ಸೌಕರ್ಯ ವಂಚಿತ ಪುರದಮ್ಮ ದೇಗುಲ
- ಪಿ.ರವಿಕುಮಾರ್
ಹಾಸನ: ಪುರದಮ್ಮ ಎಂದಾಕ್ಷಣ ನೆನಪಿಗೆ ಬರೋದು ಎಂಥಾ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸುತ್ತಾಳೆ ಎನ್ನುವ ಬಲವಾದ ನಂಬಿಕೆ. ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ.
ಭಕ್ತರ ಎಂತಹ ಕಷ್ಟಗಳಿದ್ದರೂ, ಈ ದೇವಿ ಪರಿಹರಿಸುತ್ತಾಳೆ ಅನ್ನೋ ಅಪಾರವಾದ ನಂಬಿಕೆಯಿಂದ ಜಿಲ್ಲೆ ಮಾತ್ರವಲ್ಲದೆ ನಾಡಿನ ನಾನಾ ಕಡೆಗಳಿಂದ ಅಪಾರ ಭಕ್ತರು ಶಕ್ತಿ ದೇವತೆಯ ದರ್ಶನಕ್ಕೆ ಮತ್ತು ಪೂಜಾ ಕೈಂಕರ್ಯಕ್ಕಾಗಿ ವರ್ಷಪೂರ್ತಿ ಇಲ್ಲಿಗೆ ಆಗಮಿಸುತ್ತಾರೆ.
ವಿಪರ್ಯಾಸ ಅಂದ್ರೆ...ಸಾಗರೋಪಾದಿಯಲ್ಲಿ ಇಲ್ಲಿಗೆ ಆಗಮಿಸುವ ಭಕ್ತಾಧಿಗಳಿಗೆ ಪುರದಮ್ಮನ ಪ್ರಸಿದ್ಧಿಗೆ ತಕ್ಕಂತೆ ಅಗತ್ಯ ಸೌಲಭ್ಯಗಳು ಇಲ್ಲಿಲ್ಲ. ಮೂಲ ಸೌಕರ್ಯ ಒದಗಿಸದ ದೇಗುಲ ಆಡಳಿತ ಮಂಡಳಿ ವಿರುದ್ಧ ಭಕ್ತರು ಬೇಸರ ಗೊಂಡಿದ್ದಾರೆ.
ತಾಲೂಕಿನ ಸೊಪ್ಪಿನಹಳ್ಳಿ ಬಳಿ ಇರುವ ಪುರದಮ್ಮ ದೇವಾಲಯಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಭಕ್ತರ ಕೋರಿಕೆಯನ್ನು ಶೀಘ್ರ ಈಡೇರಿಸುವ ದೇವಿ ಎಂಬ ನಂಬಿಕೆ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬೇಡಿದ ವರ ನೀಡಿದ ಅಮ್ಮನಿಗೆ ಹರಕೆ ತೀರಿಸಲು ದೇವಾಲಯ ಬಳಿಯೇ ಮಾಂಸದೂಟ ತಯಾರಿಸಿ ಎಡೆ ಇಡುವುದು ಮತ್ತು ಬಂಧು ಬಳಗವನ್ನು ಕರೆದು ಊಟ ಹಾಕುವುದು ಇಲ್ಲಿನ ಪ್ರತೀತಿ. ಈ ಸಂಪ್ರದಾಯ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ.
ಇಷ್ಟಾರ್ಥಗಳನ್ನು ಕರುಣಿಸುವ ಈ ದೇವಾಲಯಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಜನ ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ. ಕೋಳಿ, ಕುರಿ ಮತ್ತು ಹಂದಿಯನ್ನು ದೇವಿಗೆ ಬಲಿ ಕೊಟ್ಟು ಹರಕೆ ತೀರಿಸುತ್ತಾರೆ. ಕೆಲವರು ಈ ದೇವಿಗೆ ಎರಡು ತಿಂಗಳಿಗೊಮ್ಮೆ ಪೂಜೆ ನೆರವೇರಿಸಿದರೆ ಮತ್ತೆ ಕೆಲವರು ಪ್ರತಿ ತಿಂಗಳು ಪೂಜೆ ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾಗುತ್ತಾರೆ.
ಮತ್ತೊಂದು ವಿಶೇಷ ಎಂದರೆ ಈ ದೇವಿಗೆ ಪೂಜಾರಿಯೇ ಇಲ್ಲ. ಭಕ್ತರೇ ಪೂಜೆ ನೆರವೇರಿಸಿಕೊಂಡು ಬರುವುದುಂಟು. ಪುರದಮ್ಮನಿಗೆ ಮಾಂಸದೂಟ ಎಡೆ ಇಡಲಾಗುತ್ತದೆಯಾದರೂ, ಸಸ್ಯಹಾರಿಗಳು ಕೂಡ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗೆ ಹರಕೆ ಕಟ್ಟಿಕೊಳ್ಳುತ್ತಾರೆ.
ಅಪಾರ ನಂಬಿಕೆ ಹೊಂದಿರುವ ಪುರದಮ್ಮ ದೇವಾಲಯಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯದ ಕೊರತೆ ತಲೆನೋವಾಗಿದೆ. ಮೊದಲನೆಯದಾಗಿ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ. ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ದೇಗುಲ ತಲುಪುವುದೇ ಪ್ರಯಾಸದ ಸಂಗತಿ. ಹೇಗೋ ಕಷ್ಟಪಟ್ಟು ದೇವಾಲಯ ತಲುಪಿದರೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲ ಸೌಕರ್ಯ ಇಲ್ಲದೆ ಭಕ್ತರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಜೊತೆಗೆ ಮಾಂಸದಂಗಡಿಗಳ ಸುತ್ತಮುತ್ತ ಅಕ್ಷರಶ: ಕಸದ ಗುಂಡಿಗಳಾಗಿವೆ. ಈ ಅನೈರ್ಮಲ್ಯ ವಾತಾವರಣದಲ್ಲೇ ಅಲ್ಲಲ್ಲಿ ಬೀದಿಯಲ್ಲೇ ಮಾಂಸದೂಟ ಸಿದ್ದಪಡಿಸಿ ಊಟ ಮಾಡಲಾಗುತ್ತಿದೆ. ಮಾಂಸದಂಗಡಿಗಳ ಮಾಲೀಕರು ಕೂಡಾ ಸ್ವಚ್ಛತೆಗೆ ಕಾಳಜಿ ವಹಿಸದಿರುವುದು ಅನೈರ್ಮಲ್ಯ ಹೆಚ್ಚಳವಾಗಿದ್ದು, ಜತೆಗೆ ಸುತ್ತಮುತ್ತಲಿನ ಗ್ರಾಮಗಳ ಜನರ ಅನಾರೋಗ್ಯಕ್ಕೆ ಕಾರಣವಾಗಿ ಪರಿಣಮಿಸಿದೆ.
ದೇವಾಲಯ ಆವರಣ ಮಳೆಗಾಲದಲ್ಲಂತೂ ಕೆಸರುಗದ್ದೆಯಾಗಿ ಮಾರ್ಪಡುತ್ತದೆ. ಇದರ ನಡುವೆಯೇ ಊಟೋಪಚಾರಗಳು ನಡೆಯುತ್ತವೆ. ಇದು ಇದೇ ರೀತಿ ಮುಂದುವರೆದರೆ ಪ್ರಸಿದ್ಧ ಭಕ್ತಿ ಕೇಂದ್ರ ಅನಾರೋಗ್ಯದ ತಾಣವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.
ಇಲ್ಲಿಗೆ ಬರುವ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನ ಸುತ್ತಮುತ್ತ ಮಳೆ-ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಹಾಗೂ ಭಕ್ತರು ನಿಶ್ಚಿಂತೆಯಿಂದ ತಮ್ಮ ಹರಕೆ ತೀರಿಸಲು ಸೂಕ್ತ ಕಟ್ಟಡಗಳ ವ್ಯವಸ್ಥೆ, ಸಮರ್ಪಕ ಕುಡಿಯುವ ನೀರಿನ ಹಾಗೂ ರಸ್ತೆ ಇತ್ಯಾದಿ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

