ಹಾಸನ

ಈರುಳ್ಳಿಗೆ ಬಂಪರ್ ಬೆಲೆ: ರೈತರ ಸಂತಸ

Published On :

ಜಾವಗಲ್: ಸುತ್ತಮುತ್ತಲಿನ ರೈತರು ನೂರಾರು ಎಕರೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಈರುಳ್ಳಿಗೆ ಪ್ರಸ್ತುತ ಸೂಕ್ತ ಬೆಲೆ ಸಿಕ್ಕಿದ್ದರಿಂದ ರೈತರು ಸಂತೋಷ ವ್ಯಕ್ತಪಡಿಸಿದ್ದಾರೆ. ಕ್ವಿಂಟಲ್‌ಗೆ 4500 ರು.ನಿಂದ 5000 ರು.ಗೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಕಳೆದ ವರ್ಷ ಈರುಳ್ಳಿ ಬೆಳೆದು ಬೆಲೆ ಸಿಗದೆ ಕಂಗಾಲಾಗಿದ್ದು ಈ ಬಾರಿ ಉತ್ತಮ ಧಾರಣೆ ಸಿಕ್ಕಿರುವುದರಿಂದ ರೈತವರ್ಗದಲ್ಲಿ ಹರ್ಷ ತಂದಿದೆ ಎಂದು ರೈತ ಶ್ರೀನಿವಾಸಗೌಡ ತಿಳಿಸಿದ್ದಾರೆ.

22 ರಂದು ಅರೆಸೇನಾ ಪಡೆ ಯೋಧರ ಸಭೆ
ಹಾಸನ: ಜಿಲ್ಲಾ ನಿವೃತ್ತ ಅರೆಸೇನಾ ಪಡೆ ಯೋಧರ ಒಕ್ಕೂಟದ ಸಭೆಯನ್ನು ಸೆ.22 ರಂದು ಬೆಳಗ್ಗೆ 10ಕ್ಕೆ ನಗರದ ಆರ್.ಸಿ. ರಸ್ತೆಯಲ್ಲಿರುವ ಒಕ್ಕೂಟದ ಕಚೇರಿಯಲ್ಲಿ ಕರೆಯಲಾಗಿದೆ. ಜಿಲ್ಲೆಯ ಎಲ್ಲಾ ಮಾಜಿ ಯೋಧರು ಸಭೆಯಲ್ಲಿ ಭಾಗವಹಿಸುವಂತೆ ಒಕ್ಕೂಟದ ಅಧ್ಯಕ್ಷ ಆರ್.ಎಂ. ಹನುಮಂತಪ್ಪ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ 9686811183 ಸಂಪರ್ಕಿಸಲು ಕೋರಲಾಗಿದೆ.

ಇಂದು ವಿದ್ಯುತ್ ವ್ಯತ್ಯಯ
ಹಾಸನ: ಶಾಂತಿಗ್ರಾಮದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಸೆ.20 ರಂದು  ಬೆಳಗ್ಗೆ 10ರಿಂದ ಸಂಜೆ 5 ರಯವರೆಗೆ ಮೈಲ್ನಹಳ್ಳಿ, ಕೆಂಚಟ್ಟಹಳ್ಳಿ, ಮರ್ಕುಲಿ, ಯೋಗಿಹಳ್ಳಿ, ಹಂಪನಹಳ್ಳಿ, ಸರಾಪುರ, ಕಾರೆಕೆರೆ, ಪಿಜಿಸಿಎಲಲ್ಶಾಂತಿಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.    ಎರಡನೇ ತ್ರೈಮಾಸಿಕ ನಿರ್ವಾಹಣಾ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಸೆ.20 ರಂದು ಚಿಕ್ಕಕೊಂಡಗೊಳ ವಿತರಣಾ ಕೇಂದ್ರದಲ್ಲಿ  ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ವಿದ್ಯಾನಗರ, ಆಕಾಶವಾಣಿ, ಹೇಮಾವತಿನಗರ, ಶಂಖ, ಕಡಗ, ಸಾಲಗಾಮೆ, ದುದ್ದ, ಬಸವಾಘಟ್ಟ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ  ವ್ಯತ್ಯಯವಾಗಲಿದೆ.  ಸಾರ್ವಜನಿಕರು ಸಹಕರಿಸಬೇಕೆಂದು ವಿತರಣಾ ನಿಗಮ ನಿಯಮಿತ ನೋಡಲ್ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಲಾರಿ-ಬೈಕ್ ಡಿಕ್ಕಿ:  ವ್ಯಕ್ತಿ ಸಾವು
ಹಾಸನ: ಲಾರಿಯೊಂದು ಬೈಕ್‌ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಹಿಂಬದಿನ ಕುಳಿತಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲೂಕಿನಲ್ಲಿ ಬುಧವಾರ ನಡೆದಿದೆ. ತಾಲೂಕಿನ ಗವೇನಹಳ್ಳಿ ಗ್ರಾಮದ ಚಂದನ ಸಾವನ್ನಪ್ಪಿದ್ದ ದುರ್ದೈವಿ. ಚಂದನ ತನ್ನ ಸ್ನೇಹಿತರಾದ ಯೋಗೇಶ್ ಹಾಗೂ ಕೀರ್ತಿ ಅವರೊಂದಿಗೆ ಬೈಕಿನಲ್ಲಿ ಹಿಂದೆ ಕುಳಿತುಕೊಂಡು ಮೂರು ಜನರು ಶಾಂತಿಗ್ರಾಮದಿಂದ ಹಾಸನಕ್ಕೆ ಹೋಗಲು ಶಾಂತಿಗ್ರಾಮ ಜೂನಿಯರ್ ಕಾಲೇಜ್ ಮುಂಭಾಗ ಹೋಗುತ್ತಿದ್ದಾಗ ಹಾಸನದ ಕಡೆಯಿಂದ ಬಂದ ಗೂಡ್ಸ್ ಲಾರಿ ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ಚಂದನ ರಸ್ತೆಗೆ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಉಳಿದ ಇಬ್ಬರಿಗೆ ಚಿಕ್ಕಪುಟ್ಟ ಗಾಯಗಳಾಗಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯೋಗೇಶ್‌ಕುಮಾರ್ ಶಾಂತಿಗ್ರಾಮ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.    

ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯಕ್ಕೆ ಗುರುವಾರ 8505 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4300 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.04 ಅಡಿಯಾಗಿದ್ದು, 36.175 ಟಿಎಂಸಿ ನೀರು ಸಂಗ್ರಹವಾಗಿದೆ.
ಹೋಬಳಿವಾರು ಮಳೆ ವಿವರ: ಆಲೂರು 24, ಪಾಳ್ಯ 35.4, ಕೆ.ಹೊಸಕೋಟೆ 54, ಕುಂದೂರು 26.8, ಅರಕಲಗೂಡು 14.2, ರಾಮನಾಥಪುರ 4.2, ಬಸವಪಟ್ಟಣ 4.6, ಕೊಣನೂರು 6.4, ದೊಡ್ಡಮಗ್ಗೆ 13.2, ದೊಡ್ಡಬೆಮ್ಮತ್ತಿ 10.2, ಅರಸೀಕೆರೆ ತಾ. ಯಳವಾರೆ 3.6, ಬೇಲೂರು 5.6, ಹಳೇಬಿಡು 1, ಹಗರೆ 4.2, ಬಿಕ್ಕೋಡು 28.8, ಗೆಡೆಂಹಳ್ಳಿ 5.2, ಅರೇಹಳ್ಳಿ 8.2, ಚನ್ನರಾಯಪಟ್ಟಣ 2.8, ಉದಯಪುರ 1.6, ಬಾಗೂರು 2.2, ನುಗ್ಗೆಹಳ್ಳಿ 1.2, ಶ್ರವಣಬೆಳಗೊಳ 1.8, ಹೊಳೆನರಸೀಪುರ 5.5, ಹಳ್ಳಿಮೈಸೂರು 5.8, ಹಳೇಕೋಟೆ 10.4, ಸಕಲೇಶಪುರ 85, ಬಾಳುಪೇಟೆ 65, ಯಸಳೂರು 55, ಶುಕ್ರವಾರ ಸಂತೆ 63.2, ಮರೇನಹಳ್ಳಿ 111.01, ಹೊಸೂರು 30, ಬೆಳಗೊಡು 44.6, ಹಾನುಬಾಳು 35, ಹೆತ್ತೂರು 90.2 ಮಿ.ಮೀ ಮಳೆಯಾಗಿದೆ.

ಅಕ್ರಮ ಮದ್ಯ ವಶ: ನಾಲ್ವರ ಬಂಧನ
ಅರಸೀಕೆರೆ: ಜಿಲ್ಲೆಯ ನಾನಾ ಪ್ರಕರಣದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಘಟನೆ ಬುಧವಾರ ನಡೆದಿದೆ. ತಾಲೂಕಿನ ಗಂಡಸಿ ಹೋಬಳಿ, ಬಾಗಿವಾಳು ಗ್ರಾಮದ ರವಿ (35) ಎಂಬುವರು ತಮ್ಮ ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ರವಿ ಅವರನ್ನು ಬಂಧಿಸಿದ್ದು, ಮದ್ಯ ಮಾರಾಟಕ್ಕಿಟ್ಟಿದ್ದ 714 ರು. ಬೆಲೆಯ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  ಮತ್ತೊಂದು ಪ್ರಕರಣದಲ್ಲಿ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿ, ಕರಿಮಾರನಹಳ್ಳಿ ಗ್ರಾಮದ ಶಿವನಂಜೇಗೌಡ(65) ರವರು ತಮ್ಮ ಗುಡಿಸಲಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾದ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದು, ಮದ್ಯ ಮಾರಾಟಕ್ಕಿಟ್ಟಿದ್ದ 1207 ರು. ಬೆಲೆಯ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಬೇಲೂರು ತಾಲ್ಲೂಕಿನ ಬಂಟೇನಹಳ್ಳಿ ಗ್ರಾಮದ ಮಹದೇವಪ್ಪ (58) ರವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಮಹದೇವಪ್ಪ ನ್ನು ಬಂಧಿಸಿದ್ದು, ಮದ್ಯ ಮಾರಾಟಕ್ಕಿಟ್ಟಿದ್ದ 112 ರು. ಬೆಲೆಯ ಮದ್ಯ ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬೇಲೂರು ತಾಲ್ಲೂಕಿನ ಹುಣಸೆಕೆರೆ ಗ್ರಾಮದ  ಪರಮೇಶ (48) ತಮ್ಮ ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.

ಮೀಟರ್ ಬಡ್ಡಿಗೆ ಕಡಿವಾಣ: ಅರಿವು ಕಾರ್ಯಕ್ರಮ
ಹಾಸನ: ಮೀಟರ್ ಬಡ್ಡಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬ್ಯಾಂಕ್‌ನಿಂದ ಸಾಲ ನೀಡುವ ಬಗ್ಗೆ ಬುಧವಾರ ನಗರದ ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಕಟ್ಟಡದಲ್ಲಿ ಕೂಲಿ ಕಾರ್ಮಿಕರು ಹಾಗೂ ಮಾರಾಟಗಾರರಿಗೆ ಬ್ಯಾಂಕ್ ಅಧಿಕಾರಿಗಳಿಂದ  ಅರಿವು ಕಾರ್ಯಕ್ರಮ ನಡೆಯಿತು. ಅಧಿಕಾರಿ ಬಿ.ಎಸ್.ಎನ್. ಮೂರ್ತಿ ಅವರು ಕೆಲಸಗಾರರಿಗೆ ತಿಳಿವಳಿಕೆ ನೀಡಿದರು. ಬಂಡವಾಳ ಹೂಡಲು ಹಣಕ್ಕಾಗಿ ಮೀಟರ್ ಬಡ್ಡಿ ಮೊರೆ ಹೋಗುತ್ತಿರುವ ಹಿನ್ನೆಲೆಯಲ್ಲಿ ತಿಂಗಳಿಗೊಮ್ಮೆ ಹಣ ಕಟ್ಟುವ ರೀತಿ 10 ಜನರ ಗುಂಪಿನ ಮೂಲಕ ಸಾಲ ನೀಡುವುದಾಗಿ ಹೇಳಿದರು. ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಸೋಲೋಮನ್, ಶ್ರೀಕಂಠಸ್ವಾಮಿ, ಮಂಜುನಾಥ್, ಸಮೀರ್ ಅಹಮದ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.