'ವೈಜ್ಞಾನಿಕವಾಗಿ ಬೆಳೆದಂತೆ ಸಂಕುಚಿತವಾಗುತ್ತಿರುವ ನೈತಿಕ ಮೌಲ್ಯ'
ಕನ್ನಡಪ್ರಭ ವಾರ್ತೆ ಅರಸೀಕೆರೆ ಸೆ. 24
ಇಂದಿನ ಆಧುನಿಕ ಯುಗದಲ್ಲಿ ವೈಜ್ಞಾನಿಕತೆ ಬೆಳೆದಂತೆ ಮನುಷ್ಯ ಸಾಕಷ್ಟು ಪ್ರಗತಿ ಹೊಂದಿ ಅಭಿವೃದ್ಧಿ ಹೊಂದಿದಂತೆ ಆತನಲ್ಲಿ ಧಾರ್ಮಿಕ ಪ್ರಜ್ಞೆ, ಸ್ವಾಭಿಮಾನ, ಆದರ್ಶ, ನೈತಿಕ ಮೌಲ್ಯಗಳು ಸಂಕುಚಿತಗೊಳ್ಳುತ್ತಿವೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ನಡೆದ ಜನಜಾಗೃತಿ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಇತ್ತೀಚಿನ ದಿನಗಳಲ್ಲಿ ಮನುಷ್ಯ ಅಧಿಕಾರ, ಅಂತಸ್ತು, ಧನ, ಕನಕ, ವಸ್ತು, ವಾಹನ, ಸಂಪಾದಿಸುವುದೇ ಸಾಧನೆ ಎಂದು ಭಾವಿಸಿದಂತಿದೆ. ಬದುಕಿನಲ್ಲಿ ಶಾಂತಿ, ಸಾಮರಸ್ಯ ಮತ್ತು ಸದ್ಭಾವನೆ ಪ್ರಾಪ್ತಿಗೆ ಧರ್ಮದ ಪರಿಪಾಲನೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ವ್ಯಕ್ತಿಯ ಬುದ್ಧಿ ವಿಕಾಸಗೊಂಡಷ್ಟು ಭಾವನೆಗಳು ವಿಕಾಸಗೊಂಡಿಲ್ಲ. ಆದರ್ಶ ಸಮಾಜ ನಿರ್ಮಾಣಕ್ಕೆ ಧಾರ್ಮಿಕ ನೀತಿ ಸಂಹಿತೆ ಅತ್ಯಗತ್ಯ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಮೌಲ್ಯಗಳು ಅಗತ್ಯವೆಂದು ಪ್ರತಿಪಾದಿಸಿದರು. ಧರ್ಮ ಮತ್ತು ಸಂಸ್ಕೃತಿಗೆ ಹೆಸರಾದ ಈ ನಾಡಿನಲ್ಲಿ ಸ್ವಾರ್ಥ ತುಂಬಿ ತುಳುಕುತ್ತಿದೆ.
ಸ್ವಾರ್ಥಕ್ಕಾಗಿ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ನಾಶವಾಗಬಾರದು. ಜೀವನ ಭಗವಂತ ಕೊಟ್ಟ ಅಮೂಲ್ಯ ಕೊಡುಗೆ. ಜೀವನ ಸಾರ್ಥಕ ಪಡಿಸಿಕೊಳ್ಳಲು ಧರ್ಮಪ್ರಜ್ಞೆ ಮತ್ತು ಗುರು ಬೋಧನೆ ಅಗತ್ಯ ಎಂದು ಹೇಳಿದರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ತತ್ವದೊಂದಿಗೆ ಎಲ್ಲ ಧರ್ಮಗಳನ್ನು ಸಮಾನತೆಯಿಂದ ಕಂಡು ಸಕಲ ಜೀವಾತ್ಮಗಳಿಗೆ ಲೇಸನ್ನು ಬಯಸಿದ ವೀರಶೈವ ಧರ್ಮದ ಅಷ್ಟಾವರಣ ಪಂಚಾಚಾರ ಮತ್ತು ಷಟ್ಸ್ಥಳಗಳನ್ನು ಹುಟ್ಟು ಹಾಕಿ ಜನರನ್ನು ಸಂಸ್ಕಾರಯುಕ್ತರನ್ನಾಗಿ ಮಾಡಿದ ಕೀರ್ತಿ ವೀರಶೈವ ಧರ್ಮಕ್ಕೆ ಸಲ್ಲುತ್ತದೆ ಎಂದರು.
ಕೆಲವು ಕುಹಕಿಗಳು ವೀರಶೈವ ಧರ್ಮವನ್ನು ಒಡೆಯುವ ಕುಟಿಲೋಪಾಯ ಮಾಡುತ್ತಿದ್ದಾರೆ. ಇದಕ್ಕೆ ಸಮಾಜದ ಜನರು ಅವಕಾಶ ನೀಡಬಾರದು. ಧರ್ಮದ ವಿಶಾಲ ತತ್ವಗಳನ್ನು ಪ್ರತಿಯೊಬ್ಬರೂ ಆಚರಿಸಬೇಕು.
ಧಾರ್ಮಿಕ ಪ್ರಜ್ಞೆ ಹಾಗೂ ಕ್ರಿಯಾಶೀಲ ಬದುಕನ್ನು ರೂಪಿಸಿಕೊಳ್ಳುವ ಮೂಲಕ ಯುವಜನತೆ ಸಂಸ್ಕಾರಯುಕ್ತರಾಗಿ ಬಾಳಿ ಬದುಕಬೇಕು. ಆದರೆ ಹಣ ಮತ್ತು ಅಧಿಕಾರದ ಬೆನ್ನು ಹತ್ತಿರುವವರು ತತ್ವ ಸಿದ್ಧಾಂತಗಳನ್ನು ಮರೆಯಬಾರದೆಂದು ಕಿವಿಮಾತು ಹೇಳಿದರು.
ದೊಡ್ಡಗುಣಿ ಕ್ಷೇತ್ರದ ರೇವಣ್ಣ ಸಿದ್ದೇಶ್ವರ ಶ್ರೀ, ತಿಪಟೂರು ಷಡಾಕ್ಷರಿ ಮಠದ ರುದ್ರಮುನಿ ಶ್ರೀ, ಹೊನ್ನವಳ್ಳಿ ಕರಿ ಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀ, ಡಿ.ಎಂ.ಕುರ್ಕೆ ಬೂದಿಹಾಳ್ ಮಠದ ರಾಜಶೇಖರ ಶ್ರೀಗಳು ಆಶೀರ್ವಚನ ನೀಡಿದರು. ಭಕ್ತಮಂಡಳಿ ಟ್ರಸ್ಟಿನ ಅಧ್ಯಕ್ಷ ಸುಬ್ಬಣ್ಣ, ಕಾರ್ಯದರ್ಶಿ ರಾಜಣ್ಣ, ಶಾಂತವೀರಪ್ಪ, ಎನ್.ಎಸ್.ಸಿದ್ದರಾಮಶೆಟ್ಟಿ, ಕೆ.ಪಿ.ಚಂದ್ರಶೇಖರ್, ಉದ್ಯಮಿ ಅರುಣಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

