ಉಸ್ತುವಾರಿ ಸಚಿವರ ವಿರುದ್ಧ ಸಿಎಂ, ಸ್ಪೀಕರ್ಗೆ ರೇವಣ್ಣ ಪತ್ರ
ಕನ್ನಡಪ್ರಭ ವಾರ್ತೆ ಹಾಸನ ಸೆ. 7
ಹೊಳೆನರಸೀಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ದುದ್ದ - ಚಿಕ್ಕನಾಯಕನಹಳ್ಳಿ- ಹಾಸನ ರಸ್ತೆ ನಿರ್ಮಾಣ ಕಾಮಗಾರಿ ಸ್ಥಿತಿಗತಿಯನ್ನು ಉಸ್ತುವಾರಿ ಸಚಿವರು, ಕೆಲ ಕಾಂಗ್ರೆಸ್ ಮುಖಂಡರೊಡನೆ ಪರಿಶೀಲನೆ ನಡೆಸಿದ್ದು ಜೆಡಿಎಸ್ ಮುಖಂಡರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ.
ಈ ಬಗ್ಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರು ಖಂಡಿಸಿದ್ದು, ಉಸ್ತುವಾರಿ ಸಚಿವರ ಕಾರ್ಯ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ, ಶಿಕ್ಷಕರ ದಿನಾಚರಣೆಯ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಉಸ್ತುವಾರಿ ಸಚಿವರು, ಕಾಂಗ್ರೆಸ್ ಮುಖಂಡರೊಡನೆ ದುದ್ದ ರಸ್ತೆ ಕಾಮಗಾರಿ ವೀಕ್ಷಿಸಿದ್ದು ಸರಿಯಲ್ಲ. ಇದು ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ. ತಮ್ಮ ಕ್ಷೇತ್ರ ವ್ಯಾಪ್ತಿಗೆ ಬರುವ ದುದ್ದ ರಸ್ತೆ ಪರಿಶೀಲನೆಗೆ ಹೋಗುವ ವಿಚಾರವನ್ನು ಸೌಜನ್ಯಕ್ಕಾದರೂ ತಮಗೆ ತಿಳಿಸದೆ ಹೋಗಿರುವ ಕ್ರಮ ಸರಿಯಲ್ಲ ಎಂದು ಹೇಳಿದರು.
ಸಚಿವರ ಕ್ರಮವನ್ನು ವಿರೋಧಿಸಿ ವಿಧಾನಸಭೆ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗುತ್ತಿದ್ದು, ಅಭಿವೃದ್ಧಿಗೆ ನಾನು ಸೇರಿದಂತೆ ಯಾರೇನೂ ಅಡ್ಡಿಪಡಿಸಿಲ್ಲ. ಆದರೆ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳನ್ನು ಕಡೆಗಣಿಸುವುದನ್ನು ಒಪ್ಪಲಿಕ್ಕೆ ಸಾಧ್ಯವಿಲ್ಲ. ದ್ವೇಷ ರಾಜಕಾರಣ ಮಾಡಲು ಹೊರಟರೆ ಸರಿಯಾಗದು. ಉಸ್ತುವಾರಿ ಸಚಿವರು ಸರ್ಕಾರದ ಪ್ರತಿನಿಧಿ. ಹಾಗಾಗಿ ಒಂದು ಪಕ್ಷಕ್ಕಷ್ಟೆ ಸೀಮಿತವಾಗದೆ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.
ನಯಾ ಪೈಸೆ ಬಿಡುಗಡೆ ಮಾಡಿಲ್ಲ: ಕಾಂಗ್ರೆಸ್ ಸರ್ಕಾರ ಬಂದ ನಂತರದಲ್ಲಿ ಜಿಲ್ಲೆಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಈಗ ಬಿಡುಗಡೆ ಮಾಡಲಾಗಿದೆ ಎನ್ನಲಾದ 21.29 ಕೋಟಿ ರು. ಗಳನ್ನು ಹಿಂದಿನ ಬಿಜೆಪಿ ಸರ್ಕಾರವೆ ಬಿಡುಗಡೆ ಮಾಡಿತ್ತು. ಅದನ್ನು ಈಗ ಬಿಡುಗಡೆ ಮಾಡಿರಬಹುದಷ್ಟೇ. ಬಜೆಟ್ನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಣ ನಿಗದಿ ಮಾಡಿಲ್ಲ ಎಂದು ಟೀಕಿಸಿದರು.
ಹೈಕೋರ್ಟ್ ಆದೇಶ ಇದ್ದಾಗ್ಯೂ: ದುದ್ದ- ಚಿಕ್ಕನಾಯಕನಹಳ್ಳಿ- ಹಾಸನ ರಸ್ತೆ ಕಾಮಗಾರಿಯನ್ನು ಸೆಪ್ಟೆಂಬರ್ 30 ರೊಳಗೆ ಆರಂಭಿಸಬೇಕು. ಇಲ್ಲದಿದ್ದರೆ ಠೇವಣೆ ಇಟ್ಟಿರುವ 11 ಕೋಟಿ ರು.ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹೈಕೋರ್ಟ್ ಸಂಬಂಧಪಟ್ಟ ಗುತ್ತಿಗೆದಾರರಿಗೆ ಆದೇಶಿಸಿದೆ. ಇದನ್ನು ತಿಳಿದ ಕಾಂಗ್ರೆಸ್ ಮುಖಂಡರು, ಉಸ್ತುವಾರಿ ಸಚಿವರಿಂದ ಪರಿಶೀಲನೆ ಮಾಡಿಸುವ ನಾಟಕವಾಡಿದ್ದಾರೆ. ಇಂತಹ ಆಟಗಳು ಜಿಲ್ಲೆಯ ಜನತೆ ಬಳಿ ನಡೆಯುವುದಿಲ್ಲ ಎಂದು ನುಡಿದರು.
ಈ ರೀತಿ ಹೈಕೋರ್ಟ್ ಆದೇಶವಿದ್ದರೂ ಸರ್ಕಾರ ದುದ್ದ ರಸ್ತೆ ಕಾಮಗಾರಿಗೆ ಕ್ರಮ ಜರುಗಿಸಿಲ್ಲ. ಅಂದಾಜು ಸಮಿತಿಯಲ್ಲಿದ್ದ ಶಾಸಕ ಶಿವಲಿಂಗೇಗೌಡರು ಮತ್ತು ಸಾರ್ವಜನಿಕ ಲೆಕ್ಕ ಪರಿಶೀಲನೆ ಸಮಿತಿಯಲ್ಲಿ ಇರುವ ನಾನು ಈ ಬಗ್ಗೆ ದನಿ ಎತ್ತಿದಾಗ ಗುತ್ತಿಗೆದಾರ ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆ. ಅಭಿವೃದ್ಧಿಯತ್ತ ಪ್ರಾಮಾಣಿಕವಾಗಿ ಗಮನಹರಿಸದೆ ಕೇವಲ ತಂತ್ರ- ಕುತಂತ್ರಗಳಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಹಿಂದಿನ ಬಿಜೆಪಿ ಸರ್ಕಾರ ಚಿಕ್ಕನಾಯಕನಹಳ್ಳಿ, ಅರಸೀಕೆರೆ ಮತ್ತು ಹೊಳೆನರಸೀಪುರ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದ ಕಾರಣದಿಂದ ದುದ್ದ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿತ್ತು. ಇದನ್ನೇ ಇಂದಿನ ಸರ್ಕಾರ ಮಾಡಿತ್ತಾದರೂ ಅದೃಷ್ಟವಶಾತ್ ನ್ಯಾಯಾಲಯ ಕಾಮಗಾರಿ ಆರಂಭಿಸುವಂತೆ ಮಾಡಿದೆ. ದುದ್ದ ರಸ್ತೆಯನ್ನು ಖಾಸಗಿ ಸಹಭಾಗಿತ್ವದಲ್ಲಿ 220 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ನಿರ್ಧರಿಸಿದ್ದು ತಾವು ರಸ್ತೆ ನಿಗಮದ ಅಧ್ಯಕ್ಷನಾಗಿದ್ದಾಗಲೇ ಎಂಬುದನ್ನು ಅರಿಯಬೇಕು ಎಂದರು.
ತೆಂಗು ಬೆಳೆಗಾರರತ್ತ ಗಮನ ಏಕಿಲ್ಲ: ರಸ್ತೆ ಕಾಮಗಾರಿ ಪರಿಶೀಲನೆ ಮಾಡಿದವರು ಅದೇ ತೆಂಗು ಬೆಳೆ ಕಳೆದುಕೊಂಡು ದು:ಖದಲ್ಲಿ ಮುಳುಗಿರುವ ರೈತರನ್ನು ಏಕೆ ಭೇಟಿ ಮಾಡಲಿಲ್ಲ. ಪಶು ವೈದ್ಯಕೀಯ, ಕೃಷಿ ಕಾಲೇಜು ಮತ್ತು ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಹಣ ಕೊಡಿಸುವತ್ತ ಏಕೆ ಗಮನ ಹರಿಸಲಿಲ್ಲ. ಕಾಫಿ, ಏಲಕ್ಕಿ, ಮೆಣಸನ್ನು ಬೆಳೆಗಾರರ ನೋವಿಗೆ ಏಕೆ ಸ್ಪಂದಿಸಲಿಲ್ಲ. ಚಕಾರ ಎತ್ತಿಲ್ಲ ಏಕೆ ಎಂದು ಟೀಕಿಸಿದರು.
ಕೇಂದ್ರ ಒಪ್ಪಿರುವುದು ಗೊತ್ತೆ ಇಲ್ಲ ಅಂದ್ರೆ: ಎನ್.ಆರ್. ರಸ್ತೆಯಿಂದ ಚನ್ನಪಟ್ಟಣ ಕೆರೆ ಸಮೀಪ ಇರುವ ರೇಲ್ವೆ ಹಳಿ ಬಳಿ ಮೇಲ್ಸುತುವೆ ನಿರ್ಮಿಸಲು ಕೇಂದ್ರ 36 ಕೋಟಿ ರು. ಅಂದಾಜು ವೆಚ್ಚವನ್ನು ಸಿದ್ದಪಡಿಸಿ, ರಾಜ್ಯ ಸರ್ಕಾರ ತನ್ನ ಪಾಲಿನ ಶೇ.50 ರಷ್ಟು ಹಣವನ್ನು ನೀಡಬೇಕೆಂದು ಪತ್ರ ಬರೆದಿದೆ. ಈ ವಿಚಾರ ಗೊತ್ತಿಲ್ಲದ ಉಸ್ತುವಾರಿ ಸಚಿವರು, ಮೇಲ್ಸುತುವೆ ನಿರ್ಮಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳುತ್ತಾರೆ. ತೆಂಗು ನಷ್ಟವಾದ ಸ್ಥಳಕ್ಕೆ ಕೇಂದ್ರ ತಂಡ ಹಾಸನ ಜಿಲ್ಲೆಗೆ ಬಂದು ಭೇಟಿ ನೀಡಿರುವ ವಿಚಾರ ರಾಜ್ಯ ಸರ್ಕಾರಕ್ಕೆ ಗೊತ್ತಿಲ್ಲ. ಇದು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

