ಹೊನ್ನೇನಹಳ್ಳಿ: ಕುತ್ತಿಗೆ ಇರಿದು ಗೃಹಿಣಿ ಕೊಲೆ
ಹಾಸನ: ಗೃಹಿಣಿಯೊಬ್ಬರ ಕುತ್ತಿಗೆ ಇರಿದು ಕೊಲೆ ಮಾಡಿರುವ ಘಟನೆ ನಗರದ ಚಿಕ್ಕಹೊನ್ನೇನಹಳ್ಳಿಯಲ್ಲಿ ಸೋಮವಾರ ನಡೆದಿದೆ. ಕೆಎಸ್ಎಫ್ಸಿ ನೌಕರ ರಂಗಣ್ಣ ಎಂಬುವರ ಪತ್ನಿ ತೇಜಸ್ವಿನಿ (35) ಕೊಲೆಯಾದವರು.
ರಂಗಣ್ಣ ಬೆಳಗ್ಗೆ ಕೆಲಸದ ನಿಮಿತ್ತ ಗೊರೂರಿಗೆ ಹೋಗಿದ್ದಾರೆ. ಮಕ್ಕಳಾದ ಮನು ಮತ್ತು ಧನು ಇಬ್ಬರು ಶಾಲೆಗೆ ತರೆಳಿದ್ದ ಸಂದರ್ಭದಲ್ಲಿ ಮನೆಯಲ್ಲಿ ಒಂಟಿಯಾಗಿದ್ದ ತೇಜಸ್ವಿನಿಯ ಕುತ್ತಿಗೆ ಇರಿದು ಕೊಲೆ ಮಾಡಲಾಗಿದೆ.
ಕೊಲೆಗೆ ಕಾರಣ ತಿಳಿಯದು. ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಹಣಕ್ಕಾಗಿ ಕೊಲೆ ಮಾಡಿದ್ದಾರಾ ಅಥವಾ ಇಲ್ಲವೇ ಅನ್ನೋದು ತನಿಖೆಯಿಂದ ತಿಳಿಯಬೇಕಾಗಿದೆ.
ಸ್ಥಳಕ್ಕಾಗಮಿಸಿದ ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್ ಪರಿಶೀಲಿಸಿದರು. ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪಿಯುಸಿಎಲ್ ಜಿಲ್ಲಾ ಶಾಖೆ ಉದ್ಘಾಟನೆ ನಾಳೆ
ಹಾಸನ: ಪಿಯಸಿಎಲ್ ಜಿಲ್ಲಾ ಶಾಖೆ ಉದ್ಘಾಟನೆ ಮತ್ತು ಮಾನವ ಹಕ್ಕು ಕುರಿತ ವಿಚಾರ ಸಂಕಿರಣ ಮತ್ತು ಸಂವಾದವನ್ನು ಅ.2 ರಂದು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ನಿವೃತ್ತ ನ್ಯಾಯಮೂರ್ತಿ ಎಂ.ಎಫ್. ಸಾಲ್ಡಾನಾ ಕಾರ್ಯಕ್ರಮ ಉದ್ಘಾಟಿಸುವರು. ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಎಸ್ಪಿ ರವಿ.ಡಿ. ಚನ್ನಣ್ಣನವರ್, ಪಿಯುಸಿಎಲ್ ರಾಜ್ಯಾಧ್ಯಕ್ಷ ಪಿಬಿಡಿ ಷಾ, ವಕೀಲರ ಸಂಘದ ಜಿಲ್ಲಾಧ್ಯಕ್ಷ ದೇವರಾಜೇಗೌಡ, ಸಾಹಿತಿ ರೂಪಾ ಹಾಸನ, ಕಾರ್ಯದರ್ಶಿ ಲಕ್ಷ್ಮೀನಾರಾಯಣ, ದಸಂಸ ಜಿಲ್ಲಾ ಸಂಚಾಲಕ ಕೆ. ಈರಪ್ಪ, ಕೃಷ್ಣ ಕಾನೂನು ಕಾಲೇಜಿನ ಪ್ರಾಂಶುಪಾಲ ಉದಯಕುಮಾರ್, ದಮಾಹ ವಿಮೋಚನಾ ವೇದಿಕೆ ರಾಜ್ಯ ಕಾರ್ಯದರ್ಶಿ ಮರಿಜೋಸೆಫ್, ಸತ್ಯದ ಹೊನಲು ದಿನಪತ್ರಿಕೆ ಸಂಪಾದಕ ಕೆ.ಎಚ್. ವೇಣುಕುಮಾರ್, ಪಿಯುಸಿಎಲ್ ಹಾಸನ ಶಾಖೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ಪಿಐ ಸತೀಶ್ ಮೊದಲಾದ ಗಣ್ಯರು ಭಾಗವಹಿಸುವರು ಎಂದು ನಾಗರಾಜ್ ಹೆತ್ತೂರು ತಿಳಿಸಿದ್ದಾರೆ.
ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921, ಜಲಾಶಯಕ್ಕೆ ಒಳ ಹರಿವು 2372 ಕ್ಯುಸೆಕ್ ಇದ್ದು, 4,500 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 36.136 ಟಿ.ಎಂ.ಸಿ.ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3164.726 ಅಡಿ, ಒಳ ಹರಿವು 125 ಕ್ಯುಸೆಕ್, ಹೊರ ಹರಿವು ನಾಲೆಗೆ 100 ಕ್ಯೂಸೆಕ್ ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: ಇಂದಿನ 3167.42 ಅಡಿ, ಒಳ ಹರಿವು 20 ಕ್ಯುಸೆಕ್, ಹೊರ ಹರಿವು ನಾಲೆಗೆ 125 ಕ್ಯುಸೆಕ್ ಒಟ್ಟು 1.376 ಟಿಎಂಸಿ ನೀರು ಸಂಗ್ರಹವಾಗಿದೆ.
ಮಳೆ ವಿವರ: ಸಕಲೇಶಪುರ 1.4, ಯಸಳೂರು 2, ಶುಕ್ರವಾರ ಸಂಜೆ 3.2, ಮಾರೇನಹಳ್ಳಿ 4.1., ಬೆಳಗೋಡು 2.6, ಹಾನುಬಾಳು 3.2, ಹೆತ್ತೂರು 3.2 ಮಿ.ಮೀ.ಮಳೆಯಾಗಿದೆ.
ಬಸ್ಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಸಕಲೇಶಪುರ: ಅಸಮರ್ಪಕ ಬಸ್ ಸೇವೆಯನ್ನು ಖಂಡಿಸಿ ನಾನಾ ಕಾಲೇಜುಗಳ ವಿದ್ಯಾರ್ಥಿಗಳು ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸ್ಥಳೀಯ ಸಾರಿಗೆ ಘಟಕದಿಂದ ಮುಂಜಾನೆ 6 ರಿಂದ 9 ರವರೆಗೆ ಜಿಲ್ಲಾ ಕೇಂದ್ರಕ್ಕೆ ಬಸ್ ಬಿಡದಿರುವ ಕಾರಣ ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ತೆರಳುವ ವಿದ್ಯಾರ್ಥಿಗಳು ಬಸ್ಗಳ ಸಮಸ್ಯೆಯಿಂದಾಗಿ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗದಂತಾಗಿದೆ ಎಂದು ದೂರಿದರು.
ಮುಂಜಾನೆ ಸ್ಥಳೀಯ ಘಟಕದಿಂದ ಹೊರಡುವ ಒಂದೆರಡು ಬಸ್ಗಳ ಚಾಲಕ ನಿರ್ವಾಹಕರು ಇತರೆ ಪ್ರಯಾಣಿಕರಿಗೆ ತೊಂದರೆ ಎಂಬ ಕಾರಣ ನೀಡಿ ಕಾಲೇಜು ವಿದ್ಯಾರ್ಥಿಗಳು ಬಸ್ ಹತ್ತುವುದಕ್ಕೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಕಾಲೇಜು ಸಮಯಕ್ಕೆ ಸ್ಥಳೀಯ ಘಟಕದಿಂದ ಬಸ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಎಲ್ಲಾ ಬಸ್ಗಳಲ್ಲೂ ಕಾಲೇಜು ವಿದ್ಯಾರ್ಥಿಗಳು ತೆರಳಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದ ಮನವಿಯನ್ನು ಘಟಕದ ಸಹಾಯಕ ಸಂಚಾರಿ ನಿಯಂತ್ರಕ ಎನ್. ಸ್ವಾಮಿ ಅವರಿಗೆ ನೀಡಿದರು.
ಕಳುವಾಗಿದ್ದ ಕಾರಲ್ಲಿ ಮಾರಕಾಸ್ತ್ರಗಳು!
ಕ.ಪ್ರ. ವಾರ್ತೆ ಸಕಲೇಶಪುರ , ಸೆ. 30
ಪಟ್ಟಣದಲ್ಲಿ ಇತ್ತೀಚೆಗೆ ಕಳುವಾಗಿದ್ದ ಸ್ಕಾರ್ಪಿಯೋ ಕಾರು ಕೇರಳದ ಕುಂಬ್ಳೆ ಠಾಣೆ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಪತ್ತೆಯಾಗಿದ್ದು, ಕಾರಿನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಆರೋಪಿಗಳು ಪರಾರಿಯಾಗಿದ್ದು, ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಪಟ್ಟಣದ ಮಹಮ್ಮದ್ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಹಕೀಂ ಎಂಬವರ 10 ಲಕ್ಷ ಮೌಲ್ಯದ ಸ್ಕಾರ್ಪಿಯೋ ಕಾರಿನ ಗಾಜುಗಳನ್ನು ಪುಡಿಮಾಡಿ ಕಳವು ಮಾಡಲಾಗಿದೆ ಎಂದು ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ಮಧ್ಯೆ ಕೇರಳದ ಕಾಸರಗೋಡು ಜಿಲ್ಲೆಯ ಕುಂಬ್ಳೆ ಠಾಣಾ ವ್ಯಾಪ್ತಿಯಲ್ಲಿ ಹೆದ್ದಾರಿ ತಪಾಸಣೆ ನಡೆಸುತ್ತಿದ್ದಾಗ ಪಿಎಸ್ಐ ವಿಜಯನ್ಕರಿಯಪ್ಪ ಅವರ ತಂಡ ವಾಹನವೊಂದರ ತಪಾಸಣೆಗೆ ಮುಂದಾಗಿತ್ತು. ಆಗ ವಾಹನದಲ್ಲಿದ್ದ ಐವರು ಕಾರು ಬಿಟ್ಟು ಪರಾರಿಯಾಗಿದ್ದಾರೆ. ನಂತರ ಕಾರನ್ನು ತಪಾಸಣೆ ನಡೆಸಿದಾಗ ಅದರಲ್ಲಿ 3 ಲಾಂಗ್ ಕಬ್ಬಿಣದ ಸಲಾಕೆ, ವಿಶೇಷ ಮಾದರಿಯಲ್ಲಿ ತಯಾರಿಸಿದ ಸ್ಟೀಲ್ ರಾಡ್ಗಳು, ಹ್ಯಾಂಡ್ ಗ್ಲೌಸ್, ಸ್ಕ್ರೂಡ್ರೈವರ್ಗಳು ಪತ್ತೆಯಾಗಿವೆ. ಕೂಡಲೇ ಕುಂಬ್ಳೆ ವೃತ್ತ ನಿರೀಕ್ಷಕ ಸಿ.ಬಿ. ಥಾಮಸ್ ಸಕಲೇಶಪುರ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದು ತನಿಖೆ ಮುಂದುವರಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ
ಹಾಸನ: ಜಿಲ್ಲೆಯಲ್ಲಿ ಸೇವೆಯಲ್ಲಿರುವ ಸರ್ಕಾರಿ ನೌಕರರ ಮಕ್ಕಳು 2012-13ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ಪ್ರತಿಭಾವಂತ ಎಸ್ಸೆಸ್ಸೆಲ್ಸಿ -15, ದ್ವಿತೀಯ ಪಿಯುಸಿ-15 ಗರಿಷ್ಠ ಶೇಕಡಾವಾರು ಅಂಕ ಪಡೆದ ವಿದ್ಯಾರ್ಥಿಗಳನ್ನು ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಪುರಸ್ಕರಿಸಲಾಗುವುದು. ಅಂತಹ ವಿದ್ಯಾರ್ಥಿಗಳು ಭಾವಚಿತ್ರದೊಂದಿಗೆ ದೃಢೀಕೃತ ಅಂಕಪಟ್ಟಿ ಹಾಗೂ ತಂದೆ ತಾಯಿ ಸರ್ಕಾರಿ ಸೇವೆಯಲ್ಲಿರುವ ಬಗ್ಗೆ ದೃಢೀಕರಣದೊಂದಿಗೆ ಅ.5 ರೊಳಗಾಗಿ ಅರ್ಜಿಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಾಂಸ್ಕೃತಿಕ ಕಾರ್ಯದರ್ಶಿ ಅಥವಾ ಸಂಜೆ 5.30ರಿಂದ 6.30ರೊಳಗೆ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ, ಆರ್.ಸಿ.ರಸ್ತೆ, ಹಾಸನ ಇವರಿಗೆ ಸಲ್ಲಿಸಲು ಕೋರಿದೆ. ಹೆಚ್ಚಿನ ವಿವರಗಳಿಗೆ ಕೆ.ಎಂ.ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ 9448622871, ಎ.ಜೆ.ವೆಂಕಟೇಶ್, 8453641956 ಮತ್ತು ಎಲ್ಲಾ ಇಲಾಖೆಯ ಆಯಾ ನಿರ್ದೇಶಕರನ್ನು ಸಂಪರ್ಕಿಸುವಂತೆ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ ಕೋರಿದ್ದಾರೆ.
ಅಂತಾರಾಷ್ಟ್ರೀಯ ವಯಸ್ಕರ ದಿನಾಚರಣೆ ಇಂದು
ಹೊಳೆನರಸೀಪುರ: ಇಲ್ಲಿನ ಪುರಸಭೆಯ ವಾಣಿಜ್ಯ ಮಳಿಗೆಗಳ ಸಭಾಂಗಣದಲ್ಲಿ ಅ.1ರಂದು 11ಕ್ಕೆ ಅಂತಾರಾಷ್ಟ್ರೀಯ ವಯಸ್ಕರ ದಿನಾಚರಣೆ ಪುರಸಭಾಧ್ಯಕ್ಷೆ ಎಚ್.ಆರ್.ಕಲಾವತಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಹರೀಶ್ ತಿಳಿಸಿದ್ದಾರೆ.
ರಕ್ಷಿತಾ ಪ್ರಸಾದ್ಗೆ ಮೊದಲ ಸ್ಥಾನ
ಹಾಸನ: ನಗರದ ಯುನೈಟೆಡ್ ಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಎಚ್. ಪ್ರಸಾದ್ ದಸರಾ ಪೈಕಾ ಈಜು ಸ್ಪರ್ಧ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಹಾಸನಾಂಬ ಈಜುಗೊಳದಲ್ಲಿ ಈಚೆಗೆ ನಡೆದ ಸ್ಪರ್ಧೆಯಲ್ಲಿ ಬಟರ್ಫ್ಲೈ 50 ಮೀಟರ್ ಪ್ರಥಮ, 100 ಮೀ ಫೀಸ್ಟೈಲ್ ಪ್ರಥಮ, 200 ಮೀಟರ್ ಪ್ರೀಸ್ಟೈಲ್ ಪ್ರಥಮ, ಇಂಡುವಿಷಲ್ ಮಿಡ್ಲೆದ್ವಿತೀಯ, 4್ಢ100 ಮೀ ರಿಲೇ ಫ್ರೀ ಸ್ಟೈಲ್ ಪ್ರಥಮ, 4್ಢ100 ಮಿಡ್ಲೇ ಪ್ರಥಮ ಸ್ಥಾನ ಗಳಿಸುವ ಮೂಲಕ ಮಂಡ್ಯದಲ್ಲಿ ನಡೆಯುವ ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಮಂಡ್ಯದಲ್ಲಿ ನಡೆದ ವಯೋವುತಿ ಇಲ್ಲದ ಸ್ಪರ್ಧೆಯಲ್ಲಿ ಭಾಗವಹಿಸಿ ಬಟರ್ಫ್ಲೈ 100 ಮೀಟರ್ ತೃತೀಯ, ಮಿಡ್ಲೇಲೇ 4್ಢ100 ದ್ವಿತೀಯ, ಫ್ರೀಸ್ಟೈಲ್ 4್ಢ100 ನಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಚೈತನ್ಯ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಇಂದು
ಹಾಸನ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಲಯನ್ಸ್ ಕ್ಲಬ್, ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗ ಕಲಾ ಕಾಲೇಜು, ಹಾಸನ ಹಾಗೂ ಜಿಲ್ಲೆಯ ಎಲ್ಲಾ ಹಿರಿಯ ನಾಗರಿಕರ ಸ್ವಯಂಸೇವಾ ಸಂಸ್ಥೆಗಳ ಆಶ್ರಯದಲ್ಲಿ ಅ.1 ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಚೈತನ್ಯ ಮಂದಿರ ಗವೇನಹಳ್ಳಿ ಬೈಪಾಸ್ ರಸ್ತೆ, ಹಾಸನ ಇಲ್ಲಿ ಆಚರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಬೆಳಗ್ಗೆ 9.30 ಕ್ಕೆ ಚೈತನ್ಯ ಮಂದಿರ ಗವೇನಹಳ್ಳಿ ಬೈಪಾಸ್ ರಸ್ತೆ, ಹಾಸನ ಇಲ್ಲಿ ಭಾಗವಹಿಸಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯು ಯಶಸ್ವಿಯಾಗಿ ನಡೆಯಲು ಸಹಕರಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೋರಿದ್ದಾರೆ.
ಮಹಿಳಾ ಸಹಕಾರ ಸಂಘಕ್ಕೆ ಆಯ್ಕೆ
ನುಗ್ಗೇಹಳ್ಳಿ: ದಿಡಗ ಸಮೀಪದ ನುಗ್ಗೇಹಳ್ಳಿ ಹೋಬಳಿ ಗಂಜಿಗೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ದಿಂಡಗೂರು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಡಿ.ಎ.ಶ್ರೀನಿವಾಸಮೂರ್ತಿ ಸಮ್ಮುಖದಲ್ಲಿ ಸಂಘದ 9 ಸದಸ್ಯರು ಹಾಜರಿದ್ದು ಗೀತಾ ವೆಂಕಟೇಶ್ ಅವರನ್ನು ಮಹಿಳಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆಶಾ ಸೋಮಶೇಖರ್ ನೂತನ ಆಧ್ಯಕ್ಷರು ಹಾಗೂ ಸದಸ್ಯರಿಗೆ ವಂದಿಸಿದರು.
ಗೃಹ ನಿರ್ಮಾಣ ಸಂಘದ ವಾರ್ಷಿಕ ಮಹಾ ಸಭೆ
ಹಾಸನ: ಹೇಮಾವತಿ ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಡಾ ಕೆ. ದೊಡ್ಡೇಗೌಡರ ಅಧ್ಯಕ್ಷತೆಯಲ್ಲಿ ನಗರದ ಸಹಕಾರ ಭವನದಲ್ಲಿ ನಡೆಯಿತು.
ಸಭೆಯಲ್ಲಿ 2012-13ನೇ ಸಾಲಿನ ಆಡಳಿತ ವರದಿ, 2011-12 ಮತ್ತು 2012-13ನೇ ಸಾಲಿನ ಆಡಿಟ್
ವರದಿಯನ್ನು ಅಂಗೀಕರಿಸಲಾಯಿತು. ಸಹಕಾರ ಸಂಘಗಳ ಕಾಯಿದೆ ಮತ್ತು ನಿಯಮಗಳ ತಿದ್ದುಪಡಿಗೆ ಅನುಗುಣವಾಗಿ ಮಂಡಿಸಿದ್ದ ಸಂಘದ ಸಮಗ್ರ ಉಪನಿಯಮ ಗಳನ್ನು ಸಭೆ ಯಲ್ಲಿ ಚರ್ಚಿಸಿ ಸರ್ವಾನು ಮತದಿಂದ ಅನುಮೋದಿಸಿ ಒಪ್ಪಿಗೆ ಪಡೆಯಲಾಯಿತು. ಸಂಘದ ನಿರ್ದೇಶಕ ಆರ್.ಟಿ. ದ್ಯಾವೇಗೌಡ ಮಾತನಾಡಿ ಸದಸ್ಯರಿಗೆ ನಿವೇಶನ ದೊರಕಿಸುವುದರ ಬಗ್ಗೆ ಇರುವ ತೊಡಕು ತಿಳಿಸಿದರು. ಸದಸ್ಯ ತಮ್ಮಪ್ಪಗೌಡ, ಕೆ.ಪಿ.ನಿಂಗೇಗೌಡ, ಇನ್ನಿತರರು ಮಾತನಾಡಿದರು.
3ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ
ಸಕಲೇಶಪುರ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ನಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಅ.3ರಂದು ಪಟ್ಟಣದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಜೆ 5 ಕ್ಕೆ ಏರ್ಪಡಿಸಲಾಗಿದೆ ಎಂದು ಪ್ರಾಧ್ಯಾಪಕ ಹಾಗೂ ಸಂಘದ ಕಾರ್ಯದರ್ಶಿ ನಾಗರಾಜ್ಶೆಟ್ಟಿ ತಿಳಿಸಿದರು.
ಇಲ್ಲಿಯ ಚಂಪಕನಗರ ಬಡಾವಣೆಯಲ್ಲಿ ಬಯಲು ರಂಗ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಸಕಲೇಶಪುರ ಘಟಕವನ್ನು ಶಾಸಕ ಎಚ್.ಕೆ.ಕುಮಾರಸ್ವಾಮಿ ಉದ್ಘಾಟಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

