ಸಕಲೇಶಪುರ ಗಣಪತಿ ವಿಸರ್ಜನೆ
ಸಕಲೇಶಪುರ: ಪಟ್ಟಣದ ಹಾಡ್ಯಸುಬ್ಬೆಗೌಡರ ಪುರಭವನದಲ್ಲಿ ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಯನ್ನು ಇತ್ತೀಚೆಗೆ ವಿಜೃಂಭಣೆಯಿಂದ ಹೇಮಾವತಿ ನದಿಯಲ್ಲಿ ವಿಸರ್ಜಿಸಲಾಯಿತು. ಕೀಲು ಕುದುರೆ, ಹುಲಿವೇಷ ಸೇರಿದಂತೆ ವಿವಿಧ ರೀತಿಯ ಜಾನಪದ ಕಲಾಪ್ರಕಾರಗಳು ಕುಣಿತ ಹಾಗೂ ಹಲವು ಬಗೆಯ ವಾದ್ಯವೃಂದವರು ನಾದದ ಅಲೆ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು. ವಾದ್ಯದ ನಿನಾದಕ್ಕೆ ಯುವಕರು ಮಾತ್ರವಲ್ಲ, ಯುವತಿಯರೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಸಂಜೆ 4 ರಿಂದ ರಾತ್ರಿ 10 ರವರಗೆ ಮಳೆ ಬಿಡುವು ನೀಡಿದ ಪರಿಣಾಮ ಗಣಪತಿ ವಿಸರ್ಜನಾ ಮಹೋತ್ಸವ ಕಳೆಕಟ್ಟಿತ್ತು.ಬಣ್ಣ ಬಣ್ಣದ ಪಟಾಕಿಗಳು ಅಗಸದಲ್ಲಿ ಚಿತ್ತಾರ ಬಿಡಿಸಿದರೆ, ಗಣಪತಿ ಸೇವಾ ಸಮಿತಿ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸೇವಾ ಸಮಿತಿ ಅಧ್ಯಕ್ಷ ಸುರೇಶ್, ರವಿಕುಮಾರ್, ಸತೀಶ್, ಗುರುಮೂರ್ತಿ ಮುಂತಾದವರು ಗಣಪತಿ ವಿಸರ್ಜನಾ ಮಹೋತ್ಸವ ನೇತೃತ್ವ ವಹಿಸಿದ್ದರು.
ಕಲ ಬೆರಕೆ ಗೊಬ್ಬರ ಮಾರಾಟ: ತನಿಖೆಗೆ ರೈತರ ಒತ್ತಾಯ
ಸಕಲೇಶಪುರ: ತಾಲೂಕಿನಲ್ಲಿ ಕೆಲಬೆರಕ್ಕೆ ರಸಗೊಬ್ಬರ ಮಾರಾಟ ತಡೆಯುವ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವ ಅಗತ್ಯವಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹೆತ್ತೂರು ದೇವರಾಜ್ ಒತ್ತಾಯಿಸಿದ್ದಾರೆ. ಈ ಸಂಬಂಧ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಪದೇ ಪದೇ ಕಳಪೆ ರಸಗೊಬ್ಬರ ಪತ್ತೆಯಾಗುತ್ತಿರುವುದರಿಂದ ರೈತರು ಕಂಗಲಾಗುವಂತೆ ಮಾಡಿದೆ. ಅಪಾರ ಹಣ ಕೊಟ್ಟು ಖರೀದಿಸುವ ರಸಗೊಬ್ಬರದಲ್ಲಿ ಮಣ್ಣು, ಕಲ್ಲು ಹಾಗೂ ಮರಳು ಪತ್ತೆಯಾಗುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗದಾಗಿದೆ. ಇತ್ತೀಚಿಗೆ ಪ್ರತಿಷ್ಠಿತ ಟಾಟಾ ಕಂಪನಿಗೆ ಸೇರಿದ ಗೊಬ್ಬರ ಅಂಗಡಿಯಲ್ಲಿ ವಿತರಿಸಲಾಗಿದ್ದ ಪೊಟಾಷ್ ರಸ ಗೊಬ್ಬರಗಳಲ್ಲಿ ಮಣ್ಣಿನ ಗೆಡ್ಡಿ ಹಾಗೂ ಅತಿಯಾಗಿ ಮರಳು ಮಿಶ್ರಣ ಮಾಡಿ ಮಾರಾಟವಾಗಿದ್ದನ್ನು ಪತ್ತೆ ಹಚ್ಚಲಾಗಿದೆ. ಆದರೆ, ಘಟನೆ ನಡೆದು ವಾರ ಕಳೆದರೂ ಇದುವರೆಗೆ ಯಾವುದೇ ಕ್ರಮ ಜರುಗಿಸಲಾಗಿಲ್ಲ. ನಕಲಿ ಗೊಬ್ಬರ ಪತ್ತೆಮಾಡಿರುವ ವ್ಯಕ್ತಿಗೆ ಅನಾಮಿಕ ವ್ಯಕ್ತಿಗಳು ಕರೆಮಾಡಿ ಜೀವ ಬೇದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು. ರೈತ ಮುಖಂಡರಾದ ಕುಮಾರ್ ವಿಜಯ್, ನಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಶಾಂತಿ ದಿನಾಚರಣೆ: ವಿದ್ಯಾರ್ಥಿಗಳಿಂದ ಜಾಥಾ
ಹಾಸನ: ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆ ಮತ್ತು ರೋಟರಿ ಕ್ಲಬ್ ಹಾಸನ ಮಿಡ್ಟೌನ್ ಆಶ್ರಯದಲ್ಲಿ ವಿಶ್ವಶಾಂತಿ ದಿನ ಆಚರಿಸಲಾಯಿತು. ಈ ವೇಳೆ ವಿದ್ಯಾರ್ಥಿಗಳು ಶಾಂತಿ ಸಂದೇಶ ಸಾರುವ ಹಾಡುಗಳು ಮತ್ತು ನೃತ್ಯ ರೂಪಕವನ್ನು ಪ್ರದರ್ಶಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಂತಿ ಸಂದೇಶ ಸಾರುವ ಘೋಷಣೆಗಳೊಂದಿಗೆ ಮೆರವಣಿಗೆ ಹೊರಟು ಎಂ.ಜಿ. ರಸ್ತೆ, ಆರ್.ಸಿ. ರಸ್ತೆ ಮೂಲಕ ಸಾಗಿ ಸ್ಲೇಟರ್ಹಾಲ್ ಮುಂಭಾಗದ ವೃತ್ತದಲ್ಲಿ ಸಮೂಹ ಗೀತೆ ಮತ್ತು ನೃತ್ಯ ರೂಪಕ ಪ್ರಸ್ತುತ ಪಡಿಸಿದರು. ಇದಕ್ಕೂ ಮುನ್ನ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಆರ್. ಸತ್ಯನಾರಾಯಣ ಇದ್ದರು. ಮಕ್ಕಳ ತಜ್ಞ ಡಾ. ಸುಧೀರ್ ವಿಶ್ವಶಾಂತಿಗೆ ರೋಟರಿ ಸಂಸ್ಥೆಯ ಕೊಡುಗೆಯ ಬಗ್ಗೆ ಮಕ್ಕಳಿಗೆ ತಿಳಿಸಿದರು. ಶಾಲೆಯ ಆಡಳಿತಾಧಿಕಾರಿಗಳು ತಮ್ಮ ಸಂದೇಶದಲ್ಲಿ ಶಾಂತಿಯುತವಾದ ಸಮಾಜ ಕಟ್ಟಲು ವಿದ್ಯಾರ್ಥಿಗಳು ಶ್ರಮಿಸಬೇಕೆಂದು ಅಭಿಪ್ರಾಯಪಟ್ಟರು. ರೋಟರಿ ಸಂಸ್ಥೆ ಕಾರ್ಯದರ್ಶಿ ಎನ್. ವಿಶ್ವನಾಥ್, ವಿಜಯ ವಿದ್ಯಾಸಂಸ್ಥೆಯ ವೈ.ಎನ್. ಸುಬ್ಬಸ್ವಾಮಿ, ಮುಖ್ಯ ಶಿಕ್ಷಕಿ ರೋಸ್ಮೇರಿ ಇದ್ದರು. ಶಿಕ್ಷಕಿ ನಾಜಿಮಾ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

