ಹಾಸನ

ವನಮಹೋತ್ಸವ ಅಂಗವಾಗಿ ಕೃಷಿ ವಿವಿ ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ಗಿಡ ನೆಡುವಿಕೆ

Published On :

ಉದಯಪುರ (ಚನ್ನರಾಯಪಟ್ಟಣ ತಾ.): ಸಮೀಪದ ಊಪಿನಹಳ್ಳಿ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಸಹಕಾರದಿಂದ ರೈತರ ಜತೆಗೂಡಿ ವನಮಹೋತ್ಸವ  ಆಚರಿಸಿದರು. ಅರಣ್ಯಶಾಸ್ತ್ರದ ಪ್ರಾಧ್ಯಾಪಕ ಡಾ.ವೆಂಕಯ್ಯ ಮಾತನಾಡಿ, ಮರಗಳನ್ನು ಬೆಳೆಸುವುದರಿಂದ ಆಗುವ ಉಪಯೋಗ ಮತ್ತು ಪ್ರಕೃತಿಯ ಸಹಜತೆಯನ್ನು ಸುಸ್ಥಿರ ಸ್ಥಿತಿಗೆ ತರುವಲ್ಲಿ ರೈತರ ಪಾತ್ರ ತಿಳಿಸಿಕೊಟ್ಟರು. ಬೆಳೆ ಕ್ರಿಯಾಶಾಸ್ತ್ರ ಪ್ರಾಧ್ಯಾಪಕ ಡಾ.ಬಾಹುಸಾಹೇಬ ತೊಂಬಟ್ ಮಾತನಾಡಿ, ವನಮಹೋತ್ಸವದ ಪ್ರಾಮುಖ್ಯತೆಯನ್ನು  ಮತ್ತು ಹವಾಮಾನದಲ್ಲಿ ಆಗುತ್ತಿರುವ ವ್ಯತ್ಯಾಸಗಳಿಂದ ಭೂಗರ್ಭದಲ್ಲಿ ಆಗುವ ಪರಿಣಾಮ ತಿಳಿಸಿದರು. ಕೃಷಿ ಎಂಜಿನಿಯರಿಂಗ್ ಶಾಸ್ತ್ರದ ಪ್ರಾಧ್ಯಾಪಕ ನಾರಾಯಣಸ್ವಾಮಿ ಮಾತನಾಡಿ, ನಾವು ಉತ್ತಮ ಆರೋಗ್ಯಕ್ಕಾಗಿ ಮತ್ತು ಮುಂದಿನ ಪೀಳಿಗೆಗಾಗಿ ಗಿಡಗಳನ್ನು ನೆಟ್ಟು ನಮ್ಮ ಮಕ್ಕಳಂತೆ ನೋಡಿಕೊಂಡು ಬೆಳೆಸಬೇಕು ಎಂದು ಹೇಳಿದರು. ಆಹಾರ ತಂತ್ರಜ್ಞಾನ ಪ್ರಾಧ್ಯಾಪಕಿ ಭಾರತಿ ಮಿರಾಜಕರ್ ಮಾತನಾಡಿ, ಹಣ್ಣಿನ ಮರಗಳನ್ನು ಬೆಳೆಸುವುದರಿಂದ  ಆಹಾರದಲ್ಲಿ  ಪೋಷಕಾಂಶ  ಕೊರತೆಯನ್ನು  ನೀಗಿಸಬಹುದು ಎಂದು ನುಡಿದರು. ವನಮಹೋತ್ಸವದ ಪ್ರಾಮುಖ್ಯತೆ ಮತ್ತು ಉದ್ದೇಶಗಳನ್ನು ಮಾತನಾಡಿದ ನಂತರ ಸಾರ್ವಜನಿಕ ಸ್ಥಳಗಳಿಗೆ  ರೈತರು ಮತ್ತು  ವಿದ್ಯಾರ್ಥಿಗಳು ಜತ್ರೋಪ, ಹಿಪ್ಪೆ, ಬೇವು,  ಸಿಮರೂಬ, ಹೊಂಗೆ ಮರಗಳನ್ನು ನೆಟ್ಟರು. ರೈತರಿಗೆ  ಹಲಸು, ಮಾವು, ನೇರಳೆ, ಸಪೋಟ ಸಸಿಗಳನ್ನು ಉಚಿತವಾಗಿ ನೀಡಿ ಅದನ್ನು ಅವರ ಜಮೀನಿನಲ್ಲಿ ನೆಡಲು ತಿಳಿಸಲಾಯಿತು.

ಪ್ರಭಾವತಿ ಜೋಶಿ ಅಧಿಕಾರ ಸ್ವೀಕಾರ
ಹಾಸನ: ಚಿಕ್ಕಮಗಳೂರಿನ ಕಾರ್ಮಿಕರ ಭವಿಷ್ಯನಿಧಿ ಕಚೇರಿಯ ಪ್ರಭಾವತಿ ಬಿ. ಜೋಶಿ ಅವರು ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಕಾರ್ಮಿಕರ ಭವಿಷ್ಯನಿಧಿ ಕಚೇರಿಯು ಕೇಂದ್ರ ಕಾರ್ಮಿಕ ಸಚಿವಾಲಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚಿಕ್ಕಮಗಳೂರಿನಲ್ಲಿ ಉಪ ಕ್ಷೇತ್ರೀಯ ಕಚೇರಿ ಹೊಂದಿದೆ. ಈ  ಕಚೇರಿ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ಕಚೇರಿಯು ಸುಮಾರು 1,30,000 ಸದಸ್ಯರ ಲೆಕ್ಕಪತ್ರಗಳನ್ನು ಹೊಂದಿದ್ದು, ಮಾಸಿಕ 70 ಸಾವಿರ ಚಂದಾದಾರರು ಹಾಗೂ 11 ಸಾವಿರ ಪಿಂಚಣಿದಾರರಿಗೆ ಸೇವೆ ಸಲ್ಲಿಸುತ್ತಿದೆ. ಸುಮಾರು 2500 ನಾನಾ ಸಂಸ್ಥೆಗಳು ಭವಿಷ್ಯನಿಧಿ ಕಾಯ್ದೆಯಡಿ ನೋಂದಣಿಯಾಗಿವೆ. 20 ಹಾಗೂ ಹೆಚ್ಚಿನ ನೌಕರರನ್ನು ಹೊಂದಿರುವ ಸಂಸ್ಥೆಗಳು, ಉದಾ- ಶಾಲೆ, ಕಾಲೇಜು, ಎಸ್ಟೇಟ್, ಕಾರ್ಖಾನೆಗಳು, ಸಾರಿಗೆ ಸಂಸ್ಥೆಗಳು, ಕಾಫಿ ಕ್ಯೂರಿಂಗ್‌ಗಳು, ಹೋಟೆಲ್, ಲಾಡ್ಜ್‌ಗಳು, ವ್ಯಾಪಾರ ಸಂಸ್ಥೆಗಳು, ಸೆಕ್ಯೂರಿಟಿ ಸಂಸ್ಥೆಗಳು ಇತ್ಯಾದಿ ಭವಿಷ್ಯನಿಧಿ ಸೌಲಭ್ಯ ನೀಡುವುದು ಕಡ್ಡಾಯವಾಗಿದೆ. ಅಲ್ಲದೆ ಪ್ರತಿ ತಿಂಗಳು 15ನೇ ತಾರೀಖಿನೊಳಗೆ ಆನ್‌ಲೈನ್ ಮೂಲಕ ಹಣ ಪಾವತಿ ಮಾಡದಿದ್ದಲ್ಲಿ ದಂಡ ಹಾಗೂ ಬಡ್ಡಿ ಪಾವತಿಸ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.