ಹಾಸನ

ಸೆರೆವಾಸದ ಜೊತೆಗೆ ವನವಾಸ!

Published On :

-ಪಿ.ರವಿಕುಮಾರ್
ಹಾಸನ: ಜಿಲ್ಲೆಯ ಉಪ ಕಾರಾಗೃಹ 1897ರ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದು, 134 ವರ್ಷಗಳಷ್ಟು ಹಳೆಯದಾಗಿದೆ. ಜೈಲಿನ ಗೋಡೆಗಳು ಶಿಥಿಲಗೊಂಡಿದ್ದು, ಯಾವ ಸಂದರ್ಭದಲ್ಲಾದರೂ ಗೋಡೆಗಳು ಬೀಳಬಹುದೆಂಬ ಆತಂಕ ನಿರ್ಮಾಣವಾಗಿದೆ.
ಕೈದಿಗಳು ಪರಾರಿಯಾದರೆ ಅದಕ್ಕೆ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊಣೆ ಮಾಡಿವುದು ಸಹಜ. ಆದರೆ ಜೈಲೇ ಸುರಕ್ಷಿತವಾಗಿರದಿದ್ದರೆ, ಇದಕ್ಕೆ ಯಾರನ್ನು ಹೊಣೆಯಾಗುತ್ತಾರೆ ಎಂಬ ಪ್ರಶ್ನೆ ಕಾಡತೊಡಗದು.
ಜೈಲ್ ಗೋಡೆ ಕುಸಿಯುವ ಭೀತಿಯ ನಡುವೆ ಕೈದಿಗಳ ಸಂಖ್ಯೆ ಹೆಚ್ಚಾಗಿರುವುದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಕನಿಷ್ಠ ಮಲಗುವುದಕ್ಕೂ ಸ್ಥಳಾವಕಾಶ ಇಲ್ಲದೆ ಅಪರಾಧಿಗಳು ಸೆರೆವಾಸದ ಜೊತೆಗೆ ವನವಾಸ ಪಡುತ್ತಿದ್ದಾರೆ. ಇದು ಹಾಸನ ಜಿಲ್ಲಾ ಕಾರಾಗೃಹದಲ್ಲಿರೋ ಕೈದಿಗಳ ಅಳಲು.
219 ಮಂದಿ ಬದಲು 328 : ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಜೈಲ್‌ನಲ್ಲಿ ಕೇವಲ 6 ಬ್ಲಾಕ್ ಜತೆಗೆ ಒಂದು ಜೈಲ್  ಇದೆ. 219 ಮಂದಿ ಕೈದಿಗಳಷ್ಟೆ ಇಲ್ಲಿ ಉಳಿದುಕೊಳ್ಳಬಹುದಾಗಿದೆ. ಆದ್ರೆ ಹಾಲಿ ಹಾಸನ ಜೈಲ್‌ನಲ್ಲಿ ಬರೋಬ್ಬರಿ 328 ಕೈದಿಗಳಿದ್ದಾರೆ. ಹೀಗಾಗಿ, ಮೂಲಭೂತ ಸೌಕರ್ಯಗಳಿರಲಿ, ಒಂದೊಂದು ಬ್ಲಾಕ್‌ನಲ್ಲಿ ನಿಗದಿಗಿಂತಲೂ ಹೆಚ್ಚಿನ ಕೈದಿಗಳು ಇರುವುದರಿಂದ ಕನಿಷ್ಠ ಮಲಗುವುದಕ್ಕೂ ಜಾಗವಿಲ್ಲದೆ, ಉಸಿರುಗಟ್ಟುವ ವಾತಾವರಣದಲ್ಲಿ ತಪ್ಪಿತಸ್ಥರು ಸೆರೆವಾಸ ಅನುಭವಿಸಬೇಕಾಗಿದೆ.  ಮತ್ತೊಂದೆಡೆ 328 ಕೈದಿಗಳನ್ನು ನೋಡಿಕೊಳ್ಳಲು ಇರೋದು ಅಧೀಕ್ಷಕ ಸೇರಿ ಕೇವಲ 28 ಮಂದಿ ಸಿಬ್ಬಂದಿ ಮಾತ್ರ. ಇನ್ನೂ 10 ಮಂದಿಯ ಕೊರತೆ ಇದೆ. ಇದು ಒಳಗಿನ ಸಮಸ್ಯೆಯಾದರೆ, ಜೈಲ್‌ಗೋಡೆ ಶಿಥಲವಾಗಿದ್ದು, ಯಾವಾಗ ಬೀಳುತ್ತದೋ ಗೊತ್ತಿಲ್ಲ. ಈ ಸ್ಥಿತಿಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲವು ದುಷ್ಕರ್ಮಿಗಳು ಗಾಂಜಾ, ಮದ್ಯ ಮೊಬೈಲ್ ಇತ್ಯಾದಿಗಳನ್ನು ಜೈಲ್ ಒಳ ಎಸೆಯುವ ಯತ್ನ ಮಾಡುತ್ತಿರುವುದು ಅಧಿಕಾರಿಗಳು ಸಿಬ್ಬಂದಿಗೆ ತಲೆನೋವಾಗಿದೆ ಪರಿಣಮಿಸಿದೆ.
ಸ್ಥಳಾಂತರ ನನೆಗುದಿಗೆ: ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಜೈಲ್ ಸ್ಥಳಾಂತರ ಮಾಡುವ ಐದಾರು ವರ್ಷಗಳ ಪ್ರಯತ್ನ ಕಾರ್ಯಗತವಾಗದೇ ಇರುವುದು ಯಾವಾಗ ಏನಾಗುವುದೋ ಅನ್ನೋ ಆತಂಕ ಮೂಡಿಸಿದೆ. ಕಟ್ಟಡ ಹಳೆದಾಗಿರುವುದರಿಂದ ಗೋಡೆಗಳೆಲ್ಲಾ ಪಾಚಿಕಟ್ಟಿವೆ. ಜೈಲ್ ಅಂದ್ರೆ ಗೋಡೆಯ ಮೇಲೆ ಕಬ್ಬಿಣದ ಕಂಬ ನೆಟ್ಟು ತಂತಿ ಬೇಲಿ ಅಳವಡಿಸಬೇಕು. ಆದರೆ, ಆ ಕೆಲಸ ಮಾಡಲು ಹೋದರೆ ಗೋಡೆಯೇ ಕುಸಿದು ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಅಂಶವನ್ನು ಮಾನವ ಹಕ್ಕುಗಳ ವೇದಿಕೆ ಸದಸ್ಯರೇ ತಿಳಿಸಿದ್ದಾರೆ.
ಚಿಕ್ಕದಾದ ಕೋಣೆ: ಚಿಕ್ಕದಾದ ಕೋಣೆಯಲ್ಲೇ ಸುಮಾರು 30ರಿಂದ 40 ಮಂದಿ ಕೈದಿಗಳು ಮಲಗಬೇಕು ಹಾಗೂ ಅತೀ ಚಿಕ್ಕದಾದ ಹಾಗೂ ಗಾಳಿ ಬೆಳಕು ಇಲ್ಲದಂತಹ ಕೋಣೆಯಲ್ಲೇ 18 ಮಂದಿ ಮಹಿಳಾ ಕೈದಿಗಳು ಹಾಗೂ ಒಂದು ಮಗು ಮಲಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯ ಸಿ.ಜಿ.ಹುನುಗುಂದ ಅವರು ಹಾಸನ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಕೈದಿಗಳ ಕುಂದುಕೊರತೆ ವಿಚಾರಿಸಿ, ಪುರುಷ ಹಾಗೂ ಮಹಿಳಾ ಕೈದಿಗಳನ್ನು ಮುಖಾಮುಖಿಯಾಗಿ ಜೈಲ್‌ನಲ್ಲಿರುವ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೈಲಿನ ಕಟ್ಟಡ ಮತ್ತು ಗೋಡೆ ತುಂಬಾ ಹಳೆಯದಾಗಿದ್ದು, ಹೇಳಿಕೊಳ್ಳುವ ಭದ್ರತೆ ಇಲ್ಲದಾಗಿದೆ. ಈ ಹಿನ್ನೆಲೆಯಲ್ಲಿ ಜೈಲ್‌ನ ಭದ್ರತೆಗಾಗಿ ಯಾವ ಕ್ರಮ ಕೈಗೊಳ್ಳಬೇಕು ಅನ್ನುವುದರ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದರು.
ಒಟ್ಟಿನಲ್ಲಿ ಕೈದಿಗಳು ಪರಾರಿಯಾದಾಗ ಅಥವಾ ಏನಾದ್ರೂ ತೊಂದರೆಯಾಗುವ ಮುನ್ನ ಇದನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಪರಿಹಾರ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.