ಜೆಡಿಎಸ್ ನಾಯಕರ ಬ್ಲಾಕ್ಮೇಲ್ ರಾಜಕಾರಣ
ಕ.ಪ್ರ. ವಾರ್ತೆ ಹಾಸನ ಸೆ. 10
ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರನ್ನು ಬಿಟ್ಟು ದುದ್ದ ರಸ್ತೆ ವೀಕ್ಷಣೆ ಮಾಡಿದ್ದಕ್ಕೆ, ಈ ಹಿಂದೆ ನಡೆದ ದೊಡ್ಡಹಳ್ಳಿ ಗೋಲಿಬಾರ್ ಪ್ರಕರಣದಂತಹ ಘಟನೆ ಮತ್ತೆ ಮರುಕಳಿಸಿದರೆ ತಾವು ಜವಾಬ್ದಾರರಲ್ಲ ಎಂದು ಜೆಡಿಎಸ್ ನಾಯಕರು ಹೇಳುವ ಮೂಲಕ ಬ್ಲಾಕ್ಮೇಲ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಜನತೆ ಸಲುವಾಗಿ ರಸ್ತೆಗಳ ಅಭಿವೃದ್ಧಿಯತ್ತ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪನವರು ಗಮನ ಹರಿಸುತ್ತಿದ್ದರೆ ಅದನ್ನೆ ಹೊಳೆನರಸೀಪುರದ ಶಾಸಕರು, ರಸ್ತೆ ಅಭಿವೃದ್ಧಿ ಪಡಿಸಿದರೆ ಉಸ್ತುವಾರಿ ಸಚಿವರಿಗೆ 'ರಸ್ತೆ ರಾಜ' ಬಿರುದು ನೀಡಿ ಸನ್ಮಾನಿಸುವುದಾಗಿ ಹೇಳಿರುವುದು ಸರಿಯಾದುದಲ್ಲ ಎಂದು ಹೇಳಿದರು.
ಯಾವ ಶಿಷ್ಟಾಚಾರದಲ್ಲೂ ಇಲ್ಲ: ಶಿಕ್ಷಕರ ದಿನಾಚರಣೆ ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದ ಉಸ್ತುವಾರಿ ಸಚಿವರು, ಕಾಂಗ್ರೆಸ್ ಮುಖಂಡರೊಡನೆ ದುದ್ದ ರಸ್ತೆ ಕಾಮಗಾರಿ ವೀಕ್ಷಿಸಿದ್ದು ಸರಿಯಲ್ಲ. ಇದು ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ. ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ದುದ್ದ ರಸ್ತೆ ಪರಿಶೀಲನೆಗೆ ಹೋಗುವ ವಿಚಾರವನ್ನು ಸೌಜನ್ಯಕ್ಕಾದರೂ ತಮಗೆ ತಿಳಿಸದೇ ಹೋಗಿರುವ ಕ್ರಮ ಸರಿಯಲ್ಲ ಎಂದಿದ್ದಾರೆ. ಆದರೆ ಈ ರೀತಿಯ ಅನಿರೀಕ್ಷಿತ ಭೇಟಿಗೆ ಶಾಸಕರನ್ನು ಕರೆಯಬೇಕೆಂಬುದು ಯಾವ ಶಿಷ್ಟಾಚಾರದಲ್ಲೂ ಇಲ್ಲ ಎಂದು ಸ್ವಷ್ಟಪಡಿಸಿದರು.
ಬಿಜೆಪಿ ಅಧಿಕಾರವಧಿಯಲ್ಲಿ ಸಾರಿಗೆ ಸಚಿವರಾಗಿದ್ದ ಅಶೋಕ್ ಈ ರಸ್ತೆಯಲ್ಲಿ ಹಾದು ಹೋಗಿ ಬಸ್ ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕುಸ್ಧಾಪನೆ ಮಾಡಿದ್ದರು. ಆಗ ಮಾತ್ರ ಇಂಥ ಹೇಳಿಕೆಯನ್ನು ಜೆಡಿಎಸ್ ನಾಯಕರು ನೀಡಲಿಲ್ಲ. ಯಾರು ಇವರೊಂದಿಗೆ ಸಖ್ಯ ಬೆಳೆಸುತ್ತಾರೋ, ಅವರ ಮನೆಗೆ ಊಟಕ್ಕೆ ಹೋಗುತ್ತಾರೋ ಅಂತವರ ಬಗ್ಗೆ ಒಂದೂ ಮಾತನ್ನು ಕೂಡ ಅವರು ಆಡುವುದಿಲ್ಲ ಎಂದ ಕಿಡಿಕಾರಿದ ಶಿವರಾಂ, ಸಚಿವರ ಕ್ರಮವನ್ನು ವಿರೋಧಿಸಿ ವಿಧಾನಸಭೆ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಹೆದರಿಸುತ್ತಿದ್ದಾರೆ ಎಂದು ದೂರಿದರು. ಜಿಲ್ಲೆಯ ಲೋಕಸಭಾ ಸದಸ್ಯರು ಕೇವಲ ಪತ್ರ ಬರೆಯುವುದಕ್ಕೆ ಸೀಮಿತವಾಗಿದ್ದು, ಪತ್ರ ಬರೆಯುವುದಕ್ಕೆ ಅವರು ಲೋಕಸಭಾ ಸದಸ್ಯರಾಗಿದ್ದರೆ, ಅದನ್ನು ತೋರಿಸಲಿಕ್ಕೆ ಅಂತಾನೆ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ನಾಯಕರು ಶಾಸಕರಾಗಿದ್ದಾರೆ ಎಂದು ಟೀಕಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಚಿಕ್ಕನಾಯಕನಹಳ್ಳಿ, ಅರಸೀಕೆರೆ ಮತ್ತು ಹೊಳೆನರಸೀಪುರ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದ ಕಾರಣದಿಂದ ದುದ್ದ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಯಾವತ್ತೂ ಇಂಥ ಧೋರಣೆ ಮಾಡಿಲ್ಲ ಎಂದು ನುಡಿದರು.
ಸರ್ಕಾರಕ್ಕೆ 10 ಕೋಟಿ ರು.ನಷ್ಟ: ಜಿಲ್ಲೆಯ ರಂಗಾಪುರ ಕಾವಲಿನಲ್ಲಿ ಸುಮಾರು ಏಳೂವರೆ ಎಕರೆ ಪ್ರದೇಶದಲ್ಲಿ ರಸ್ತೆ ಕಾಮಗಾರಿಗೆ ಕಲ್ಲನ್ನು ತೆಗೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಜೆಡಿಎಸ್ ನಾಯಕರು ಅಲ್ಲಿನ ಗುತ್ತಿಗೆದಾರರನ್ನು ಬುಟ್ಟಿಗೆ ಹಾಕಿಕೊಂಡು ಮನಸೋಇಚ್ಛೆ ಕಲ್ಲನ್ನು ತೆಗೆಯುವ ಮೂಲಕ ಸರ್ಕಾರಕ್ಕೆ ಸುಮಾರು 10 ಕೋಟಿ ರು.ನಷ್ಟ ಉಂಟು ಮಾಡಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 42 ಸಾವಿರ ಕ್ಯೂಬಿಕ್ ಮೀಟರ್ ಕಲ್ಲು ತೆಗೆಯುವ ಬದಲಾಗಿ 2.5 ಲಕ್ಷ ಕ್ಯೂಬಿಕ್ ಕಲ್ಲನ್ನು ದುರುದ್ದೇಶದಿಂದ ತೆಗೆಯಲಾಗಿದೆ ಎಂದು ಆರೋಪಿಸಿದರು.
ಅರಸೀಕೆರೆ ಮತ್ತು ಚನ್ನರಾಯಪಟ್ಟಣದಲ್ಲಿ ಇದನ್ನು ಬಳಸಿಕೊಳ್ಳಲಾಗಿದ್ದು, ಇದರ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಕೈವಾಡವಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ಈ ಪ್ರಕರಣವನ್ನು ಸಿಓಡಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಸಿಎಂ ಬಳಿ ಅಧಿಕಾರಿಗಳ ವರ್ಗ ಕೇಳಿಲ್ಲ: ಜಿಲ್ಲೆಯಲ್ಲಿ ಯಾವ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ನಾನು ಯಾವತ್ತು ಮುಖ್ಯಮಂತ್ರಿಗಳ ಹತ್ತಿರ ಕೇಳಿಲ್ಲ. ಒಂದು ವೇಳೆ ಇಲ್ಲಿ ಇರುವ ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ನೀರಿನಿಂದ ಮೇಲೆ ಬಂದ ಮೀನಿನಂತಾಗುತ್ತದೆ ಜೆಡಿಎಸ್ ನಾಯಕರ ಪರಿಸ್ಥಿತಿ ಎಂದು ಶಿವರಾಂ ವ್ಯಂಗ್ಯವಾಡಿದರು. ಉಪಾಧ್ಯಕ್ಷ ನಾರಾಯಣಗೌಡ, ಮುಖಂಡ ಡಿ.ಮಲ್ಲೇಶ್, ಜುಲ್ಫಿಕರ್ ಅಲಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

