ತಾರಕಕ್ಕೇರಿದ ನಕಲಿ-ಅಸಲಿ ಸಮರ
-ಪಿ.ರವಿಕುಮಾರ್
ಹಾಸನ: ಜಿಲ್ಲೆ ಹಾಗೂ ತಾಲೂಕಿನಲ್ಲಿ ಕೆಲ ನಕಲಿ ಗುತ್ತಿಗೆದಾರರು ಹಾಗೂ ಮೀನುಗಾರರ ಹಾವಳಿ ಹೆಚ್ಚಾಗಿದ್ದು, ಇದರಿಂದ ನಿಜವಾದ ಮೀನುಗಾರರ ವೃತ್ತಿಗೆ ತೊಂದರೆ ಉಂಟಾಗಿದೆ.
ಕಳೆದ ತಿಂಗಳು ಮೂವರು ಮೀನುಗಾರರು ಹರಗೋಲು ಮುಳುಗಿ ಮೃತಪಟ್ಟ ಘಟನೆ ನಡೆದ ನಂತರ, ಜಿಲ್ಲೆಯಲ್ಲಿ ನಕಲಿ ಗುತ್ತಿಗೆದಾರರು ಹಾಗೂ ಮೀನುಗಾರರ ಬಣ್ಣ ಬಯಲಾಗಿದೆ. ಇದರಿಂದ ಈ ಕೂಡಲೇ ನಕಲಿ ಗುತ್ತಿಗೆ ರದ್ದುಪಡಿಸಿ ಸರ್ಕಾರ ಮೀನುಗಾರರಿಗೆ ಪರವಾನಿಗೆ ನೀಡಬೇಕು ಎಂದು ಹೇಮಾವತಿ ಜಲಾಶಯ ಮೀನುಗಾರರ ಅಭಿವೃದ್ಧಿ ಸಂಘ ಒತ್ತಾಯಿಸಿದೆ.
30 ದೊಡ್ಡ ಕೆರೆಗಳು: ಜಿಲ್ಲೆಯಲ್ಲಿ ಮೂರು ಜಲಾಶಯಗಳಿದ್ದು, 30 ದೊಡ್ಡ ಕೆರೆಗಳಿವೆ. ಜೊತೆಗೆ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಮಂದಿ ಮೀನುಗಾರರಿದ್ದು, ತಾಲೂಕಿನಲ್ಲಿ ಸುಮಾರು 300 ಮಂದಿ ನಿಜವಾದ ಮೀನುಗಾರರಿದ್ದಾರೆ. ಆದರೆ ಇತ್ತೀಚೆಗೆ ನಕಲಿ ಮೀನುಗಾರರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಅರ್ಹ ಮೀನುಗಾರರು ಸ್ವತಂತ್ರವಾಗಿ ಮೀನುಗಾರಿಕೆ ಮಾಡಿಕೊಂಡು ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇನಾಮಿ ಹೆಸರಿನಲ್ಲಿ ಸಂಘ: ಕೆಲವರು ಹೇಮಾವತಿ ಜಲಾಶಯ ಮೀನುಗಾರಿಕೆ ಅಭಿವೃದ್ಧಿ ಸಂಘ ಎಂಬ ಬೇನಾಮಿ ಹೆಸರಿನಲ್ಲಿ ಸಂಘವನ್ನು ರಚಿಸಿಕೊಂಡು ಮೀನುಗಾರರಲ್ಲದವರಿಗೂ ಸಹ ನಕಲಿ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಮಹಾಮಂಡಳಿಯ ಹೆಸರಿನಲ್ಲಿ ಮೀನುಗಾರರ ಸಂಘ ಎಂದು ಹೇಳಿಕೊಂಡು ಸಾಕಷ್ಟು ಅವ್ಯವಹಾರ ನಡೆಸಲಾಗುತ್ತಿದೆ. ನಕಲಿ ಮೀನುಗಾರರ ಹಾವಳಿಯಿಂದಾಗಿ ಅನಾಹುತಗಳು ಹೆಚ್ಚಾಗುತ್ತಿದೆ.
ಅಗತ್ಯ ಪರಿಕರಗಳಿಲ್ಲ: ಮೀನು ಹಿಡಿಯಲು ಗುತ್ತಿಗೆ ಪಡೆದಂತಹ ಗುತ್ತಿಗೆದಾರರು ಮೀನುಗಾರರಿಗೆ ಸೂಕ್ತವಾದ ರಕ್ಷಾ ಕವಚಗಳನ್ನು ನೀಡಿಲ್ಲ, ಜೊತೆಗೆ ಅವರಿಗೆ ಭದ್ರತೆಯನ್ನು ಒದಗಿಸಿಲ್ಲ. ಇಷ್ಟು ದೊಡ್ಡ ಜಲಾಶಯದಲ್ಲಿ ಮೀನು ಹಿಡಿಯುವವರಿಗೆ ರಕ್ಷಣಾ ಕವಚಗಳನ್ನು (ಲೈಫ್‌ಜಾಕೆಟ್) ನೀಡದ ಕಾರಣ ಅನಾಹುತಗಳು ಹೆಚ್ಚಾಗಿ ಬಡ ಮೀನುಗಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಲೈಫ್‌ಜಾಕೆಟ್ ಮತ್ತು ಸುವ್ಯವಸ್ಥಿತವಾಗಿ ಇರುವ ನಾಡ ದೋಣಿ ನೀಡಿದ ಕಾರಣ ದುರಂತಗಳು ಹೆಚ್ಚಾಗುತ್ತಿವೆ. ಜೊತೆಗೆ ಮೀನುಗಾರರಿಗೆ ಹಿಡಿದ ಕೆಜಿ ಮೀನಿಗೆ 35 ರು. ಗಳನ್ನು ಗುತ್ತಿಗೆದಾರರು ನೀಡುತ್ತಾರೆ. ಆದ್ರೆ ಮೀನುಗಾರರಿಂದ ಗುತ್ತಿಗೆದಾರರು ಪಡೆದುಕೊಂಡಂತಹ ಮೀನನ್ನು 80ರಿಂದ 100 ರು.ಗಳ ವರೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಮೀನುಗಾರಿಗೆ 60 ರಿಂದ 70 ರು.ಗಳನ್ನು ನೀಡಬೇಕೆಂಬ ನಿಯಮವಿದ್ದರೂ ಸಹ ಕಡಿಮೆ ಹಣವನ್ನು ನೀಡುತ್ತಿದ್ದಾರೆ. ಈ ವಿರುದ್ಧ ಮೀನುಗಾರರು ಹೋರಾಡಲಾಗದೆ ಅಸಹಕಾರಿಯಾಗಿದ್ದಾರೆ.
ಗುತ್ತಿಗೆದಾರರು ಜಲಾಶಯಗಳಲ್ಲಿ ಕಡಿಮೆ ಮೀನುಗಳನ್ನು ಬಿಟ್ಟು, ಜಲಾಶಯಗಳಲ್ಲಿ ಇರುವಂತಹ ನಾನಾ ಜಾತಿಯ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಮೀನುಗಾರರು ಗುತ್ತಿಗೆದಾರರನ್ನು ಪ್ರಶ್ನಿಸಿದರೇ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಇದರಿಂದ ಮೀನುಗಾರರು ತಮ್ಮ ಕಷ್ಟಗಳನ್ನು ಯಾರೊಂದಿಗೂ ಹೇಳಿಕೊಳ್ಳಲಾಗದಂತಹ ಅತಂತ್ರ ಸ್ಥಿತಿಯಲ್ಲಿ ಉಳಿದಿದ್ದಾರೆ.
ಪರವಾನಗಿ ಮೊತ್ತ ಹೆಚ್ಚಳ: ಮೀನುಗಾರರಿಗೆ ಸರ್ಕಾರದ ವತಿಯಿಂದ 2006 ರ ಆದೇಶದ ಪ್ರಕಾರ ಮೀನು ಹಿಡಿಯಲು ಪರವಾನಗಿ ಮೊತ್ತ ಹೆಚ್ಚಿಸಿ ಸರ್ಕಾರದಿಂದಲೇ ಪರವಾನಗಿಯನ್ನು ನೀಡಬೇಕು. ಸ್ವತಂತ್ರವಾಗಿ ಮೀನು ಡಿಯಲು ಜಿಲ್ಲಾಡಳಿತ ರಕ್ಷಣೆ ನೀಡುವುದರ ಮೂಲಕ ಮೀನು ಹಿಡಿಯುವುದಕ್ಕೆ ಅವಕಾಶ ಮಾಡಿಕೊಡಬೇಕು. ಸ್ಥಳೀಯ ಮೀನುಗಾರರ ಸಂಘ ಹೊರತುಪಡಿಸಿ ಯಾವುದೇ ಸಂಘ ಸಂಸ್ಥೆಗಳಿಗೆ ಮೀನುಪಾಶುವಾರು ನಿರ್ವಹಣೆ ನೀಡಬಾರದು ಎಂಬ ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.
ಸಾವನ್ನಪ್ಪಿದ ಮೀನುಗಾರರಿಗೆ ಪರಿಹಾರ ನೀಡಿಲ್ಲ: ಕಳೆದ ತಿಂಗಳು ಮೂರು ಮಂದಿ ಮೀನುಗಾರರು ಹರಗೋಲು ಮುಳುಗಿ ಮೃಪಟ್ಟು ತಿಂಗಳು ಕಳೆದಿದ್ದರೂ, ಗುತ್ತಿಗೆ ಪಡೆದಂತಹ ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿಯವರಾಗಲಿ, ಹೇಮಾವತಿ ಜಲಾಶಯದ ಮೀನುಗಾರಿಕೆ ಅಭಿವೃದ್ಧಿ ಸಂಘದವರಾಗಲಿ ಯಾವುದೇ ಪರಿಹಾರ ನೀಡುತ್ತಿಲ್ಲ. ಈ ಸಾವಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕೈಕಟ್ಟಿ ಕುಳಿತಿದ್ದಾರೆ.ಇನ್ನಾದರೂ ಸರ್ಕಾರ ಮೀನುಗಾರಿಕೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಪತ್ತೆ ಹಚ್ಚಿ ನಿಜವಾದ ಮೀನುಗಾರರಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

