ಕೂಮೆ ನೀರು ಹಾಯಿಸಬೇಕು. ಹನಿ ನೀರಾವರಿ ಪದ್ಧತಿಯಲ್ಲಿ ಇಳುವರಿ ಕೊಡುವ ಮರಗಳಿಗೆ ದಿನಕ್ಕೆ 40 ರಿಂದ 50 ಲೀಟರ್ ನೀರು ಒದಗಿಸುವುದು ಉತ್ತಮ.
 ಗಿಡದ ಸುತ್ತಲೂ 1.5 ರಿಂದ 2 ಮೀಟರ್ ಸುತ್ತಳತೆ ಪಾತಿಗಳನ್ನು ಮಾಡಿ ಪಾತಿಯಲ್ಲಿ ಗೊಬ್ಬರ ಮತ್ತು ನೀರು ಕೊಡುವುದು ಒಳ್ಳೆಯದು. ವರ್ಷದಲ್ಲಿ ಎರಡು ಬಾರಿ ಗಿಡಗಳ ಸಾಲುಗಳ ನಡುವೆ ಮಾಡಬೇಕು. ಅಂತರ ಬೆಳೆ ಕೃಷಿಯಲ್ಲಿ ಸಿಂಚನ ನೀರಾವರಿ ಪದ್ಧತಿ ಬಳಕೆ ಸೂಕ್ತ.
ತೆಂಗಿನಲ್ಲಿ ಅಂತರ ಬೆಳೆಗಳು: ವಾರ್ಷಿಕ ಬೆಳೆಗಳು  ಪ್ರದೇಶಕ್ಕನುಗುಣವಾಗಿ ದ್ವಿದಳ ಧಾನ್ಯಗಳು, ತರಕಾರಿಬೆಳೆಗಳು ಹಾಗೂ ಅರಿಶಿಣ, ಶುಂಠಿ ಬೆಳೆಗಳನ್ನು   ಬೆಳೆಯಬಹುದು ಆದರೆ ಮರದ ಸುತ್ತ 5 ಅಡಿ ಅಂತರದಲ್ಲಿ ಬೆಳೆಯಬೇಕು. ಬೆಳೆಗಳನ್ನು ಬೆಳೆದ ನಂತರ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕು. ಬಹುವಾರ್ಷಿಕ ಬೆಳೆಗಳು ಬಾಳೆ, ಪಪ್ಪಾಯ, ಅನಾನಸ್, ಹಿಪ್ಪುನೇರಳೆ ಮುಂತಾದ ಬೆಳೆಗಳನ್ನು 10 ವರ್ಷಗಳವರೆಗೆ ಬೆಳೆಯಬಹುದು. ಮಿಶ್ರ ಬೆಳೆಗಳು ನಾಟಿ ಮಾಡಿದ 15 ವರ್ಷಗಳ ನಂತರ ಕೊಕೋ, ಕರಿಮೆಣಸು,ದಾಲ್ಚಿನ್ನಿ ನುಗ್ಗೆ, ಕರಿಬೇವು ಕಾಫಿ ಮತ್ತು ಪಚೋಲಿ ಬೆಳೆಗಳನ್ನು ಬೆಳೆಯಬಹುದು ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ:  ತೆಂಗಿನ ಮರದಿಂದ 1.5 -2.0 ಮೀಟರ್ ಸುತ್ತಳತೆಯಲ್ಲಿ ಯಾವುದೇ ಅಂತರ ಅಥವಾ ಆಳವಾಗಿ ಬೇರು ಬಿಡುವ ಮಿಶ್ರ ಬೆಳೆಗಳನ್ನು ಬೆಳೆಯಬಾರದು.ತೆಂಗಿನ ಮಧ್ಯ ಮಿಶ್ರ ಬೆಳೆಯಾಗಿ ಸಪೋಟ ಮಾವು ಮತ್ತು ಹುಣಸೆ ಇತ್ಯಾದಿ ಬೆಳೆಯನ್ನು ಬೆಳೆಯಬಾರದು.
 ತೆಂಗಿನ ಬೆಳೆಯಲ್ಲಿ  ಪೋಷಕಾಂಶಗಳ ಕೊರತೆ ಲಕ್ಷಣಗಳು ಮತ್ತು  ಅದರ ನಿರ್ವಹಣೆ ಸತುವಿನ ಕೊರತೆಯ ಲಕ್ಷಣಗಳು ಸತುವಿನ ಕೊರತೆಯಾದಲ್ಲಿ ಕಾಂಡದ ಗಿಣ್ಣುಗಳ ಅಂತರ ಕಡಿಮೆಯಾಗಿರುತ್ತದೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ. ಕಾಯಿಗಳ ಗಾತ್ರ ಕಡಿಮೆ ಆಗುವುದು. ಸಸ್ಯದ ಮಧ್ಯ ಬಾಗದಲ್ಲಿರುವ ಎಲೆಗಳು ಪತ್ರಹರಿತ್ತನ್ನು ಕಳೆದುಕೊಂಡು ಎಲೆಗಳು ತಿಳಿಹಸಿರುಬಣ್ಣದಿಂದ ಕೂಡಿರುತ್ತವೆ.
ನಿರ್ವಹಣಾ ಕ್ರಮಗಳು: ಪ್ರತಿ ಮರಕ್ಕೆ 150 ಗ್ರಾಂ ಸತುವಿನ ಸಲ್ಫೇಟ್‌ನ್ನು ಕಾಂಪೋಸ್ ಗೊಬ್ಬರದೊಂದಿಗೆ ಬೆರಸಿ ಮರದ ಸುತ್ತ ಮೂರು ಅಡಿ ಸುತ್ತಳತೆ ಬಿಟ್ಟು ಮಣ್ಣಿನೊಳಗೆ ಹಾಕಿ ಮುಚ್ಚಬೇಕು.
ಬೋರಾನ್  ಪೋಷಕಾಂಶದ ಕೊರತೆಯ ಲಕ್ಷಣಗಳು ಗರಿಗಳ ಎಲೆಗಳು ಒಂದಕ್ಕೊಂದು ಕೂಡಿಕೊಂಡಿರುತ್ತವೆ. ಹೊಸ ಚಿಗುರು ಎಲೆಗಳು ಒರಟಾಗಿದ್ದು ಮುದುಡಿಕೊಂಡಿರುತ್ತವೆ.
 ಕೊರತೆ ಇರುವ ಮರಗಳಿಗೆ ಪ್ರತಿ ಮರಕ್ಕೆ  50 ಗ್ರಾಂ ಬೋರಾಕ್ಸ್‌ನ್ನು ಕಾಂಪೋಸ್ಟ್ ಗೊಬ್ಬರದೊಂದಿಗೆ ಬೆರಸಿ ಮಣ್ಣಿಗೆ ಹಾಕಿ ತೇವಾಂಶ ಕಾಪಾಡಬೇಕು. ಪೊಟ್ಯಾಷಿಯಂ ಕೊರತೆಯಾದಲ್ಲಿ ಮರದ ಕೆಳ ಭಾಗದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಕೊರತೆ ಇರುವ ಗಿಡಗಳಲ್ಲಿ ಕಾಯಿಗಳ ಗಾತ್ರ ಕಡಿಮೆಯಾಗುತ್ತದೆ. ಎಲೆಗಳ ಮೇಲೆ ಕಂದು ಬಣ್ಣದ ಮಚ್ಚೆಗಳು ತುದಿಯಿಂದ ಅಂಚಿನವರೆಗೆ ಕಾಣುತ್ತವೆ.
ತೆಂಗಿನಲ್ಲಿ ಕೆರೆಗೋಡು ಮಣ್ಣಿನ ಬಳಕೆ ವಿಧಾನ: ಕೆರೆಗೋಡನ್ನು ಹೆಚ್ಚಾಗಿ ಮರಳು ಮಿಶ್ರಿತ ಕೆಂಪು ಭೂಮಿಗಳಿಗೆ ಹಾಕುವುದು ಸೂಕ್ತವಾಗಿರುತ್ತದೆ.
 ಯಾವ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಕಡಿಮೆ ಇರುತ್ತದೆಯೊ ಅಂತಹ ಮಣ್ಣುಗಳಿಗೆ ತೆಳುವಾಗಿ ಕೆರೆಗೋಡು ಮಣ್ಣನ್ನು ಹರಡಿ ಉಳುಮೆ ಮುಖಾಂತರ ಮಣ್ಣಿಗೆ ಸೇರಿಸಬೇಕು ಪ್ರತಿ ಎಕರೆಗೆ ಸುಮಾರು 8 ರಿಂದ 10 ಟನ್ ಹಾಕುವುದು ಒಳ್ಳೆಯದು. ಗೋಡು ಹಾಕುವಾಗ ಪ್ರಮುಖವಾಗಿ ಯಾವ ಮಣ್ಣಿಗೆ ಸೂಕ್ತಎಂಬುದನ್ನು ಮೊದಲು ಅರಿತು ಮತ್ತು ಮಣ್ಣಿನ ಗುಣಧರ್ಮಕ್ಕೆ ತಕ್ಕಂತೆ ಅಂದರೆ ಮಣ್ಣಿನಲ್ಲಿ ಜೇಡಿ ಮತ್ತು ಸಿಲ್ಟ್ ಅಂಶ ಹೆಚ್ಚಾಗಿದ್ದಾಗ ಗೋಡು ಮಣ್ಣನ್ನು ಹಾಕುವುದು ಸೂಕ್ತ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.