'ಮಾತೃ ಭಾಷೆ ಬಗ್ಗೆ ಅಭಿಮಾನ ಇರಲಿ'
ಹೊಳೆನರಸೀಪುರ: ಮಾತೃ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿ, ಅನ್ಯ ಭಾಷೆಗಳನ್ನು ಪ್ರೀತಿಸುವ ಧೋರಣೆಯನ್ನು ಬದಿಗಿರಿಸಿ ಮೊದಲು ಕನ್ನಡ ಭಾಷೆಗೆ ನೀಡಬೇಕಾದ ಗೌರವ ನೀಡುವುದನ್ನು ಎಲ್ಲಿಯವರೆಗೆ ಕಲಿಯುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಭಾಷೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ನಿವೃತ್ತ ಶಿಕ್ಷಕಿ ಕೆ.ಎಸ್.ರಮಾಮಣಿ ಹೇಳಿದರು.
ಅವರು ಪಟ್ಟಣದ ಚೇತನ ವಸತಿ ಪ್ರೌಢಶಾಲೆಯಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶಾಲೆಗೊಂದು ಚುಟುಕು ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೊದಲು ನಮಗೆ ಜನ್ಮ ನೀಡಿದ ತಾಯಿಯನ್ನು ಅಮ್ಮ ಎಂದು ಕರೆಯುವಂತೆ ಅಗಬೇಕು. ಅದನ್ನು ರೂಢಿಸಿಕೊಂಡು ನಂತರ ಅಕ್ಕಪಕ್ಕದವರನ್ನು ನಮ್ಮವರೆಂದು ಪರಿಗಣಿಸಿದಲ್ಲಿ ಅಭ್ಯಂತರವಿಲ್ಲ ಎಂದರು.
ಅಲ್ಲದೇ ವಿದ್ಯಾರ್ಥಿಗಳು ಕನ್ನಡ ನಾಡಿನ ಪ್ರಖ್ಯಾತ ಬರಹಗಾರರ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ನಂತರ ಮನಸ್ಸನ್ನು ಬರಹದ ಕಡೆ ವರ್ಗಾಯಿಸಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಕತೆ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಕವಯಿತ್ರಿ ಅನುಪಮ ಮರಿಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜತೆಗೆ ತಮ್ಮ ಓದಿನಲ್ಲಿ ವಿಡಂಬನೆಯೊಂದಿಗೆ ಚುಟುಕು ಕವನಗಳು, ಸಾಹಿತ್ಯವನ್ನು ರಚಿಸುವತ್ತಾ ಗಮನಹರಿಸಬೇಕೆಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಚೇತನ ಪ್ರೌಡಶಾಲೆಯ ಮುಖ್ಯೋಪಾಧ್ಯಾಯಿನಿ ಡಾ.ಮಂಗಳಗೌರಿ ಅವರು, ಪ್ರತಿ ಮನುಷ್ಯನ ಅಂತರಾಳದಲ್ಲಿ ಒಬ್ಬ ಕವಿ ಇರುತ್ತಾನೆ, ಆತನಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಅವಶ್ಯವಾಗಿ ಬೇಕಾದ ವೇದಿಕೆ ದೊರೆತಲ್ಲಿ ಅವರುಗಳೂ ಸಹ ಸಮಾಜಕ್ಕೆ ಅವಶ್ಯವಾದ ಸಂದೇಶಗಳನ್ನು ನೀಡಬಲ್ಲರು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು. ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾಮಂಜುನಾಥ್,ವೀರಬಸಪ್ಪ, ಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಉಪಾಧ್ಯಕ್ಷ ದಿಲೀಪ್ಕುಮಾರ್ ಜೈನ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

