ದಾಖಲೆ ಬೆಲೆಗೆ ಕೊಬ್ಬರಿ ಮಾರಾಟ
ಅರಸೀಕೆರೆ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ ನಡೆದ ಕೊಬ್ಬರಿ ಹರಾಜು, ಮಾರುಕಟ್ಟೆ ಇತಿಹಾಸದಲ್ಲಿಯೇ ನೂತನ ದಾಖಲೆ ಸೃಷ್ಟಿಸಿದೆ.
ಕಳೆದ ಶುಕ್ರವಾರದ ಹರಾಜಿನಲ್ಲಿ ಪ್ರತಿ ಕ್ವಿಂಟಲ್ ಕೊಬ್ಬರಿಗೆ ರು. 8400ರಿಂದ ರು. 8500 ವರೆಗೆ ಖರೀದಿ ಮಾಡಲಾಗಿತ್ತು. ಆದರೆ, ಏ. 1ರ ಮಂಗಳವಾರ ಮಧ್ಯಾಹ್ನ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಕ್ವಿಂಟಲ್ ಕೊಬ್ಬರಿ ರು. 10,000ಗೆ ಮಾರಾಟವಾಯಿತು. ಇದು ಈ ಹಿಂದಿನ ದಾಖಲೆಗಳನ್ನೆಲ್ಲ ಮುರಿದಿದೆ.
ತೀವ್ರ ಬರಗಾಲ, ಮಳೆಯ ಅಭಾವ, ತೇವಾಂಶ ಕೊರತೆ, ತೆಂಗಿಗೆ ತಗುಲಿದ ರೋಗಭಾದೆಯಿಂದ ತೆಂಗು ಬೆಳೆ ವಿನಾಶದ ಹಂಚಿಗೆ ತಲುಪಿ ಇಳುವರಿ ಇಳಿಮುಖದಿಂದ ಕೊಬ್ಬರಿ ಮಾರುಕಟ್ಟೆಗೆ ಬರುವ ಪ್ರಮಾಣ ಕುಸಿತಗೊಂಡಿದ್ದು ದೈನಂದಿನ ಮಾರುಕಟ್ಟೆಯಲ್ಲಿ ಕೊಬ್ಬರಿ ಎಣ್ಣೆ ಬೆಲೆಯಲ್ಲಿ ಉಂಟಾದ ಹೆಚ್ಚಳ ಹಾಗೂ ನೆರೆ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಿದ ಪರಿಣಾಮ ದರ ಜಿಗಿತ ಕಂಡಿದೆ. ಅಲ್ಲದೆ ಇನ್ನೂ ಎರಡು ಮೂರು ವರ್ಷಗಳ ಕಾಲ ಧಾರಣೆಯಲ್ಲಿ ಹೆಚ್ಚಳವಾಗಲಿದೆ ಎನ್ನುವ ಮಾತುಗಳು ವರ್ತಕ ಸಮುದಾಯದಿಂದ ಕೇಳಿಬರುತ್ತಿದೆ.
ಬಂಪರ್ ಬೆಲೆಗೆ ಕಾರಣ: ಕಳೆದ ಎರಡು ಮೂರು ವರ್ಷಗಳಿಂದ ಮಳೆಯಿಲ್ಲದ ಪರಿಣಾಮ ತಾಲ್ಲೂಕಿನಾದ್ಯಂತ ಸುಮಾರು 7 ಲಕ್ಷ ತೆಂಗಿನ ಮರಗಳು ನಾಶಗೊಂಡಿವೆ. ಇರುವ ಅಲ್ಪ ಸ್ವಲ್ಪ ತೋಟವೂ ಕೂಡ ನೀರಿಲ್ಲದೇ ಒಣಗತೊಡಗಿದೆ. ತೆಂಗಿನ ಮರಗಳಲ್ಲಿರುವ ಕಾಯಿಗಳೂ ಕೂಡ ಗಾತ್ರದಲ್ಲಿ ಕುಂಠಿತಗೊಂಡಿವೆ. ಹೀಗಾಗಿಯೇ ಕೊಬ್ಬರಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ನೆರೆಯ ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಗೆ ಇಲ್ಲಿಂದಲೆ ಕೊಬ್ಬರಿ ರವಾನೆ ಮಾಡಲಾಗುತ್ತದೆ. ನಿರೀಕ್ಷೆಗಿಂತ ಬೇಡಿಕೆ ಹೆಚ್ಚಿದ ಪರಿಣಾಮ ಬಂಪರ್ ಬಲೆಗೆ ದೊರೆಯುವಂತಾಗಿದೆ.
ಬೇಡಿಕೆಗೆ ತಕ್ಕಂತೆ ಕೊಬ್ಬರಿ ಮಾರುಕಟ್ಟೆಗೆ ಬಾರದಿರುವುದು ಬೆಲೆ ಹೆಚ್ಚಳಕ್ಕೆ ಒಂದು ಕಾರಣವಾದರೆ ಬೆಳೆ ನಾಶ, ಇಳುವರಿಯಲ್ಲಿ ಕುಂಠಿತ, ಮಾರುಕಟ್ಟೆಯಲ್ಲಿ ಕೊಬ್ಬರಿ ಎಣ್ಣೆಗೆ ಬೆಲೆ ಹೆಚ್ಚಿರುವುದು ಕೊಬ್ಬರಿ ಧಾರಣೆ ಹೆಚ್ಚಲು ಮತ್ತೊಂದು ಕಾರಣವಾಗಿದೆ. ಮುಂಬರುವ ಹಲವು ವಾರಗಳ ಕಾಲವೂ ಪರಿಸ್ಥಿತಿ ಹೀಗೆ ಮುಂದುವರೆಯಲಿದೆ ಎಂಬುದು ವರ್ತಕರ ಅಭಿಪ್ರಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

