ಅವನತಿಯತ್ತ ಕುಂಬಾರಿಕೆ ವೃತ್ತಿ
-ಪಿ.ರವಿಕುಮಾರ್
ಹಾಸನ: ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಅಲ್ಯೂಮಿನಿಯಂ ಪದಾರ್ಥಗಳ ಹಾವಳಿಯಿಂದಾಗಿ ಜಿಲ್ಲೆಯಲ್ಲಿ ಮಣ್ಣಿನ ಮಡಿಕೆಗಳ ತಯಾರಿಕೆ ಸಂಪೂರ್ಣವಾಗಿ ನಾಶವಾಗುತ್ತಿದೆ.
ಆಡಂಬರ ಹಾಗೂ ವೈಭವಿಕರಿಸುವಂತಹ ವಸ್ತುಗಳ ಮಾರಾಟದಿಂದಾಗಿ ನಮ್ಮ ಸಾಂಪ್ರದಾಯಿಕತೆಯನ್ನು ಎತ್ತಿ ಹಿಡಿಯುವ ಮಣ್ಣಿನಿಂದ ಮಾಡಿದ ಮಡಕೆಗಳು ದಿನ ದಿನಕ್ಕೆ ಕಣ್ಮರೆಯಾಗತೊಡಗಿದೆ.
ಮಣ್ಣಿನ ಮಡಿಕೆ ಮಾಡುವ ವೃತ್ತಿ ಅವಲಂಬಿಸಿದ್ದ ಕುಂಬಾರ ಜನಾಂಗದವರು ಇದೀಗ ಬದಲೀ ವೃತ್ತಿಯನ್ನು ಅವಲಂಬಿಸಿದ್ದಾರೆ. ಈ ಕುಟುಂಬದವರು ಬೇರೆ ವೃತ್ತಿ ಅವಲಂಬಿಸಲು ಆರ್ಥಿಕವಾಗಿ ಸದೃಢವಾಗಿರದೆ, ಇರುವ ವೃತ್ತಿಯನ್ನೂ ಬಿಡಲಾರದೆ, ಸರ್ಕಾರದ ಯಾವುದೆ ಯೋಜನೆಗಳಿಂದಲೂ ನಿರೀಕ್ಷಿತ ಪ್ರೋತ್ಸಾಹ ದೊರೆಯದ ಕಾರಣದಿಂದಾಗಿ ತಮ್ಮ ಬದುಕಿನ ಬಂಡಿಯನ್ನು ಸಾಗಿಸಲು ಹೆಣಗಾಡುವ ಸ್ಥಿತಿಯಲ್ಲಿದ್ದಾರೆ.
ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಹಾವಳಿಯ ನಡುವೆ ಮಣ್ಣಿನಿಂದ ತಯಾರಿಸಿದ ವಸ್ತುಗಳನ್ನು ಇಟ್ಟುಕೊಂಡು ಸ್ಪರ್ಧೆ ಮಾಡುವುದು ಇಂದಿನ ವಾತಾವರಣದಲ್ಲಿ ಕಡು ಕಷ್ಟವಾಗಿದೆ. ಕುಂಬಾರರು ಕುಂಬಾರಿಕೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಂಬಾರಿಕೆ ಅವಲಂಬಿತರ ಬದುಕಿನ ಬವಣೆ ಕೇಳುವವರಿಲ್ಲದೆ, ಭವಿಷ್ಯ ಬಂಗಾರವಾಗ ಬೇಕಿದ್ದವರ ಪಾಡು ಅತಂತ್ರವಾಗಿದೆ.
ಹಿಂದೆ ಮಣ್ಣಿನ ಮಡಿಕೆಗೆ ಎಲ್ಲೆಡೆಯೂ ಹೆಚ್ಚಿನ ಬೇಡಿಕೆ ಇತ್ತು. ಆಗ ಕುಂಬಾರರ ಜೀವನ ಸ್ಥಿತಿ ಉತ್ತಮವಾಗಿತ್ತು. ವಿವಾಹ ಸಮಾರಂಭದಲ್ಲಿ ಮಡಿಕೆ, ಕುಡಿಕೆಗಳ ಬಳಕೆ ಹೆಚ್ಚಾಗಿ ಮಾಡಲಾಗುತ್ತಿದೆ. ಹಾಗಾಗಿ ಸಂಪ್ರದಾಯಬದ್ಧವಾದ ಮಡಿಕೆ ಕುಡಿಕೆಗೆ ಶುಭ ಸಮಾರಂಭಗಳಲ್ಲಿ ವಿಶೇಷ ಸ್ಥಾನಮಾನವನ್ನು ನೀಡಲಾಗಿತ್ತು.
ಜೊತೆಗೆ ಆರ್ಥಿಕವಾಗಿ ಕೆಳಮಟ್ಟದಲ್ಲಿದ್ದ ಎಷ್ಟೋ ಬಡ ಕುಟುಂಬಗಳು ಈ ಮಡಿಕೆಗಳಲ್ಲಿ ಆಹಾರ ಪದಾರ್ಥ ಸಿದ್ಧಪಡಿಸಿಕೊಂಡು ರುಚಿಕರವಾದ ಆಹಾರವನ್ನು ಸೇವಿಸುತ್ತಿದ್ದರು. ಹಾಗೆಯೇ ತಂಪಾದ ನೀರನ್ನು ಕುಡಿಯುತ್ತಿದ್ದಂತಹ ಕಾಲವಿತ್ತು. ಮಡಿಕೆಯಿಂದ ತಯಾರಿಸಿದ ಆಹಾರ ಪದಾರ್ಥಗಳಲ್ಲಿನ ರುಚಿ ಮತ್ತು ಅವುಗಳಿಂದ ಹೆಚ್ಚಿನ ಪೋಷಕಾಂಶಗಳು ಸಿಗುತ್ತದಿದ್ದರಿಂದ ಮಡಿಕೆ ಉದ್ಯಮಕ್ಕೆ ಹೆಚ್ಚಿನ ಬೇಡಿಕೆ ಮಾರುಕಟ್ಟೆ ಇತ್ತು ಎಂಬುದನ್ನು ಅಲ್ಲಗೆಳೆಯುವಂತಿಲ್ಲ.
ಮಡಿಕೆಗಳನ್ನು ತಯಾರಿಸಲು ಕೆರೆಯಿಂದ ಮಣ್ಣನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೆರೆಗಳಲ್ಲಿ ಮಡಿಕೆಗೆ ಯೋಗ್ಯವಾದ ಮಣ್ಣು ಲಭ್ಯವಾಗದ ಕಾರಣ ಮಡಿಕೆ ಮಾಡುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಲು ಕಾರಣವಾಗಿದೆ. ಜತೆಗೆ ಆಧುನಿಕತೆಗೆ ಒಗ್ಗಿಕೊಂಡಿರುವ ಜನತೆ ಮಣ್ಣಿನ ಮಡಿಕೆಯನ್ನು ಮೂಲೆಗುಂಪು ಮಾಡಿದ್ದಾರೆ. ಮಾರುಕಟ್ಟೆಗಳಲ್ಲಿ ಮಡಕೆಗಳ ಸ್ಥಾನ ಹಾಗೂ ಮಡಿಕೆ ಮಾಡುವವರು ತಲುಪಿರುವ ಸ್ಥಿತಿಯನ್ನು ಕಂಡಾಗ ನಿಜವಾಗಿಯೂ ಆಯ್ಯೋ ಎಂದೆನಿಸದೆ ಇರದು.
ಕೆಲ ಕುಂಬಾರರು ಮಡಿಕೆ ಕುಡಿಕೆಗಳನ್ನು ಮಾಡುವುದನ್ನು ಬಿಟ್ಟು ಮಣ್ಣಿನ ಇತರೆ ಅಲಂಕಾರಿಕ ವಸ್ತುಗಳು, ಹಾಗೂ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಗೌರಿ, ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಮತ್ತೆ ಕೆಲವರು ಕುಲ ಕಸುಬು ಬಿಟ್ಟು ಬೇರೆ ಉದ್ಯೋಗದತ್ತ ಮುಖ ಮಾಡಿದ್ದರೆ ಮತ್ತೆ ಕೆಲವರು ಕುಂಬಾರ ವೃತ್ತಿಯನ್ನು ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದಾರೆ.
ಒಟ್ಟಿನಲ್ಲಿ ಆಧುನಿಕ ವಸ್ತುಗಳ ಮಾರಾಟದ ಭರಾಟೆಯಲ್ಲಿ ತಲೆತಲಾಂತರಗಳಿಂದ ಬಂದ ಮಡಿಕೆ, ಕುಡಿಕೆಗಳ ಬೇಡಿಕೆ ಕಳೆದುಕೊಂಡಿದೆ. ಮಡಿಕೆಗಳಿಗೆ ಮಾರುಕಟ್ಟೆಯೇ ಇಲ್ಲದಂತಾಗಿರುವ ಹಿನ್ನೆಲೆಯಲ್ಲಿ ಈ ವೃತ್ತಿ ಅವಲಂಬಿಸಿದ್ದ ಕುಟುಂಬಗಳು ಕಣ್ಮರೆಯಾಗುತ್ತಿವೆ.
ಇನ್ನಾದರೂ ಸರ್ಕಾರ ಇಂತಹ ಮೂಲ ಕಸುಬು ಉಳಿಸುವ ನಿಟ್ಟಿನಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ಕುಂಬಾರರ ನೆರವಿಗೆ ನಿಲ್ಲಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

