ಹಾಸನ

ಅರಸೀಕೆರೆ 'ಕೈ' ಭಿನ್ನಮತ ಬಯಲು

Published On :

ಕ.ಪ್ರ.ವಾರ್ತೆ    ಅರಸೀಕೆರೆ    ಏ. 1
ಪ್ರಭುತ್ವ ಸಾಧಿಸಲು ಮುಖಂಡರ ನಡುವೆ ನಡೆಯುತ್ತಿರುವ ಮೇಲಾಟದಿಂದ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಲೋಕಸಭೆ ಮತದಾನಕ್ಕೂ ಮುನ್ನವೇ ಭುಗಿಲೆದ್ದ ಭಿನ್ನಮತದಿಂದ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಅವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಎಲ್ಲೆಡೆ ಚರ್ಚಿತ ವಿಷಯವಾಗಿದೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ತೀವ್ರ ಹೋರಾಟ ನಡೆಸಿ ಟಿಕೆಟ್ ವಂಚಿತರಾಗಿ ಅಂತಿಮ ಕ್ಷಣದಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡ ಉದ್ಯಮಿ ಜೆ.ಪಿ.ಜಯಣ್ಣ ಇತ್ತೀಚೆಗೆ ಮರಳಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದ ಹೊರವಲಯದ ಜಯಣ್ಣ ನಿವಾಸದ ಬಳಿ ಜಮಾಯಿಸಿದ ಶಿವರಾಂ ಬೆಂಬಲಿಗರ ಗುಂಪೊಂದು ಪಕ್ಷ ತೊರೆದ ಮುಖಂಡರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಮಾಜಿ ಸಚಿವ ಬಿ.ಶಿವರಾಂ ಪರ ಘೋಷಣೆ ಕೂಗಿದ ಬೆಂಬಲಿಗರನ್ನು ಸ್ಥಳದಲ್ಲಿಯೇ ಇದ್ದ ಪೋಲಿಸರು ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಕಾರ್ಯಕರ್ತರ ಆಕ್ರೋಶ ಎಲ್ಲೆ ಮೀರಿತ್ತು. ಇದು ಸಹಜವಾಗಿಯೇ ತಾಲೂಕು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ಜಯಣ್ಣ ನಿವಾಸಕ್ಕೆ ಸಿಎಂ ಹೋದರೆ ಪಕ್ಷದ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿ ಅಲ್ಲದೇ ಚುನಾವಣಾ ಪ್ರಚಾರದಿಂದ ಹಿಂದೆ ಸರಿಯುತ್ತೇವೆ ಎಂದು ದೂರವಾಣಿ ಮೂಲಕ ಏರು ದನಿಯಲ್ಲಿ ಬಿ.ಶಿವರಾಂ ಅವರೊಂದಿಗೆ ಕೆಲವರು ತೀವ್ರ ಆಕ್ರೋಶ  ವ್ಯಕ್ತಪಡಿಸುತ್ತಿದ್ದರು.  
ಒಂದೆಡೆ ಬಿ.ಶಿವರಾಂಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ದೊರೆಯದ  ಅಸಮಾಧಾನ. ಮತ್ತೊಂದೆಡೆ ಮರಳಿ ಪಕ್ಷ ಸೇರ್ಪಡೆಯಾಗುತ್ತಿರುವವರಿಗೆ ನೀಡುತ್ತಿರುವ ಆದ್ಯತೆ ಕಂಡು ಕಾರ್ಯಕರ್ತರು ತಳಮಳಗೊಂಡಿದ್ದರು. ತರೀಕೆರೆಯಿಂದ ಪ್ರಚಾರಸಭೆ ಮುಗಿಸಿ ಊಟಕ್ಕಾಗಿ ಜಯಣ್ಣ ನಿವಾಸಕ್ಕೆ ಸಿಎಂ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಸ್ವಾಗತಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಜಿಲ್ಲೆಯ ಹಲವಾರು ಕಾಂಗ್ರೆಸ್ ಮುಖಂಡರು ಬರುವಿಕೆಗಾಗಿ ಕಾದು ಕುಳಿತರು. ಇನ್ನೇನು ಮುಖ್ಯಮಂತ್ರಿಗಳು ಕೆಲವೇ ನಿಮಿಷಗಳಲ್ಲಿ ಆಗಮಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು.
ಆದರೆ, ನಿವಾಸಕ್ಕೆ ಸ್ವಲ್ಪ ದೂರದಲ್ಲಿ ಗುಂಪು ಗೂಡಿದ ಮೂಲ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಪಕ್ಷದಿಂದ ಹೊರಹೋದವರ ಮನೆಗೆ ಮುಖ್ಯಮಂತ್ರಿಗಳು ಬರಬಾರದು ಎಂದು ಪಟ್ಟು ಹಿಡಿದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಅಧಿಕಾರಿಗಳಿಂದ ಕಾರ್ಯಕರ್ತರಿಗೆ ಕಿರುಕುಳ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕ್ಷಣ ಕಾಲ ಏನು ನಡೆಯುತ್ತಿದೆ ಎಂಬುದು ಅರ್ಥವಾಗದ ಸ್ಥಿತಿ ನಿರ್ಮಾಣಗೊಂಡಿತು.ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡದೆ ಅರ್ಧ ದಾರಿಯಲ್ಲೇ ವಾಪಸ್ ತೆರಳಿದರು.
ಇಂತಹ ಬೆಳವಣಿಗೆಗಾಗಿ ಕಾದು ನಿಂತಿದ್ದ ಗುಂಪು ಕೇಕೆ ಹಾಕಿ ಯುದ್ಧ ಗೆದ್ದವರಂತೆ ಸಂಭ್ರಮಿಸಿದ್ದು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವಮಾನಗೊಳಿಸಿದ್ದು ಈ ಎಲ್ಲಾ ಬೆಳವಣಿಗೆಗಳು ರಾಜಕಾರಣದಲ್ಲಿ ಹಿನ್ನೆಡೆಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜೆಡಿಎಸ್ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದ್ದ ಮುಖಂಡರು ಈ ರೀತಿ ಪರಸ್ಪರ ಹಾದಿ ಬೀದಿಗಳಲ್ಲಿ ಬಲ ಪ್ರದರ್ಶನಕ್ಕೆ ಮುಂದಾಗಿ ಕೆಸರೆರಚಾಟದಲ್ಲಿ ತೊಡಗಿರುವುದು ದುರಂತವೇ ಸರಿ.
ಜಯಣ್ಣ ಬೆಂಬಲಿಗರ ಆಕ್ರೋಶ: ಕಳೆದ 5 ವರ್ಷದಿಂದ ಕಾಂಗ್ರೆಸ್ ಕಾರ್ಯಕರ್ತರಾಗಿ ಪಕ್ಷದ ಹಿತಕ್ಕಾಗಿ ತನು ಮನ ಧಾರೆ ಎರೆದು ಪಕ್ಷವನ್ನು ಸಂಘಟಿಸಿದ್ದೆವು. ನಮ್ಮನ್ನು ಕಡೆಗಣಿಸಿ ಹಾಸನ ಕ್ಷೇತ್ರದಿಂದ ವಲಸೆ ಬಂದ ಮಾಜಿ ಸಚಿವ ಬಿ.ಶಿವರಾಂ ತಮ್ಮ ಬೆಂಬಲಿಗರ ಮೂಲಕ ಜಯಣ್ಣ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಸಿದ್ದಾರೆ.
ಆದರೆ ಇದೀಗ ರಾಜ್ಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಇದನ್ನು ಸ್ವಾಗತಿಸಿ ಅಭ್ಯರ್ಥಿ ಗೆಲವಿಗೆ ಶ್ರಮಿಸಬೇಕಿದ್ದ ಶಿವರಾಂ ಬೆಂಬಲಿಗರು ಇಂತಹ ಕೃತ್ಯಕ್ಕಿಳಿದಿದ್ದಾರೆ ಎಂದು ಜಯಣ್ಣ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.