ತಾ. ಸರ್ಕಾರಿ ಆಸ್ಪತ್ರೆ, ಕಚೇರಿಗಳಿಗೆ ಲೋಕಾ ಎಸ್ಪಿ ದಿಢೀರ್ ಭೇಟಿ
ಕ.ಪ್ರ.ವಾರ್ತೆ ಆಲೂರು ಸೆ. 13
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಹೊರ ವಲಯದಲ್ಲಿರುವ ತೋಟಗಾರಿಕೆ ಇಲಾಖೆಗೆ ಲೋಕಾಯುಕ್ತ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತೋಟಗಾರಿಕಾ ಅಧಿಕಾರಿ ಇಲ್ಲದ ಕಾರಣ ಕೆಲವೊಂದು ಕಡತಗಳನ್ನು ಪರಿಶೀಲಿಸಿದರು. ಆಲೂ ಬೆಳೆ ಪರಿಹಾರ ಕೋರಿ ಬಂದಿದ್ದ ಅರ್ಜಿ ಹಾಗೂ ಅಲ್ಲಿ ದೊರೆತ ದಾಖಲಾತಿಗಳಿಗೂ ಹೊಂದಾಣಿಕೆ ಬಾರದ ಕಾರಣ ಸಂಬಂಧ ಪಟ್ಟ ಕಡತಗಳ ಸಮೇತ ತಮ್ಮ ಕಚೇರಿಗೆ ಖುದ್ದು ಹಾಜರಾಗುವಂತೆ ಅಧಿಕಾರಿಗೆ ತಿಳಿಸುವಂತೆ ನೌಕರರಿಗೆ ಹೇಳಿದರು.
ನಂತರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಹೊರ ರೋಗಿಗಳಲ್ಲಿ ಕೆಲವರಿಗೆ ನೀಡಿದ್ದ ವಿಲ್ಸೆಫ್-ಎಸ್ಡಿ ಔಷಧಿಯನ್ನು ಹೊರಗಿನಿಂದ ತರಿಸಿದ್ದಕ್ಕೆ ಕಾರಣ ಕೇಳಿದ ಅವರು, ಹೆಚ್ಚು ಬೆಲೆಯಿರುವ ಔಷಧಿಗಳನ್ನು ಹೊರಗಿನಿಂದ ತರಿಸಿದರೆ ಬಡರೋಗಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಆಸ್ಪತ್ರೆಯಲ್ಲಿ ಔಷಧಗಳ ದಾಸ್ತಾನು ಸೂಕ್ತ ರೀತಿಯಲ್ಲಿರುವಂತೆ ಕ್ರಮ ಕೈಗೊಳ್ಳಲು ಆಡಳಿತ ವೈದ್ಯಾಧಿಕಾರಿ ಡಾ.ಉಮಾದೇವಿಯವರಿಗೆ ಸೂಚಿಸಿದರು.
ಮಡಿಲು ಕಿಟ್ಗಳನ್ನು ತಾಯಂದಿರಿಗೆ ಹೆರಿಗೆಯಾಗಿ ಆಸ್ಪತ್ರೆಯಿಂದ ಹೋಗುವಾಗ ವಿತರಿಸುತ್ತಿರುವುದು ಸರಿಯಾದುದಲ್ಲ. ಹೆರಿಗೆಯ ದಿನದಂದೆ ನೀಡಿದರೆ ಅನುಕೂಲ. ಇನ್ನು ಮುಂದೆ ಹೆರಿಗೆಯಾದ ದಿನವೇ ಮಡಿಲು ಕಿಟ್ ನೀಡಬೇಕು ಹಾಗೂ ಈ ಬಗ್ಗೆ ಮಾಹಿತಿ ಫಲಕಗಳನ್ನು ಮುಂದಿನ ಭೇಟಿಯ ಒಳಗೆ ಹಾಕುವಂತೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿರುವ ಗುತ್ತಿಗೆ ನೌಕರರಿಗೆ ಸೂಕ್ತ ಸಂಬಳ ದೊರೆಯುತ್ತಿಲ್ಲವೆಂಬ ದೂರು ಕೇಳಿಬಂದಿದ್ದು, ಒಬ್ಬರಿಗೆ 7200 ರು.ನೀಡಬೇಕಿದ್ದ ಗುತ್ತಿಗೆದಾರರು ಮನಸೋ ಇಚ್ಚೆ ಸಂಬಳ ನೀಡುತ್ತಿದ್ದು ಕೆಲವೆಡೆ 2000 ರು. ನೀಡಿದರೆ ಇನ್ನು ಕೆಲವೆಡೆ 3-4 ಸಾವಿರ ನೀಡಲಾಗುತ್ತಿದೆ. ಅವರ ಪ್ರಾವಿಡೆಂಟ್ ಫಂಡ್ ಸಹ ಕಟ್ಟುತ್ತಿಲ್ಲ. ನಿಯಮದ ಪ್ರಕಾರ ಗುತ್ತಿಗೆ ನೌಕರರ ಖಾತೆಗೆ ಹಣ ಪಾವತಿಸಬೇಕು. ಬೇರೆಡೆಗಳಲ್ಲಿ ನೌಕರರ ಕೈಗೆ ಹಣ ನೀಡಲಾಗುತ್ತಿದೆ.
ಆದರೆ ಆಲೂರಿನಲ್ಲಿ ಮಾತ್ರ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ ಎಂದ ಅವರು, ಯಾವುದೇ ಇಲಾಖೆಗಳಲ್ಲಿ ಅಧಿಕಾರಿಗಳು ಅಥವಾ ನೌಕರರು ಸಾರ್ವಜನಿಕರಿಗೆ ತೊಂದರೆ ನೀಡಿದರೆ ತಮಗೆ ದೂರು ನೀಡಬೇಕೆಂದು ತಿಳಿಸಿ, ತಮ್ಮ ದೂ.ಸಂ. 9448944905 ಗೆ ಕರೆ ಮಾಡಿದರೂ ತಕ್ಷಣ ಸ್ಪಂದಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಶಾಂತಿನಾಥ್ ಹಾಗೂ ಸಿಬ್ಬಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

