ಹಾಸನ

ಶ್ರೀನಗರ ನಿವಾಸಿಗಳ ಬೃಹತ್ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ೤ ಹಾಸನ೤ ಸೆ.17
ಮೂಲಭೂತ ಸೌಕರ್ಯ ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ನೇತೃತ್ವದಲ್ಲಿ ಶ್ರೀನಗರ ನಿವಾಸಿಗಳು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಶ್ರೀನಗರ ಬಡಾವಣೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯವಿಲ್ಲದೆ ಇಲ್ಲಿನ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಮೊದಲಿನಿಂದಲೂ ಇಲ್ಲಿ ಯಾವುದೇ ರೀತಿಯ ಸೌಕರ್ಯಗಳಿಲ್ಲದೇ ವಂಚಿತವಾಗಿದೆ. ಬಡಾವಣೆಯಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಕಸದ ರಾಶಿ ಹಾಗೂ ಅನೈರ್ಮಲ್ಯತೆ ಹೆಚ್ಚಾಗಿ ನಾನಾ ಕಾಯಿಲೆಗೆ ಎಡೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ಕೂಲಿ ನಾಲಿ ಮಾಡಿಕೊಂಡು ಇಲ್ಲಿನ ನಿವಾಸಿಗಳು ಜೀವನ ನಡೆಸುತ್ತಿದ್ದಾರೆ. ಇಲ್ಲಿ ಸುಮಾರು 800 ಕುಟುಂಬಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಸರ್ಕಾರದ ಹುಡ್ಕೋ ವಸತಿ ಯೋಜನೆಯಿಂದ ಈಗಾಗಲೇ 272 ವಸತಿಗಳನ್ನು ನಿರ್ಮಿಸಲಾಗಿದೆ. ಆದರೆ ಉಳಿದ ಕೆಲವರು ಗುಡಿಸಲುಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಹಲವು ವರ್ಷಗಳಿಂದ ಈ ಬಡಾವಣೆಯಲ್ಲಿ ವಾಸವಿದ್ದರೂ ಇವರಿಗೆ ವಸತಿ ಯೋಜನೆಯನ್ನು ಕಲ್ಪಿಸಲು ಸಾಧ್ಯವಾಗಿಲ್ಲ. ವಸತಿ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ನಗರ ಬೆಳೆದಂತಹ ಅಲ್ಲಲ್ಲಿ ಉತ್ಪತ್ತಿಯಾಗುವ ಕಸವು ಹೆಚ್ಚಾಗಿದೆ. ಈ ಹಿಂದೆ ನಗರದಲ್ಲಿ ಜನಸಂಖ್ಯೆ ಕಡಿಮೆ ಇದ್ದಿದ್ದರಿಂದ ನಗರದಲ್ಲಿ ಉತ್ಪತ್ತಿಯಾಗುವಂತಹ ಕಸವನ್ನು ನಗರಸಭೆಯ ಹಿಂದಿರುವ ಕೊಳಚೆ ಪ್ರದೇಶದಲ್ಲಿ ರಾಶಿ ಹಾಕಲಾಗಿತ್ತು. ಆದ್ರೆ ಇತ್ತೀಚೆಗೆ ಕಸ ಹೆಚ್ಚಾಗಿ ಉತ್ಪತ್ತಿಯಾಗುತ್ತಿದ್ದು, ಆ ಕಸದ ರಾಶಿಯನ್ನು ಶ್ರೀನಗರ ಬಡಾವಣೆಯ ಸಮೀಪವೇ ಸುರಿಯುತ್ತಿರುವುದರಿಂದ ಅನಾರೋಗ್ಯ ಸೇರಿ ನಾನಾ ತೊಂದರೆಗಳಾಗುತ್ತಿವೆ ಎಂದು ದೂರಿದರು.
ಮನೆಗಳ ಮುಂದೆ ಕಸದ ರಾಶಿ:  ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ನಗರಸಭೆ ಹಿಂಭಾಗದಲ್ಲಿ ಸುರಿಯಲಾಗುತ್ತಿದೆ. ಆದರೆ ಆ ಕಸ ಒಂದೆಡೆ ಶೇಖರಣೆಯಾಗಿದೆ ಮನೆಗಳ ಮುಂದೆ ಹರಡಿರುತ್ತದೆ. ಇದಕ್ಕೆ ಕಾರಣ ಕಸವನ್ನು ಸರಿಯಾದ ಸಮಯಕ್ಕೆ ಇಲ್ಲಿಂದ ವಿಲೇವಾರಿ ಮಾಡದ ಕಾರಣ ಕಸ ಎಲ್ಲರ ಮನೆಗಳ ಮುಂದೆ ಹರಡಿಕೊಂಡು ರಸ್ತೆಯಲ್ಲಿ ಬಿದ್ದು ಚೆಲ್ಲಾಡಿರುತ್ತದೆ. ಹೀಗಾಗಿ ಸಾರ್ವಜನಿಕರು ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಕೊಳೆತ ಕಸವನ್ನು ನಗರಸಭೆ ಹಿಂಬಾಗದಲ್ಲಿರುವ ಸ್ಥಳದಲ್ಲಿ ಸುಮಾರು 20 ವರ್ಷಗಳಿಂದ ರಾಶಿಗಟ್ಟಲೆ ಸುರಿಯುತ್ತಿರುವುದರಿಂದ ದುರ್ನಾತ ಬೀರುತ್ತಿದೆ. ಕಸಾಯಿ ಖಾನೆಗಳಾದ ಕೋಳಿ, ಕುರಿ, ಮೀನು, ಮಾಂಸದ ಅಂಗಡಿಗಳಿಂದ ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿಯಾಗದೆ ಕೊಳೆತು ಕೆಟ್ಟ ವಾಸನೆ ಇಲ್ಲಿನ ಹಾಗೂ ಸುತ್ತಮುತ್ತಲಿನ ನಿವಾಸಿಗಳ ಉಸಿರಾಟಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ಅಲವತ್ತುಕೊಂಡರು.
ಬೆಟ್ಟದಷ್ಟು ಕಸ ಶೇಖರಣೆ:  ಇನ್ನಾದರೂ ನಗರಸಭೆ ಹಿಂಭಾಗ ಬೆಟ್ಟದಂತೆ ಶೇಖರಣೆಯಾಗಿರುವ ಕಸದ ರಾಶಿಯನ್ನು ಕೂಡಲೇ ವಿಲೇವಾರಿ ಮತ್ತು ನಗರದ ನೈರ್ಮಲ್ಯವನ್ನು ಕಾಪಾಡುವಂತಹ ಅನಿವಾರ್ಯತೆ ಹೆಚ್ಚಾಗಿದೆ. ಅನೈರ್ಮಲ್ಯದಿಂದ ಶುದ್ಧ ಗಾಳಿ ಇಲ್ಲದೆ ರೋಗ ರುಜಿನಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಆರೋಗ್ಯ ಇಲಾಖೆಯಾಗಲಿ, ನಗರಸಭೆಯಾಗಲಿ ಈವರೆಗೂ ಶಾಶ್ವತ ಪರಿಹಾರ ಕಂಡುಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಶ್ರೀನಗರ ನಿವಾಸಿಗಳ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕು. ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಬಡಾವಣೆಯಲ್ಲಿ ಜರೂರು ರಸ್ತೆ, ಚರಂಡಿ ಮತ್ತು ಮನೆ ಹಾಗೂ ಪ್ರತಿ ಮನೆಗೂ ಶೌಚಾಲಯ ಒದಗಿಸಿಕೊಡಬೇಕು. ಸರ್ಕಾರದ ವಸತಿ ಯೋಜನೆಯಡಿ (ರಾಜೀವ್ ಅವಾಜ್ ಯೋಜನೆ) ವಸತಿಯನ್ನು ನಿರ್ಮಿಸಿಕೊಟ್ಟು ಕೊಳಗೇರಿಯನ್ನು ಸುಂದರ ಬಡಾವಣೆಯಾಗಿ ಪರಿವರ್ತಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಪಟ್ಟು ಹಿಡಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯ ರಾಜ್ಯ ಸಂಚಾಲಕ ಎಚ್.ಟಿ.ರಾಮೇಗೌಡ, ಎಚ್.ಬಿ.ಯಶೋಧಮ್ಮ, ಜಯಮ್ಮ, ಮರಿಯಮ್ಮ, ಗೀತಾ, ತಾಸಿಸ್, ಸರೋಜ, ಜಯಣ್ಣ, ತೌಫಿಕ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.