ಜಿಲ್ಲೆ ಅಭಿವೃದ್ಧಿ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ: ರೇವಣ್ಣ
ಕ.ಪ್ರ.ವಾರ್ತೆ ಹಾಸನ ಸೆ. 26
ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆ ತಳೆದಿದ್ದು, ಕೂಡಲೇ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾದ ಆಸ್ತಿ ಪಾಸ್ತಿ, ಬೆಳೆ ನಷ್ಟಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಕಾಲ ಕಾಲಕ್ಕೆ ನೀಡಬೇಕು ಮತ್ತು ಹಳೆ ಪದ್ಧತಿಯನ್ನು ಅನುಸರಿಸಿದೆ ಹೆಚ್ಚಿನ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ಮನವಿ ಮಾಡಿಕೊಳ್ಳಲಾಗುವುದು. ಇದಕ್ಕೆ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸದಿದ್ದರೆ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಒತ್ತಾಯಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿಗಳು, ಗ್ರಾಮ ಲೆಕ್ಕಿಗರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಅತಿವೃಷ್ಟಿ, ಅನಾವೃಷ್ಟಿಯಿಂದಾದ ನಷ್ಟದ ಬಗ್ಗೆ ವಾಸ್ತವ ವರದಿ ನೀಡಬೇಕೆಂದು ಆದೇಶಿಸಿ, ಸರಿಯಾದ ವೇಳೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಲು ಶ್ರಮಿಸಬೇಕು. ರಾಜ್ಯ ಸರ್ಕಾರ ನಷ್ಟವಾದ ಎಕರೆ ಬೆಳೆಗೆ ಕೇವಲ 500 ರು. ಪರಿಹಾರ ನೀಡುತ್ತದೆ. ಇದು ಯಾತಕ್ಕೂ ಸಾಲದು. ಬ್ಯಾಂಕಿನಲ್ಲಿ ಖಾತೆ ತೆರೆಯಲು 500 ರು. ಬೇಕು ಎಂದು ಹೇಳಿದರು.
ಇವತ್ತಿನ ದಿನಗಳಲ್ಲಿ ಪ್ರತಿ ಎಕರೆಯಲ್ಲಿ ಶುಂಠಿ ಬೆಳೆಯಲು 25 ಸಾವಿರ ರು. ಆಲೂಗಡ್ಡೆ ಬೆಳೆಯಲು 15 ಸಾವಿರ ರು. ಮತ್ತು ಹೊಗೆಸೊಪ್ಪು ಬೆಳೆಯಲು 20 ಸಾವಿರ ರು. ಬೇಕು. ಆದರೆ 500 ರು. ಪರಿಹಾರ ನೀಡಿದರೆ ಹೇಗೆ ಎಂದು ಪ್ರಶ್ನಿಸಿದ ರೇವಣ್ಣ, ಬೆಳೆ ಬೆಳೆಯಲು ವೆಚ್ಚವಾಗಿರುವ ಹಣವನ್ನು ಪರಿಹಾರವಾಗಿ ನೀಡಬೇಕು. ಹಾಗೆ ಮಾಡದಿದ್ದರೆ ಸರ್ಕಾರ ರೈತ ವಿರೋಧಿ ಸರ್ಕಾರವಾಗುತ್ತದೆ ಎಂದರು.
ಅತಿವೃಷ್ಟಿಯಿಂದ ಹೊಗೆಸೊಪ್ಪು, ಮುಸುಕಿನಜೋಳ, ಕಾಫಿ, ಮೆಣಸು, ಏಲಕ್ಕಿ ನಾಶವಾಗಿದೆ. ಅದೇ ಅನಾವೃಷ್ಟಿಯಿಂದ ರಾಗಿ, ಹಲಸಂದೆ ಮತ್ತಿತರ ಬೆಳೆಗಳ ಜೊತೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ. ಅಧಿಕಾರಿಗಳು ಕೂಡಲೇ ವರದಿ ತಯಾರಿಸಿ ಶೀಘ್ರವಾಗಿ ಪರಿಹಾರದ ಅನುದಾನ ಪಡೆದುಕೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.
50 ಸಾವಿರ ರು. ದಂಡ, 10 ಸಾವಿರ ರು. ಬಹುಮಾನ: ಹಾಸನ ತಾಲೂಕು ವೀರಾಪುರ ಗ್ರಾಮದ ಹಾಲು ಉತ್ಪಾದಕರ ಸೊಸೈಟಿಯವರು ಹಾಲಿಗೆ ಉಪ್ಪು ಮಿಶ್ರಣ ಮಾಡುವ ಬಗ್ಗೆ ಕೂಡಲೇ ಸಂಬಂಧಪಟ್ಟ ಒಕ್ಕೂಟದ ಅಧಿಕಾರಿಗಳಿಗೆ ಮಾಹಿತಿ ನೀಡದೇ ಲಾರಿ ಮಾಲೀಕರಿಂದ ಪರಿಹಾರ ಪಡೆಯಲು ಯತ್ನಿಸಿದರೆ ಏನು ಮಾಡುವುದು. ಹಾಲು ಸಾಗಾಣಿಕೆ ಟೆಂಡರ್ ಪಡೆಯುವ ವಿಚಾರದಲ್ಲಿ ಲಾರಿ ಮಾಲೀಕರ ನಡುವೆ ಎದ್ದಿರುವ ಅಸಮಾಧಾನವೂ ಈ ಪ್ರಕರಣಕ್ಕೆ ಕಾರಣವಿರಬಹುದು. ಭದ್ರತೆ ಸಿಬ್ಬಂದಿ ಜೊತೆ ಲಾರಿ ಚಾಲಕರು ಹಾಲನ್ನು ಕಳ್ಳ ಸಾಗಾಣಿಕೆ ಮಾಡುವುದರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.
ಹಾಲಿಗೆ ಉಪ್ಪು ಮತ್ತಿತರ ವಸ್ತುಗಳನ್ನು ಮಿಶ್ರಣ ಮಾಡುವ ಬಗ್ಗೆ ಮಾಹಿತಿ ನೀಡಿದವರಿಗೆ 10 ಸಾವಿರ ರು. ಬಹುಮಾನ ಹಾಗೂ ಹಾಲು ವಿಷ ಮಾಡುವವರಿಗೆ 50 ಸಾವಿರ ರು. ದಂಡ ವಿಧಿಸುವ ಕ್ರಮವನ್ನು ಹಾಸನ ಹಾಲು ಒಕ್ಕೂಟ ನಿರ್ಧರಿಸಿದೆ. ಹಾಸನ ಒಕ್ಕೂಟದ ಹಾಲು ರಾಜ್ಯದಲ್ಲೇ ಅತ್ಯುತ್ತಮ ಗುಣಮಟ್ಟದ ಹಾಲಾಗಿದೆ ಎಂದು ಹೇಳಿದರು. ಜೆಡಿಎಸ್ ಮುಖಂಡ ಸತೀಶ್ ಹೊನ್ನವಳ್ಳಿ, ಹೊಂಗೆರೆ ರಘು ಇದ್ದರು.
ಭೂಮಾಫಿಯಾ ಜತೆ ಕಾನೂನು ಇಲಾಖೆ ಶಾಮೀಲು: ಟೀಕಾ ಪ್ರಹಾರ
ಹಾಸನ: ರಾಜ್ಯ ಕಾನೂನು ಇಲಾಖೆ ಭೂ ಮಾಫಿಯಾ ಜೊತೆ ಷಾಮೀಲಾಗಿದೆ ಎಂದು ಆರೋಪಿಸಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ, ಇದರ ಪರಿಣಾಮ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರು. ನಷ್ಟವಾಗುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಕಾನೂನು ಪ್ರಕಾರ ಸಾರ್ವಜನಿಕ ಸದುದ್ದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಂಡಿರುವ ಬಗ್ಗೆ ವಾಸ್ತವ ಸ್ಥಿತಿಗತಿ ಮತ್ತು ಅಗತ್ಯ ಸರ್ಕಾರಿ ದಾಖಲೆಗಳನ್ನು ಕಾನೂನು ಇಲಾಖೆ ಮಂದಿ ನ್ಯಾಯಾಲಯಗಳಿಗೆ ಸರಿಯಾಗಿ ನೀಡುತ್ತಿಲ್ಲ. ಇದರಿಂದ ಸರ್ಕಾರದ ವಿರುದ್ಧ ತೀರ್ಪುಗಳು ಬರುವುದು ಹೆಚ್ಚಾಗುತ್ತಿದೆ. ಇದು ಪರೋಕ್ಷವಾಗಿ ಭೂ ಮಾಫಿಯಾಗಳಿಗೆ ಅನುಕೂಲವಾಗುತ್ತಿದೆ. ಈ ಬಗ್ಗೆ ದಾಖಲೆಗಳನ್ನು ಸರ್ಕಾರ ಕೇಳಿದರೇ ನೀಡಲು ಸಿದ್ಧ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಾನೂನು ಸಚಿವರು ಮಾಟ, ಮಂತ್ರ ಮತ್ತಿತರ ಕಡೆ ಹೆಚ್ಚಿನ ಗಮನಹರಿಸುವ ಬದಲಿಗೆ ಕಾನೂನು ಇಲಾಖೆ ಸಮರ್ಪಕವಾಗಿ ಕೆಲಸ ನಿರ್ವಹಿಸುವಂತೆ ಮಾಡಬೇಕು. ಮುಖ್ಯಮಂತ್ರಿಗಳು ಇಂಥಹ ಸೂಕ್ಷ್ಮ ವಿಚಾರಗಳ ಬಗ್ಗೆ ಗಮನಹರಿಸದೇ ಗಿಮಿಕ್ ಕಾರ್ಯಕ್ರಮಗಳತ್ತ ಲೋಕಸಭೆ ಚುನಾವಣೆ ದೃಷ್ಟಿಯಿಂದ ಗಮನಹರಿಸದರೆ ಪ್ರಯೋಜನವಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಪಶು ವೈದ್ಯರ ಕೊರತೆ: ರಾಜ್ಯಾದ್ಯಂತ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸಿಕ್ಕಾಪಟ್ಟೆ ಇದೆ. ನಿವೃತ್ತ ಪಶು ವೈದ್ಯರನ್ನು ನೇಮಕ ಮಾಡಿಕೊಂಡರೆ ಪ್ರಯೋಜನವಾಗುವುದಿಲ್ಲ. ಬದಲಿಗೆ ರಾಜ್ಯದ ಪಶು ವೈದ್ಯಕೀಯ ಕಾಲೇಜುಗಳಲ್ಲಿ ಇರುವ ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಳ ಮಾಡಬೇಕು.
ಬೀದರ್, ಶಿವಮೊಗ್ಗ ಮತ್ತು ಬೀದರ್ ಪಶು ವೈದ್ಯಕೀಯ ಕಾಲೇಜುಗಳಿಗೆ ತ್ವರಿತವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಅಲ್ಲಿ ಪದವಿ ಮುಗಿಸಿದವರಿಗೆ ಭಾರತೀಯ ಪಶು ವೈದ್ಯಕೀಯ ಮಂಡಳಿ ಮಾನ್ಯತೆ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಹಣಕಾಸು ಇಲಾಖೆ ಕೊಕ್ಕೆಮೂರು ಪಶು ವೈದ್ಯಕೀಯ ಕಾಲೇಜುಗಳಲ್ಲಿ ಕಟ್ಟಡ ನಿರ್ಮಾಣ ಮತ್ತಿತರ ಮೂಲ ಸೌಲಭ್ಯಗಳನ್ನು ಒದಗಿಸಲು ಬೇಕಾದ ಹಣ ಬಿಡುಗಡೆ ಮಾಡಲು ರಾಜ್ಯ ಹಣಕಾಸು ಇಲಾಖೆ ಅನಗತ್ಯವಾಗಿ ಅಡಚಣೆ ಮಾಡುತ್ತಿದೆ. ಇದು ಸರಿಯಲ್ಲ ಎಂದು ವಿಷಾದಿಸಿದರು.
ಜಾನುವಾರುಗಳಿಗೆ ಕಾಲು, ಬಾಯಿ ಜ್ವರ ಹೆಚ್ಚಾಗುತ್ತಿದೆ, ಕೂಡಲೇ ರಾಜ್ಯ ಸರ್ಕಾರ ಗ್ರಾಮ ಮಟ್ಟದಲ್ಲಿ ಸೂಕ್ತ ರೀತಿಯಲ್ಲಿ ಔಷಧಿ ನೀಡಲು ಶಿಬಿರಗಳನ್ನು ನಡೆಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಶಿವಮೊಗ್ಗ ಮತ್ತು ಹಾಸನ ಕಾಲೇಜುಗಳಲ್ಲಿ ಪದವಿ ಮುಗಿಸಿರುವ ಮಂದಿಗೆ ಮಾನ್ಯತೆ ದೊರಕಿಸಿಕೊಟ್ಟು, ಅವರನ್ನು ನೇಮಕ ಮಾಡಿಕೊಂಡು ಪಶು ವೈದ್ಯರ ಕೊರತೆಯನ್ನು ನೀಗಿಸಲು ಮುಂದಾಗಬೇಕಾಗಿದೆ. ಇಲ್ಲದಿದ್ದರೆ ಹೈನುಗಾರಿಕೆ ಅವಲಂಬಿಸಿರುವ ಗ್ರಾಮೀಣ ಮಹಿಳೆಯರು ತೊಂದರೆ ಅನುಭವಿಸುತ್ತಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

