ಹಾಸನ

ನಗು ಕಷ್ಟದ ಕಡಲಲ್ಲಿ ತೇಲಿಸುವ ಹಡಗು: ಗೊರೂರು ಶಿವೇಶ್

Published On :

ಹಾಸನ: ನಗು ಕಷ್ಟದ ಕಡಲಲ್ಲಿ ನಮ್ಮನ್ನು ತೇಲಿಸುವ ಹಡಗಾಗಿದ್ದು, ಹಾಸ್ಯ ಪ್ರವೃತ್ತಿಯ ವ್ಯಕ್ತಿ ಎಂಥ ಕಷ್ಟ ಸುಖಗಳನ್ನು ಸಮಭಾವದಿಂದ ನೋಡುವ ಮನೋಭಾವ ಹೊಂದಿರುತ್ತಾನೆ ಎಂದು ಲೇಖಕ ಗೊರೂರು ಶಿವೇಶ್ ತಿಳಿಸಿದರು.
ಅವರು ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ತೇಜಸ್ವಿ-75 ನೆನಪಿನ ಸಪ್ತಾಹ ಕಾರ್ಯಕ್ರಮದಲ್ಲಿ ತೇಜಸ್ವಿ ಸಾಹಿತ್ಯದಲ್ಲಿ ವಿನೋದ ಎಂಬ ವಿಷಯ ಕುರಿತು ಉಪನ್ಯಾಸ ನೀಡುತ್ತಿದ್ದರು.
ವಿಜ್ಞಾನ, ಆಧ್ಯಾತ್ಮ, ಪರಿಸರಕಾಳಜಿ ಮುಂತಾದ ಹತ್ತು ಹಲವು ಸಂಕೀರ್ಣ ವಿಷಯದ ಹೂರಣಕ್ಕೆ ಹಾಸ್ಯದ ಹೊದಿಕೆಯನ್ನು ನೀಡಿ ನಮಗೆ ನೀಡಿದ ಕಾರಣಕ್ಕೆ ತೇಜಸ್ವಿ ಕೃತಿಗಳು ಜನಪ್ರಿಯ ಗೊಂಡವು ಎಂದು ಉದಾಹರಣೆ ಮೂಲಕ ವಿವರಿಸಿದ ಅವರು, ಜ್ಞಾನದ ಪ್ರತೀಕವಾಗಿದ್ದ ಕರ್ವಾಲೋ ಮತ್ತು ಅನುಭವಗಳ ಸಾರವಾಗಿದ್ದ ಮಂದಣ್ಣ, ಬಿರ್ಯಾನಿ ಕರಿಯಪ್ಪನಂತವರ ಜೊತೆ ಮಾಡುವ ಹಾರುವ ಓತಿಯ ಅನ್ವೇಷಣೆಯು ಸತ್ಯಾನ್ವೇಷಣೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಲೇಖಕ ಜ. ನಾ. ತೇಜಶ್ರೀ ಮಾತನಾಡಿ ಕಪ್ಪುಬಿಳುಪು, ಹಗಲು ರಾತ್ರಿ, ಗಂಡು ಹೆಣ್ಣು ಹೀಗೆ ಪರಸ್ಪರ ಪೂರಕವಾದ ಅಂಶಗಳನ್ನು ವಿರುದ್ಧ ಎಂದು ಭಾವಿಸುವ ಈ ಲೋಕದ ವೈರುಧ್ಯದ ಬದುಕಿನ ಹಿಂದಿನ ಸತ್ಯಶೋಧನೆಯಲ್ಲಿ ತೇಜಸ್ವಿ ತೊಡಗಿಕೊಂಡಿದ್ದರು ಎಂದು ಹೇಳಿದರು.
ಆಶಯನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ದನ್, ತಂತ್ರಜ್ಞಾನ, ಛಾಯಾ ಗ್ರಹಣ, ಪರಿಸರ ಆಂದೋಲನ ನಾಗರಿಕ ಹೋರಾಟ ಮುಂತಾದ ಹತ್ತು ಹಲವು ವಿಷಯಗಳಲ್ಲಿ ತೊಡಗಿಸಿಕೊಂಡಿದ್ದ ತೇಜಸ್ವಿಯವರನ್ನು ಇಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಕರಿಸಿದ್ದಪ್ಪ ಮಾತನಾಡಿ ತೇಜಸ್ವಿ ತಮ್ಮ ಕರ್ವಾಲೋ, ನಾನು ಕೊಂದ ಹಕ್ಕಿ ಮುಂತಾದ ಕೃತಿಗಳಲ್ಲಿ ತಮ್ಮ ಪರಿಸರದ ಅನುಭವಗಳು ತಮ್ಮಲ್ಲಿ ಮೂಡಿಸಿದ ಜಾಗೃತಿಯನ್ನು ತಿಳಿಸುತ್ತಾ ನಮ್ಮಲ್ಲೂ ಪರಿಸರ ಪ್ರೇಮವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಯಶಸ್ವಿನಿ ಮತ್ತು ನವ್ಯ ಪ್ರಾರ್ಥಿಸಿದರು. ಪ್ರೊ. ಎಂ. ರಘು ಸ್ವಾಗತಿಸಿದರು. ಪ್ರೊ. ತಿಮ್ಮೇಶ್ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಮಂಗಳಾ ವೆಂಕಟೇಶ್ ಮತ್ತು ಉಪನ್ಯಾಸಕರು ಇದ್ದರು. ಇದೇ ಸಂದರ್ಭದಲ್ಲಿ ತೇಜಸ್ವಿಯವರ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.