ಸಾವಿರಾರು ಭಕ್ತರ ಸಮ್ಮುಖ ಸ್ವರ್ಣಗೌರಿ ಪ್ರತಿಷ್ಠಾಪನೆ
ಅರಸೀಕೆರೆ: ನಾಡಿನಲ್ಲೇ ಹೆಸರಾಗಿರುವ ಇತಿಹಾಸ ಪ್ರಸಿದ್ಧ ಮಾಡಾಳು ಗ್ರಾಮದ ಸ್ವರ್ಣಗೌರಿಯನ್ನು ವಿಶೇಷ ಪೂಜೆಗಳೊಂದಿಗೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹಾಗೂ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಭಾನುವಾರ ಪ್ರತಿಷ್ಠಾಪಿಸಲಾಯಿತು.
ಸುಮಾರು 148 ವರ್ಷಗಳ ಇತಿಹಾಸ ಹೊಂದಿರುವ ಸ್ವರ್ಣ ಗೌರಮ್ಮ ಜಾತ್ರಾ ಮಹೋತ್ಸವ ಸೆ. 8ರಿಂದ ಆರಂಭಗೊಂಡು ಸೆ.17ರ ವರೆಗೆ ಜರುಗಲಿದೆ. ಗೌರಿ ದರ್ಶನಕ್ಕಾಗಿ ಜನಜಾತ್ರೆ ಸುಮಾರು 10 ದಿನಗಳ ಕಾಲ ಬೆಳಗಿನಿಂದ ಮಧ್ಯರಾತ್ರಿಯವರೆಗೆ ಹರಿದು ಬರುತ್ತದೆ.
ಇಲ್ಲಿಗೆ ಆಗಮಿಸುವ ಭಕ್ತಾಧಿಗಳು ಬಗೆ ಬಗೆಯ ಸೀರೆಗಳು ಕ್ವಿಂಟಾಲು ಗಟ್ಟಲೆ ಅಕ್ಕಿ ನೀಡುವುದು ವಾಡಿಕೆ. ದಿನದ 24 ಗಂಟೆ ಕಾಲವೂ ಉರಿಯುವ ಕರ್ಪೂರದ ಆರತಿಯನ್ನು ನೋಡಲು ಮಾಡಾಳಿಗೆ ಆಗಮಿಸಬೇಕು ಎನ್ನುವುದು ಸುತ್ತಮುತ್ತಲ ಗ್ರಾಮಸ್ತರ ಅನಿಸಿಕೆ.
ಪ್ರತಿನಿತ್ಯವೂ ನೂರಾರೂ ಕ್ವಿಂಟಾಲ್ ಕರ್ಪೂರವನ್ನು ಕುಂಡದಲ್ಲಿ ಹಾಕಿ ಭಕ್ತಿಯಿಂದ ಅರ್ಪಿಸಲಾಗುತ್ತದೆ. ಅಲ್ಲದೇ ಹರಕೆ ಹೊತ್ತವರು ತಟ್ಟೆಯಾಕಾರದ ವಸ್ತುಗಳಲ್ಲಿ ಕರ್ಪೂರ ಹಿಡಿದು ದೇವಸ್ಥಾನದ ಪ್ರದಕ್ಷಿಣೆ ಹಾಕುವ ಮೂಲಕ ತಮ್ಮ ಭಕ್ತಿ ಭಾವ ಮೆರೆಯುತ್ತಾರೆ. ತಮ್ಮ ನೋವು, ಸಂಕಷ್ಟ, ಬೇಡಿಕೆಗಳನ್ನು ಈಡೇರಿಸುವಂತೆ ಸ್ವರ್ಣಗೌರಿಯಲ್ಲಿ ಮೊರೆಯಿಡುವ ದೃಶ್ಯ ಸಾಮಾನ್ಯ.
ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗಾಗಿ ಜಾತ್ರಾ ಸಮಿತಿ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ಸಕಲ ಸಿದ್ದತೆ ಮಾಡಿಕೊಂಡಿದೆ.
ಯಾತ್ರಾರ್ಥಿಗಳು ತಂಗಲು ಸಮುದಾಯಭವನ, ಸ್ನಾನ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ದೂರದ ಊರುಗಳಿಂದ ಆಗಮಿಸುವ ಭಕ್ತರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಪೊಲೀಸರನ್ನು ನಿಯೋಜಿಸಲಾಗಿದೆ.
ಗೌರಿಗೆ ಹರಕೆ ತೀರಿಸಲು ಅಕ್ಕಿ, ಸೀರೆ, ಹಣ, ಧವಸ ದಾನ್ಯಗಳ ರೂಪದಲ್ಲಿ ತಂದು ದೇವಸ್ಥಾನದಲ್ಲಿ ನೀಡಿ ಹೋಗುತ್ತಾರೆ. ಇಲ್ಲಿ ಬರುವ ಅಕ್ಕಿಯಿಂದಲೇ ಭಕ್ತಾಧಿಗಳಿಗೆ ನಿತ್ಯ ಅನ್ನ ಸಂತರ್ಪಣೆ ನೆರವೇರಿಸಲಾಗುತ್ತಿದೆ.
ಮಕ್ಕಳ ಭಾಗ್ಯ, ಸರ್ಕಾರಿ ಹುದ್ದೆ ಬಯಸುವವರು, ವಿವಾಹ ಭಾಗ್ಯ ಕೂಡಿ ಬಾರದೇ ಇರುವವರು, ಹಲವು ವರ್ಷಗಳಿಂದ ಗುಣಮುಖವಾಗದ ಕಾಯಿಲೆಗಳಿಂದ ಬಳಲುತ್ತಿರುವವರು ಇಲ್ಲಿಗೆ ಬಂದು ತಾಯಿಯ ದರ್ಶನ ಪಡೆಯುತ್ತಾರೆ.
ಸ್ವರ್ಣಗೌರಿಯನ್ನು ನಂಬಿ ಬರುವ ಭಕ್ತರ ಕಷ್ಟ ಕಾರ್ಪಣ್ಯ ದೂರವಾಗಲು ಅನೇಕ ಪವಾಡಗಳು ನಡೆದಿರುವುದೂ ಉಂಟು.
ಈ ಹಿನ್ನೆಲೆಯಲ್ಲಿ ರಾಜ್ಯದ ಹಾಗೂ ಹೊರರಾಜ್ಯದ ಸಹಸ್ರಾರು ಭಕ್ತಾಧಿಗಳು ಬಂದು ಗೌರಿಯ ದರ್ಶನ ಪಡೆದು ತಮ್ಮ ಕೋರಿಕೆ ಈಡೇರಿಸುವಂತೆ ಬೇಡುವುದು ಹಾಗೂ ಇಷ್ಟಾರ್ಥ ಈಡೇರಿದ ನಂತರ ಮತ್ತೊಮ್ಮೆ ಆಗಮಿಸುವ ಪರಿಪಾಠ ನಿರಂತರವಾಗಿ ನಡೆದುಕೊಂಡು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

