ಹಾಸನ

ಕಾಡಾನೆ ಹಾವಳಿ ಪ್ರದೇಶ ರೈತರಿಗೆ ಬೆಳೆ ಸಾಲ ನೀಡಲು ವಿಶೇಷ ಗಮನ: ಶಾಸಕ

Published On :

ಕನ್ನಡಪ್ರಭ ವಾರ್ತೆ ಆಲೂರು ಸೆ.19
ತಾಲೂಕಿನ ಕಾಡಾನೆ ಹಾವಳಿ ಪೀಡಿತ ಪ್ರದೇಶಗಳ ರೈತರಿಗೆ ಬೆಳೆ ಸಾಲ ನೀಡಲು ವಿಶೇಷ ಗಮನ ಹರಿಸಲಾಗುವುದೆಂದು ಹಾಸನ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಹಾಗೂ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
  ಪಟ್ಟಣದಲ್ಲಿ ಬ್ಯಾಂಕ್‌ನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಬ್ಯಾಂಕ್ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಾದರಿಯಾಗಿದ್ದು ಎ. ಗ್ರೇಡ್ ಬ್ಯಾಂಕ್ ಆಗಿ ರಾಜ್ಯದಲ್ಲಿ 3 ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 70 ಸಾವಿರ ರೈತರಿಗೆ 278 ಕೋಟಿ ಸಾಲ ನೀಡಿದ್ದು ಕಳೆದ ಬಾರಿ 12.5 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದರು.
 ಸಹಕಾರಿ ವ್ಯವಸ್ಥೆ ಎಲ್ಲರೂ ಸೇರಿ ನಡೆಸುವಂತಹದ್ದು. ಈ ವ್ಯವಸ್ಥೆ ಅಭಿವೃದ್ಧಿಯಾಗಬೇಕಾದರೆ ಸಂಪನ್ಮೂಲದ ಸಂಗ್ರಹ ಅತಿಮುಖ್ಯ. ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಸುಭದ್ರವಾದರೆ ಬ್ಯಾಂಕ್‌ಗಳು ಸುಭದ್ರವಾದಂತೆ ಎಂದ ಅವರು ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳಿಂದ ಮುಜುಗರವಾಗಿದೆ.
 ಆದರೆ ನಮ್ಮ ಆಡಳಿತ ಪಾರದರ್ಶಕವಾಗಿದ್ದು, ಯಾರೂ ಇಂಥ ವದಂತಿಗಳಿಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಕಳೆದ 54 ವರ್ಷಗಳಿಂದ ಬ್ಯಾಂಕ್ ಅಂತಹ ವಿಶೇಷ ಬದಲಾವಣೆ ಕಂಡಿರಲಿಲ್ಲ. ಆದರೆ ಕಳೆದ 3 ವರ್ಷಗಳಲ್ಲಿ ವ್ಯವಹಾರ ದ್ವಿಗುಣಗೊಂಡಿದ್ದು ಮುಚ್ಚುವ ಪರಿಸ್ಥಿತಿಯಲ್ಲಿದ್ದ ಆಲೂರು ಹಾಗೂ ಅರಸೀಕೆರೆಯ ಟಿ.ಎ.ಪಿ.ಸಿ.ಎಂ.ಎಸ್‌ಗಳನ್ನು ಉಳಿಸಿಕೊಂಡಿದ್ದೇವೆ ಎಂದು ತಿಳಿಸಿದರು.
  ಎಚ್‌ಡಿಸಿಸಿ ಬ್ಯಾಂಕಿನ ಸಿಇಓ ಶಂಕರ್ ಮಾತನಾಡಿ, ನಮ್ಮ ಬ್ಯಾಂಕ್ ಪ್ರಗತಿಯಲ್ಲಿದೆ. ಇದನ್ನು ನೋಡಿಯಾದರೂ ಕಾಫಿ ಬೆಳೆಗಾರರು ಹಾಗೂ ದೊಡ್ಡ ರೈತರು ಹೆಚ್ಚಿನ ಠೇವಣಿ ಇಡಬೇಕು. ಕೇವಲ ಶುಂಠಿ ಬೆಳೆಗೆ ನೂರಾರು ಎಕರೆಗೆ ಸಾಲ ನೀಡಲು ಸಾಧ್ಯವಿಲ್ಲ. ಆದರೂ ಅರ್ಜಿ ನೀಡಿದ ಭಾಗಶ: ಎಲ್ಲರಿಗೂ ಸಾಲ ನೀಡಿದ್ದೇವೆ ಎಂದು ನುಡಿದರು.
ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ವಿ.ಶಿವರಾಮೇಗೌಡ ಮಾತನಾಡಿ ಜಿಲ್ಲಾಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರ ಸಹಕಾರದಿಂದಾಗಿ ತಾಲೂಕಿನಲ್ಲಿ ಉತ್ತಮ ಕಟ್ಟಡ ನಿರ್ಮಾಣವಾಗಿದ್ದು ಜನತೆಗೆ ಉತ್ತಮ ಸೇವೆ ನೀಡಲಾಗುವುದೆಂದರು.
 ಜಿಲ್ಲಾ ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಪಿ.ಮೋಹನ್, ನಿರ್ದೇಶಕ ಜಗದೀಶ್, ಕಬ್ಬಿನಹಳ್ಳಿ, ಕೆ.ಎಸ್.ಮಂಜೇಗೌಡ, ನಿರ್ದೇಶಕ ಮಹಮದ್‌ಇಸಾಕ್, ಕಾಂತರಾಜು, ಮಲ್ಲೇಶ್, ರಾಮಚಂದ್ರೇಗೌಡ, ಲಲಿತಮ್ಮ, ಶಿವಣ್ಣ,ಎ.ಎಚ್.ಲಕ್ಷ್ಮಣ್ ಇತರರಿದ್ದರು. ಎ.ಎಂ.ರವಿಶಂಕರ್ ನಿರೂಪಿಸಿದರು. ಮಂಜುನಾಥ್ ಸ್ವಾಗತಿಸಿದರು. ವಿಕಾಸ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.