ಷರತ್ತಿನ ಮೀನುಗಾರಿಕೆಗೆ ಅವಕಾಶ
ಕನ್ನಡಪ್ರಭ ವಾರ್ತೆ , ಹಾಸನ , ಸೆ. 30
ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಇನ್ನು ಮುಂದೆ ಮೀನುಗಾರಿಕೆ ನಡೆಸಲು ಮೀನುಗಾರಿಕೆ ಇಲಾಖೆ ಮೇಲ್ವಿಚಾರಣೆಯಲ್ಲಿ ಕೆಲವೊಂದು ಷರತ್ತುಗಳನ್ನು ವಿಧಿಸಿ ಸ್ಥಳೀಯ ಮೀನುಗಾರರಿಗೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ನಲ್ಲಿ ನಡೆದ ಸಭೆಯಲ್ಲಿ ಹೇಮಾವತಿ ಜಲಾಶಯದಲ್ಲಿನ ಮೀನುಗಾರಿಕೆಗೆ ಹಾಲಿ ಇರುವ ವ್ಯವಸ್ಥೆ ಅದರ ಮುಂದುವರಿಕೆಗೆ ಇರುವ ಸಾಧಕ ಬಾಧಕಗಳು, ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತ ಸಭೆಯಲ್ಲಿ ಹಾಗೂ ಸ್ಥಳೀಯ ಮೀನುಗಾರರು, ಮೀನುಗಾರಿಕೆ ಫೆಡರೇಷನ್, ಸಂಘಸಂಸ್ಥೆಗಳ ಪ್ರತಿನಿಧಿಗಳ ಅಭಿಪ್ರಾಯವನ್ನು ಆಲಿಸಿದ ನಂತರ ಜಿಲ್ಲಾಧಿಕಾರಿ ಅನ್ಬುಕುಮಾರ್ ಈ ವಿಷಯ ಪ್ರಕಟಿಸಿದರು.
ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ನಿಯಮಾನುಸಾರ ಮೀನುಗಾರಿಕೆ ಮುಂದುವರಿಸಲು ಮೀನುಗಾರಿಕೆ ಫೆಡರೇಷನ್ ಅಸಹಾಯಕತೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮತ್ತು ಗುತ್ತಿಗೆ ಪಡೆದ ನಂತರ ಈವರೆಗೆ ಜಲಾಶಯಕ್ಕೆ ಮೀನುಮರಿಗಳನ್ನು ಬಿಡುವಲ್ಲಿ ವಿಫಲವಾಗಿರುವ ಬಗ್ಗೆ ಫೆಡರೇಷನ್ ಪ್ರತಿನಿಧಿಗಳು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಸ್ಥಳೀಯ ಮೀನುಗಾರರ ಮೂಲಕವೇ ಜಲಾಶಯದಲ್ಲಿ ಮೀನುಗಾರಿಕೆ ನಡೆಸಲು ಅನುಮತಿ ನೀಡುವುದಾಗಿ ಜಿಲ್ಲಾಧಿಕಾರಿ ಪ್ರಕಟಿಸಿದರು.
ಉಪ ಗುತ್ತಿಗೆ: ಮೀನುಗಾರಿಕೆ ಇಲಾಖೆ ನಿರ್ದೇಶಕ ವೀರಪ್ಪಗೌಡ ಹಾಗೂ ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಅಂಜಿ ಬಾಬು ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ, ಪ್ರಧಾನ ಯೋಜನಾ ನಿರ್ದೇಶಕ ಸಿದ್ದಯ್ಯ ಅವರು ಹೇಮಾವತಿ ಜಲಾಶಯದ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸಲು ನೇರವಾಗಿ ತಮ್ಮಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಉಪ ಗುತ್ತಿಗೆ ನೀಡಲಾಗಿದೆ. ಕಾವಲು ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಆದರೆ ಮೀನಿನ ಉತ್ಪಾದನೆ ಹೆಚ್ಚಳಕ್ಕೆ ಜಲಾಶಯಕ್ಕೆ ಹೊಸದಾಗಿ ಮರಿಯನ್ನು ಬಿಡುವ ಪ್ರಕ್ರಿಯೆ ಸಾಧ್ಯವಾಗಿಲ್ಲ ಎಂದರು.
ಇದೇ ವೇಳೆ ಮಾತನಾಡಿದ ಸ್ಥಳೀಯ ಮೀನುಗಾರರಾದ ಮರಿ ಜೋಸೆಫ್, ಪುಟ್ಟೇಗೌಡ, ದಾಸೇಗೌಡ, ವೆಂಕಯ್ಯ, ರಂಗಸ್ವಾಮಿ, ಸಾಮಾಜಿಕ ಹೋರಾಟಗಾರ ಸಂದೇಶ್ ಮತ್ತಿತರರು ಮೀನುಗಾರಿಕಾ ಫೆಡರೇಷನ್ಗೆ ಮೀನುಗಾರಿಕೆ ಗುತ್ತಿಗೆ ನೀಡುವುದರಿಂದ ಸ್ಥಳೀಯ ಮೀನುಗಾರರಿಗೆ ಅನ್ಯಾಯವಾಗುತ್ತಿದೆ.
ಸಮರ್ಪಕ ದರವನ್ನು ಒದಗಿಸುತ್ತಿಲ್ಲ ನಿರಂತರ ಆತಂಕಗಳ ನಡುವೆ ಬದುಕನ್ನು ಸವೆಸಬೇಕಿದೆ. ಒಂದೆಡೆ ಆತ್ಮರಕ್ಷಣೆಯ ಭಯವಾದರೆ ಮತ್ತೊಂದೆಡೆ ಮೀನುಗಾರಿಕೆ ವೇಳೆ ಸಂಭವಿಸುವ ದುರ್ಘಟನೆಗೆ ಫೆಡರೇಷನ್ನಿಂದ ಯಾವುದೇ ರೀತಿಯ ಸ್ಪಂದನ ಸಹಕಾರ ದೊರೆಯುತ್ತಿಲ್ಲ. ಹೀಗಾಗಿ ಸರ್ಕಾರದಿಂದಲೇ ಮೀನುಗಾರಿಕೆ ಇಲಾಖೆ ಮೂಲಕ ಮೀನುಗಾರಿಕೆಯನ್ನು ನಡೆಸಲು ಅವಕಾಶ ಮಾಡಿಕೊಡುವಂತೆ ಬೇಡಿಕೆ ತಿಳಿಸಿದರು.
ಫೆಡರೇಷನ್ನಿಂದ ನೆರವು ಇಲ್ಲ: ಇತ್ತೀಚೆಗೆ ಹೇಮಾವತಿ ಹಿನ್ನೀರಿನಲ್ಲಿ ಮೀನುಗಾರಿಕೆ ವೇಳೆ ಮೃತಪಟ್ಟ ಕುಟುಂಬದವರಿಗೆ ಫೆಡರೇಷನ್ ವತಿಯಿಂದ ಯಾವುದೇ ರೀತಿಯ ನೆರವು ದೊರೆಯದಿರುವುದನ್ನು ಸಭೆಯಲ್ಲಿ ಮೀನುಗಾರರು ಪ್ರಸ್ತಾಪಿಸಿದರು. ಅಲ್ಲದೆ ತಾವು ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಜಮೀನಿನ ಸಂತ್ರಸ್ಥರಾಗಿದ್ದು ಬದುಕಲು ಮೀನುಗಾರಿಕೆ ಬಿಟ್ಟು ಹೆಚ್ಚಿನ ಅವಕಾಶವಿಲ್ಲ. ಇತರ ಕಸುಬುಗಳ ಅನುಭವವೂ ಇಲ್ಲ ಹೀಗಾಗಿ ತಮಗೆ ಒಂದು ದರ ನಿಗಧಿಪಡಿಸಿ ಪರವಾನಗಿಗಳನ್ನು ನೀಡಿ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕೆಂದು ನೂರಾರು ಸ್ಥಳೀಯ ಮೀನುಗಾರರು ಕೋರಿದರು.
ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಮುಂದಿನ ಹತ್ತು ದಿನಗಳೊಳಗಾಗಿ ಮೀನುಗಾರಿಕೆ ಇಲಾಖೆಯ ಮೂಲಕವೇ ಸ್ಥಳೀಯ ಮೀನುಗಾರರ ಮೂಲಕ ಮೀನುಗಾರಿಕೆ ಪುನರಾರಂಭಿಸಲು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಪರವಾನಗಿ ಪಡೆದ ಮೀನುಗಾರರು ಮಾತ್ರ: ಪರವಾನಗಿ ಪಡೆದ ಮೀನುಗಾರರು ಮಾತ್ರ ಮೀನುಗಾರಿಕೆಯಲ್ಲಿ ತೊಡಗಬೇಕು. ಪ್ರತಿ ಮೀನುಗಾರರು ಜೀವರಕ್ಷಕ ಸಾಧನ ಸಲಕರಣೆಗಳನ್ನು ಹೊಂದಿಯೇ ನದಿಗೆ ಇಳಿಯಬೇಕು. ಮತ್ತು ಕಡ್ಡಾಯವಾಗಿ ಗುಂಪು ಜೀವವಿಮೆ ಮಾಡಿಸಿಕೊಂಡಿರಬೇಕು. ಎಂಬ ಷರತ್ತುಗಳನ್ನು ವಿಧಿಸಲಾಗುವುದು ಪ್ರತಿಯೊಬ್ಬ ಪರವಾನಗಿ ಪಡೆದ ಮೀನುಗಾರರು ಅದನ್ನು ಅನುಸರಿಸಲೇಬೇಕು ಎಂದು ಹೇಳಿದರು.
ಜಲಾಶಯ ಸುರಕ್ಷತೆಗೆ ಯಾವುದೇ ಧಕ್ಕೆ ತರಬಾರದು, ಮೀನುಗಾರಿಕಾ ಪ್ರದೇಶದಲ್ಲಿ ಯಾವುದೇ ಶಾಂತಿ ಸುವ್ಯವಸ್ಥೆಗೆ ಹಾನಿಯಾಗದಂತೆ ಗುಂಪು ಗುಂಪುಗಳ ನಡುವೆ ಆಂತರಿಕ ಸಂಘರ್ಷ, ಅನಾರೋಗ್ಯಕರ ಪೈಪೋಟಿಯನ್ನು ಏರ್ಪಡಿಸಿಕೊಳ್ಳದೆ ಶಾಂತಿಯುತವಾಗಿ ಮೀನುಗಾರಿಕೆ ನಡೆಸಬೇಕು ಆ ಮೂಲಕ ಎಲ್ಲಾರೂ ಒಟ್ಟಾಗಿ ಪ್ರಗತಿಯ ಹಾದಿಯಲ್ಲಿ ಸಾಗಬೇಕು ಎಂಬುದನ್ನು ಮೀನುಗಾರರು ಮನಗಾಣಬೇಕು.
ಮುಂದಿನ ದಿನಗಳಲ್ಲಿ ಪರವಾನಗಿ ಪಡೆಯುವ ಪ್ರತಿಯೊಬ್ಬರೂ ಮೀನುಮರಿ ಬಿತ್ತನೆ ಬಗ್ಗೆಯೂ ಗಮನ ಹರಿಸಬೇಕಿದೆ ಒಟ್ಟಾರೆ ಷರತ್ತುಗಳನ್ನು ವಿಧಿಸಿ ಮೀನುಗಾರಿಕೆ ಇಲಾಖೆಯ ಮೂಲಕವೇ ಮೀನುಗಾರಿಕೆ ನಡೆಸಲು ಸ್ಥಳೀಯ ಮೀನುಗಾರರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿಲ್ಲಾಡಳಿತದ ನಿಲುವನ್ನು ಪ್ರಕಟಿಸಿದರು.
ಉಪವಿಭಾಗಾಧಿಕಾರಿ ಶರತ್, ತಹಸೀಲ್ದಾರ್ ಮಂಜುನಾಥ್, ಮೀನುಗಾರಿಕೆ ಇಲಾಖೆ ಮೈಸೂರು ವಿಭಾಗದ ಉಪನಿರ್ದೇಶಕ ಬಿ.ಆರ್. ಜಗದೀಶ್, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಿ. ಕುಬೇಂದ್ರ ನಾಯಕ್, ಗೊರೂರಿನ ಮೀನುಗಾರಿಕೆ ಸಹಾಯಕ ನಿರ್ದೇಶಕ ರಮೇಶ್ ಕಾರ್ಗಲ್, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಮೀನುಗಾರರು ಹಾಗೂ ಇತ್ತೀಚೆಗೆ ಗೊರೂರಿನ ಹಿನ್ನೀರಿನಲ್ಲಿ ಮಿನುಗಾರಿಕೆ ನಡೆಸುವ ವೇಳೆ ಮೃತಪಟ್ಟ ಮೂವರು ಮೀನುಗಾರರ ಕುಟುಂಬದವರು ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

