ಜಿಲ್ಲೆಯಲ್ಲಿ 92 ಸರ್ಕಾರಿ ಶಾಲೆ ಬಂದ್
-ದಯಾಶಂಕರ ಮೈಲಿ
ಹಾಸನ: ಇದು ಕನ್ನಡ ಭಾಷೆ ಬೆಳವಣಿಗೆ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಂತೂ ಅಲ್ಲವೇ ಅಲ್ಲ... ಇಂಗ್ಲಿಷ್ ವ್ಯಾಮೋಹ, ಮತ್ತು ಪ್ರಭಾವದಿಂದ ಜಿಲ್ಲಾದ್ಯಂತ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಟ್ಟ ಪ್ರಕ್ರಿಯೆ ಮುಂದುವರಿದಿದೆ.
ಈಗ ಜಿಲ್ಲೆಯಲ್ಲಿ 87 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು 5 ಹಿರಿಯ ಪ್ರಾಥಮಿಕ ಶಾಲೆಗಳನ್ನು ಬಂದ್ ಮಾಡಲಾಗಿದೆ. ಇದಕ್ಕೆ ಕಾರಣ ಪೋಷಕರ ಅಪಾರ ಇಂಗ್ಲಿಷ್ ವ್ಯಾಮೋಹ ಎಂದೇ ಹೇಳಲಾಗುತ್ತಿದೆ.
ಈ ವ್ಯಾಮೋಹ ಎಷ್ಟರ ಮಟ್ಟಿಗೆ ಇದೆಯೆಂದರೇ, ಹಾಸನ ನಗರದ 20 ಕಿಮೀ ದೂರದಲ್ಲಿರುವ ಹಳ್ಳಿಗಳಿಗೆ ಖಾಸಗಿ ಆಂಗ್ಲ ಶಾಲೆಗಳ ವಾಹನಗಳು ಹೋಗಿ ಮಕ್ಕಳನ್ನು ಕರೆದುಕೊಂಡು ಬರುತ್ತವೆ. ಕಾಲಕ್ಕೆ ತಕ್ಕಂತೆ ನಡೆಯಬೇಕು. ಇಲ್ಲದಿದ್ದರೆ ಬದುಕು ನಡೆಯುವುದಿಲ್ಲ. ಹಾಗಾಗಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತೇವೆ. ಕನ್ನಡಕ್ಕಾಗಿ ಹೋರಾಟ ಮಾಡುವ ಮಂದಿಯ ಭಾಷಣ ವೇದಿಕೆಗೆ ಸೀಮಿತವಾಗಿರುತ್ತದೆ ಹೊರತು ತಮ್ಮ ಮನೆಗೆ ಸಂಬಂಧಪಟ್ಟಿರುವುದಿಲ್ಲ.
ಸರ್ಕಾರಿ ಅಧಿಕಾರಿಗಳು, ಕನ್ನಡ ಹೋರಾಟಗಾರರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳುತ್ತಿರಬೇಕಾದರೆ ನಮ್ಮ ಮಕ್ಕಳು ಸರ್ಕಾರಿ ಶಾಲೆಗೆ ಹೋಗಿ ಬೀದಿಲೀ ನಿಲ್ಲಬೇಕಾ ಎಂಬ ವಾದ ಪೋಷಕರದ್ದಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ, ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಮನೆ ಎಂಬ ಘಟಕ ತೆರೆದು ಅಲ್ಲಿ ಎಬಿಸಿಡಿ ಕಲಿಸಲಾರಂಭಿಸಿತು. ಆದರೆ ಇದರಿಂದಷ್ಟೇ ಗ್ರಾಮೀಣ ಮತ್ತು ನಗರ ಪ್ರದೇಶದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಶಾಲೆಗೆ ಕಳುಹಿಸುವುದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂಬುದಕ್ಕೆ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವುದು ಬಿರುಸಿನಿಂದ ಸಾಗಿರುವುದು ಉತ್ತಮ ನಿದರ್ಶನವಾಗಿ ಕಾಣುತ್ತಿದೆ.
ಆತಂಕಕಾರಿ ಅಂಶ: ಈ ಸಂಖ್ಯೆಯನ್ನು ಗಮನಿಸಿದರೆ ಸರ್ಕಾರಿ ಶಾಲೆಗಳ ದುಸ್ಥಿತಿ ತಿಳಿಯುತ್ತದೆ. ಜಿಲ್ಲೆಯಲ್ಲಿ 62 ಎಲ್ಪಿಎಸ್, 235 ಎಚ್ಪಿಎಸ್, ಅನುದಾನ ರಹಿತ ಇಂಗ್ಲಿಷ್ ಶಾಲೆಗಳಿದ್ದು, ಅಲ್ಲಿ 65,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2 ಎಲ್ಪಿಎಸ್ ಹಾಗೂ 46 ಎಚ್ಪಿಎಸ್ ಅನುದಾನಿತ ಖಾಸಗಿ ಶಾಲೆಗಳಲ್ಲಿ 4,500 ಮಕ್ಕಳು ಇದ್ದಾರೆ. ಆದರೆ 1390 ಎಲ್ಪಿಎಸ್ ಹಾಗೂ 998 ಎಚ್ಪಿಎಸ್ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2,388 ವಿದ್ಯಾರ್ಥಿಗಳು ಮಾತ್ರ ಓದುತ್ತಿದ್ದಾರೆ. ಇದನ್ನು ಅವಲೋಕಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವುದು ಎಗ್ಗಿಲ್ಲದೇ ಸಾಗುತ್ತದೆ ಎಂಬ ಆತಂಕಕಾರಿ ಅಂಶ ಗೊತ್ತಾಗುತ್ತದೆ.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ: ಜಿಲ್ಲಾದ್ಯಂತ 3065 ಸರ್ಕಾರಿ ಎಲ್ಪಿಎಸ್ಗಳಲ್ಲಿ 3065 ಶಿಕ್ಷಕರು ಇರಬೇಕು. 2757 ಮಂದಿ ಇದ್ದಾರೆ. ಅಂದ್ರೆ, 308 ಶಿಕ್ಷಕರ ಕೊರತೆ ಇದೆ. ಹಾಗೆಯೇ ಎಚ್ಪಿಎಸ್ಗಳಲ್ಲಿ 4803 ಶಿಕ್ಷಕರು ಇರಬೇಕಾಗಿದ್ದ ಕಡೆ 4803 ಮಂದಿ ಇದ್ದಾರೆ. 492 ಶಿಕ್ಷಕರ ಕೊರತೆ ಇದೆ.
ಹೀಗಾದರೇ ಹೇಗೆ: ಒಂದು ಕಡೆ ಪೋಷಕರ ಇಂಗ್ಲಿಷ್ ಪ್ರೀತಿ, ಮತ್ತೊಂದು ಕಡೆ ಶಿಕ್ಷಕರ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ನಡೆಯದ ಪಾಠ, ಪ್ರವಚನ. ಮಗದೊಂದು ಕಡೆ ಶಿಕ್ಷಕರೇ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ನಡೆದು ಕೊಳ್ಳುತ್ತಿರುವ ಅಸಭ್ಯ ದುರ್ಘಟನೆಗಳು ಜಿಲ್ಲೆಯಲ್ಲಿ ಅಲ್ಲಲ್ಲಿ ನಡೆಯುತ್ತಿವೆ. ಇದರ ಪರಿಣಾಮ ಸರ್ಕಾರಿ ಶಾಲೆಗಳು ನೇಪಥ್ಯಕ್ಕೆ ಸರಿಯುತ್ತಿವೆ ಎಂದೂ ಹೇಳಲಾಗುತ್ತಿದೆ. ಖಾಸಗಿ ಶಾಲೆಗಳು ಪ್ರಭಾವಶಾಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹಿಡಿತದಲ್ಲಿ ಇರುವುದರಿಂದ ಸರ್ಕಾರಿ ಶಾಲೆಗಳನ್ನು ನಿಗೂಢ ರೀತಿಯಲ್ಲಿ ನಿಸ್ತೇಜಗೊಳಿಸಿ ಮುಚ್ಚಿಸಲಾಗುತ್ತಿದೆ. ಇತ್ತ ಕೂಡ ಗಮನಹರಿಸ ಬೇಕೆಂಬ ಆಗ್ರಹವೂ ಕೇಳಿ ಬಂದಿದೆ.
ಸಂಘದ ಅಧ್ಯಕ್ಷ ಶಿವೇಗೌಡರು ಹೇಳುವುದು: ಕೇಂದ್ರೀಯ ವಿದ್ಯಾಲಯಗಳಲ್ಲಿ ಒಂದು ರೀತಿಯ ಪಠ್ಯ ಇದೆ. ಖಾಸಗಿ ಶಾಲೆಗಳಲ್ಲಿ ಮತ್ತೊಂದು ರೀತಿ ಇದೆ. ಸರ್ಕಾರಿ ಶಾಲೆಗಳಲ್ಲಿ ಬೇರೆ ಇದೆ. ಹೀಗೆ ಮೂರು ಮಾದರಿಯ ಪಠ್ಯ ವಿಷಯ ಬೋಧಿಸಲಾಗುತ್ತದೆ. ಖಾಸಗಿ ಶಾಲೆಗಳಲ್ಲಿ ಅಂಕ ಗಳಿಸುವುದರತ್ತ ಮಾತ್ರ ಗಮನಹರಿಸಲಾಗುತ್ತದೆ ಹೊರತು ಮಕ್ಕಳ ದೈಹಿಕ ಮಾನಸಿಕ ಮತ್ತು ನೈತಿಕ ಅಭಿವೃದ್ಧಿಯತ್ತ ಗಮನ ನೀಡುವುದಿಲ್ಲ.
ಅಲ್ಲದೇ ತಮಗೆ ಬೇಕಾದ ರೀತಿಯಲ್ಲಿ ಶಿಕ್ಷಣ ನೀಡಲಾಗುತ್ತದೆ. ಕನ್ನಡ ಉಳಿಸಿಕೊಳ್ಳುವುದರ ಜೊತೆಯಲ್ಲಿ ಇಂಗ್ಲಿಷ್ನ್ನು ಉತ್ತಮ ರೀತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿಸುವ ವ್ಯವಸ್ಥೆ ಆಗಬೇಕು.
ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೆ ತಂದು ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು. ಹೀಗೆ ಮಾಡದಿದ್ದರೆ ಶಿಕ್ಷಣ ಕ್ಷೇತ್ರವನ್ನು ಬಲ ಪಡಿಸಲೂ ಆಗುವುದಿಲ್ಲ. ಕನ್ನಡವನ್ನು ಉಳಿಸಿ ಬೆಳೆಸಲು ಸಾಧ್ಯವಾಗುವುದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

