ಹಾಸನ

ಶಾಸಕರ ಮನವೊಲಿಕೆಗೆ ಕೊನೆ ಕಸರತ್ತು

Published On :

ಅರಸೀಕೆರೆ: ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸೆ.12ರಂದು ನಡೆಯಲಿದ್ದು, ಎರಡೂ ಸ್ಥಾನದ ಆಕಾಂಕ್ಷಿಗಳು ಗದ್ದುಗೆಗಾಗಿ ಪಕ್ಷದ ವರಿಷ್ಠರು ಹಾಗೂ ಶಾಸಕರ ಮನವೊಲಿಸಲು ಕೊನೆಯ ಕ್ಷಣದ ಕಸರತ್ತು ನಡೆಸಿದ್ದಾರೆ.
ಪಟ್ಟಣದ ಪುರಸಭೆ 27 ಸದಸ್ಯ ಬಲವೊಂದಿದ್ದು ಜೆಡಿಎಸ್ ಹಾಗೂ ಕಾಂಗ್ರೆಸ್ ತಲಾ 11 ಸ್ಥಾನ ಪಡೆದಿದ್ದು, ನಾಲ್ವರು ಪಕ್ಷೇತರರಲ್ಲಿ ಮೂರು ಮಂದಿ ಜೆಡಿಎಸ್ಗೆ, ಪಕ್ಷೇತರರಾಗಿ ಆಯ್ಕೆಗೊಂಡಿದ್ದ ಬಿ.ಎನ್. ವಿದ್ಯಾದರ್ ಕಾಂಗ್ರೇಸ್ಗೆ ಸೇರ್ಪಡೆಯಾಗಿದ್ದರೆ, ಕೆಜೆಪಿ ಸದಸ್ಯರಾಗಿ 27ನೇ ವಾರ್ಡಿನಿಂದ ಆಯ್ಕೆಯಾಗಿದ್ದ ಶೈಲೆಂದ್ರಕುಮಾರ್ ಜೆಡಿಎಸ್ಗೆ ಸೇರ್ಪಡೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವ ಸೂಚನೆ ಕಂಡು ಬರುತ್ತಿದೆ.
ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷ ಗಾದಿಗೆ ಇದೀಗ ಮೀಸಲಾತಿ ಪ್ರಕಟಗೊಂಡಿದೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಸಂಖ್ಯಾಬಲದ ಆಧಾರದ ಮೇಲೆ ಜೆಡಿಎಸ್ 15 ಸ್ಥಾನಗಳನ್ನು ಹೊಂದಿದೆ.
ಜೆಡಿಎಸ್ನಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ 1ನೇ ವಾರ್ಡಿನಿಂದ ಚುನಾಯಿತರಾಗಿರುವ ಪಂಚಾಕ್ಷರಿ ಹಾಗೂ 11ನೇ ವಾರ್ಡಿನ ಖುಷಿಬಾಬು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದರೆ, 27ನೇ ವಾರ್ಡಿನ ಮನು ಕೂಡ ಸದ್ದಿಲ್ಲದೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಇದರ ನಡುವೆ ಕೆಜೆಪಿ ಅಭ್ಯರ್ಥಿ ಶೈಲೆಂದ್ರಕುಮಾರ್ ಕೂಡ ಶಾಸಕರ ಬಣದಲ್ಲಿ ಗುರುತಿಸಿಕೊಂಡಿರುವುದು ಅಧಿಕಾರ ಯಾರ ಪಾಲಾಗಲಿದೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರುವುದರಿಂದ 6ನೇ ವಾರ್ಡಿನ ಅನ್ನಪೂರ್ಣ ಸತೀಶ್, 8ನೇ ವಾರ್ಡಿನಿಂದ ಆಯ್ಕೆಯಾಗಿರುವ ಭಾಗ್ಯ ಮಂಜುನಾಥ್, ತೀವ್ರ ಸ್ಪರ್ಧೆ ಏರ್ಪಟ್ಟಿದ್ದು ಅನ್ನಪೂರ್ಣ ಸತೀಶ್ ಉಪಾಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅಂತಿಮ ನಿರ್ಧಾರವೇನು ಎಂಬುದಕ್ಕೆ ನಾಳೆ ತೆರೆ ಬೀಳಲಿದೆ.
ಕಾಂಗ್ರೆಸ್ಗೆ ತೀವ್ರ ನಿರಾಸೆ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿರುವುದರಿಂದ ತಮಗೆ ಅನುಕೂಲವಾಗುವ ಮೀಸಲಾತಿ ಮಾಡಿಸಿಕೊಂಡು ಬರಲು ಕಸರತ್ತು ನಡೆಸಿದ ಕಾಂಗ್ರೆಸಿಗರು, ಆನಂತರ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ತಡೆಯಾಜ್ಞೆ ನೀಡಿದ ನಂತರ ಅದು ಪಟ್ಟಣದ ಪುರಸಭೆಗೂ ಅನ್ವಯವಾಗಬಹುದು ಎಂಬ ಸಣ್ಣ ಆಶಾಕಿರಣವೊಂದು ಕಾಂಗ್ರೆಸ್ ವಲಯದಲ್ಲಿ ಉಲ್ಲಾಸದ ವಾತಾವರಣವನ್ನು ಸೃಷ್ಟಿಸಿತ್ತು.
ಆದರೆ ಬದಲಾದ ವಿದ್ಯಮಾನದಲ್ಲಿ ಅಂತಹ ಯಾವುದೇ ಬೆಳವಣಿಗೆಗಳು ಕಂಡುಬಾರದ ಕಾರಣ ಗುರುವಾರ ಚುನಾವಣೆ ನಡೆಯುವುದು ನಿಚ್ಚಳವಾಗಿದೆ. ಚುನಾವಣಾ ಪ್ರಕ್ರಿಯೆ 11 ಗಂಟೆಗೆ ಆರಂಭಗೊಂಡು 1 ಗಂಟೆಗೆ ಮುಕ್ತಾಯಗೊಳ್ಳಲಿದೆ. ತಹಸೀಲ್ದಾರ್ ಕೇಶವಮೂರ್ತಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.