ವಿಶ್ವದ ಶ್ರೇಷ್ಠ ಸಾಹಿತಿಗಳಲ್ಲಿ ತೇಜಸ್ವಿ ಒಬ್ಬರು: ಕೆ.ಟಿ. ಶಿವಪ್ರಸಾದ್
ಹಾಸನ: ವಿಶ್ವದ ಶ್ರೇಷ್ಠ ಸಾಹಿತಿಗಳಲ್ಲಿ ಪೂರ್ಣಚಂದ್ರ ತೇಜಸ್ವಿಯೂ ಒಬ್ಬರು. ಅವರು ತಂದೆಗಿಂತಲೂ ಎತ್ತರದ ಸಾಹಿತಿ ಎಂದು ಖ್ಯಾತ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಹಾಗೂ ಪ್ರಗತಿಪರ ಚಿಂತಕ ಕೆ.ಟಿ.ಶಿವಪ್ರಸಾದ್ ವಿಶ್ಲೇಷಿಸಿದ್ದಾರೆ.
ತೇಜಸ್ವಿ ಜನ್ಮ ದಿನಾಚರಣೆ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಏರ್ಪಡಿಸಿದ್ದ ತೇಜಸ್ವಿ ಸ್ಮರಣಾ ಸಪ್ತಾಹ ಸಮಾರೋಪದಲ್ಲಿ ಮಾತನಾಡಿದ ಅವರು, ತೇಜಸ್ವಿ ಸಾಂಸ್ಕೃತಿಕ ಕಲಾ ಮೀಮಾಂಸೆಗಳನ್ನು ಮೀರಿ ತಮ್ಮದೇ ಆದ ಕಲಾ ಮೀಮಾಂಸೆ ರೂಪಿಸಿಕೊಂಡು ಸಾಹಿತ್ಯ ರಚಿಸಿದವರು. ಅವರ ಎಲ್ಲ ಕೃತಿಗಳೂ ದು:ಖದ ಅನುಸಂಧಾನ ಮಾಡುತ್ತವೆ. ವಿಜ್ಞಾನದ ತಿಳಿವಳಿಕೆ ಅವರ ಶಕ್ತಿ ಎಂದು ಹೇಳಿದರು.
ವಿಜ್ಞಾನದ ಬಗ್ಗೆ ಅಪಾರ ಅರಿವು ಹೊಂದಿರುವ ಇನ್ನೊಬ್ಬ ಭಾರತೀಯ ಸಾಹಿತಿಯನ್ನು ನಾನು ಕಂಡಿಲ್ಲ. ಇವರು ವಿಶ್ವದ ಬಹು ದೊಡ್ಡ ಸಾಹಿತಿ. ಜುಗಾರಿ ಕ್ರಾಸ್ನಿಂದ ಆರಂಭಿಸಿ ಬಾಹ್ಯಾಕಾಶದವರೆಗೆ ತೇಜಸ್ವಿ ವ್ಯಾಪ್ತಿ ಅಪಾರ ವಾದುದು ಎಂದರು.
ತೇಜಸ್ವಿ ಯಾವತ್ತೂ ಒಂದು ವಸ್ತುವನ್ನಿಟ್ಟುಕೊಂಡು ಕತೆ ಹೇಳಲಿಲ್ಲ. ಕತೆ ಓದುಗರ ಮನಸ್ಸಿನಲ್ಲಿ ಮೂಡುತ್ತಿರುತ್ತದೆ, ಚಿತ್ರಕಲೆಯೂ ಅಷ್ಟೇ. ಅವರ ಯಾವ ಕತೆಗೂ, ಯಾವ ಕೃತಿಗೂ ಆದಿ ಅಂತ್ಯ ಇರುವುದಿಲ್ಲ ಎಂದು ವಿಮರ್ಶಿಸಿದರು.
ಲೇಖಕ ಡಾ.ನಟರಾಜಬೂದಾಳ್ ಮಾತನಾಡಿ, ತೇಜಸ್ವಿ ಹೊರ ಜಗತ್ತು ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ತೇಜಸ್ವಿಗೆ ಒಳ ಜಗತ್ತು ಇರಲಿಲ್ಲ. ಅವರು ಇದ್ದಿದ್ದು ಹೊರ ಜಗತ್ತಿನಲ್ಲಿ, ಹೊರಜಗತ್ತಿನಲ್ಲಿಯೇ ಬದುಕು ಬರಹ ಕೈಕೊಂಡರು ಎಂದು ನುಡಿದರು.
ವಿಜ್ಞಾನ ಬದುಕಿನ ಮೀಮಾಂಸೆಯನ್ನು ಸರಿಯಾದ ಕ್ರಮದಲ್ಲಿ ವ್ಯಾಖ್ಯಾನಿಸಿಕೊಳ್ಳಲು ತೇಜಸ್ವಿ ಬದುಕು, ಬರಹ ಸಹಕಾರಿ. ತೇಜಸ್ವಿಯನ್ನು ನಿಸರ್ಗ ವಿವೇಕದ ಮೂಲಕ ನೋಡಬೇಕು. ಅವರ ಬರಹದಲ್ಲಿ ಚಲನೆ ಇರುತ್ತದೆ ಎಂದು ವಿಶ್ಲೇಷಿಸಿದರು.
ವಿಮರ್ಶಕ ಡಾ.ಚಂದ್ರಶೇಖರ ನಂಗಲಿ ತೇಜಸ್ವಿ ಕಾಡು ಕುರಿತು ವಿಶೇಷ ಉಪನ್ಯಾಸ ನೀಡಿ, ತೇಜಸ್ವಿಯವರು ಕಾರಂತರ ಮುಂದುವರೆದ ಭಾಗ. ಕಾರಂತರು ತಮ್ಮ ಸಾಹಿತ್ಯವನ್ನು ಅರಿವಿನ ಮೂಲಕ ರಚಿಸಿದರೆ, ತೇಜಸ್ವಿ ಅನುಭವಿಸಿ ಸಾಹಿತ್ಯವನ್ನು ರಚಿಸಿದರು ಎಂದು ತಿಳಿಸಿ, ತೇಜಸ್ವಿಯವರದು ನಿಸರ್ಗ ವಿವೇಕದ ಸಹಜಯಾನ.ಅವರ ಬರಹದ ಶೈಲಿ ಬಹಳ ಸಂಕಿರಣ. ಎಲ್ಲಾ ಕಥನ-ಮಥನಗಳು ಜಡೆಕೋಲಾಟವಿದ್ದಂತೆ ಎಂದು ನುಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ದನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹರೀಶ್ ಸ್ವಾಗತಿಸಿದರು. ಶಿವೇಶ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

