'ಪ್ರಜಾಪ್ರಭುತ್ವಕ್ಕೆ ಪರ್ಯಾಯ ಶ್ರೇಷ್ಠ ವ್ಯವಸ್ಥೆ ಮತ್ತೊಂದಿಲ್ಲ'
ಕನ್ನಡಪ್ರಭ ವಾರ್ತೆ ಹಾಸನ ಸೆ.18
ಏನೇ ದೋಷಗಳಿದ್ದರೂ ಪ್ರಜಾಪ್ರಭುತ್ವಕ್ಕೆ ಪರ್ಯಾಯವಾದ ಶ್ರೇಷ್ಠ ರಾಜಕೀಯ ವ್ಯವಸ್ಥೆ ವಿಶ್ವದಲ್ಲಿ ಮತ್ತೊಂದಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಪ್ಪ ಹೇಳಿದರು.
ಅವರು ತಾಲೂಕಿನ ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಇಡೀ ವಿಶ್ವ ಇಂದು ಪ್ರಜಾಪ್ರಭುತ್ವ ಬಯಸುತ್ತಿದೆ. ಅದಕ್ಕಾಗಿ ಅನೇಕ ದೇಶಗಳಲ್ಲಿ ಇಂದಿಗೂ ಹೋರಾಟಗಳು ನಡೆಯುತ್ತಿವೆ ಎಂದು ಹೇಳಿದರು.
ಸರ್ಕಾರವನ್ನು ಟೀಕಿಸುವ ಹಕ್ಕು ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ. ಪ್ರಜಾಪ್ರಭುತ್ವ ಶಾಂತಿ ಬಯಸುತ್ತದೆ. ಇಲ್ಲಿ ಕ್ರಾಂತಿಗೆ, ರಕ್ತ ಪಾತಕ್ಕೆ, ಹಕ್ಕುಗಳ ದಮನಕ್ಕೆ ಅವಕಾಶವಿಲ್ಲ. ನಮ್ಮ ಜೀವನ ವಿಧಾನದಲ್ಲಿ, ಕುಟುಂಬ ವ್ಯವಸ್ಥೆ, ಶಿಕ್ಷಣ ರಂಗ, ಆಡಳಿತ, ನಮ್ಮ ನಡವಳಿಕೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಅಡಕವಾಗ ಬೇಕು. ಆಗ ಮಾತ್ರ ಇಂತಹ ಆಚರಣೆಗಳಿಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಹಾಸನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಅಂತೋನಿ ಮೇರಿ ಮಾತನಾಡಿ ಇಂದು ಹಲವಾರು ದೇಶಗಳು ಸರ್ವಾಧಿಕಾರಿ ಆಡಳಿತದ ಕ್ರೌರ್ಯಕ್ಕೆ ಸಿಲುಕಿ ನಲುಗುತ್ತಿವೆ. ರಕ್ತ ಪಾತದಿಂದ ಪ್ರಜೆಗಳ ನರ ಮೇಧ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಮೌಲ್ಯಾತೀತವಾಗುತ್ತದೆ ಎಂದು ಅವರು ನುಡಿದರು.
ಅಸಂಖ್ಯಾತ ಜನರ ತ್ಯಾಗ ಬಲಿ ದಾನಗಳ ಫಲವಾಗಿ ದೊರೆತ ಸ್ವಾತಂತ್ರ್ಯ ಹಾಗೂ ನೂರಾರು ಚಿಂತಕರ ಪರಿಶ್ರಮದ ಫಲವಾಗಿ ರೂಪುಗೊಂಡ ಸಂವಿಧಾನ ನಮ್ಮದಾಗಿದೆ. ಇವೆರಡರ ಫಲ ಶ್ರುತಿಯಾಗಿ ನಮ್ಮ ದೇಶ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಹೊರ ಹೊಮ್ಮಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಜವಾಬ್ದಾರಿ ಇಂದಿನ ಯುವ ಜನತೆಯ ಮೇಲಿದೆ ಎಂದು ಹೇಳಿದರು.
ಉಪನ್ಯಾಸಕ ಡಾ.ಡಿ.ಶ್ರೀನಿವಾಸ ಮಾತನಾಡಿ, ಪ್ರಜಾಪ್ರಭುತ್ವವನ್ನು ಅನುಭವಿಸುವುದೆಂದರೆ ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವುದು, ಹಕ್ಕುಗಳಂತೆಯೇ, ಕರ್ತವ್ಯ ಪಾಲಿಸುವುದು, ರಾಷ್ಟ್ರದ ಕಾನೂನುಗಳನ್ನು ಗೌರವಿಸುವುದು, ಸಮಾಜದ ಬಗೆಗೆ ಸಕಾರಾತ್ಮಕ ಭಾವನೆಯನ್ನು ಬೆಳೆಸಿ ಕೊಳ್ಳುವುದೇ ಆಗಿದೆ. ಇಂದಿನ ವಿದ್ಯಾರ್ಥಿ ಸಮೂಹ ಇದನ್ನು ಮನ ಗಂಡು ಈ ದೇಶದ ಭವಿಷ್ಯವನ್ನು ರೂಪಿಸುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಪಿ.ಗೋಪಾಲ್ ಮಾತನಾಡಿ ನಮ್ಮ ಆಚರಣೆ, ನಡತೆಗೂ ವ್ಯತ್ಯಾಸವಿರದಂತೆ ಜೀವನ ರೂಪಿಸಿಕೊಳ್ಳುವುದೆ ನಿಜವಾದ ಪ್ರಜಾಪ್ರಭುತ್ವ ಎಂದು ಅವರು ಹೇಳಿದರು.
ಸಿ.ಡಿ. ರಘು ಸ್ವಾಗತಿಸಿದರು, ಭವ್ಯ ವಂದಿಸಿದರು, ಆನಂದಕುಮಾರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

