ಕಳಪೆ ಕಾಮಗಾರಿ: ಕ್ರಮಕ್ಕೆ ಒತ್ತಾಯ
ರಾಮನಾಥಪುರ: ಕಾವೇರಿ ನೀರಾವರಿ ಜಲಾನಯನ ಹಾಗೂ ಹಾರಂಗಿ ಹೇಮಾವತಿ ಎಲ್ಲಾ ನಾಲೆಗಳಿಗೂ ಮತ್ತು ತೂಬುಗಳಿಗೆ ಅಳವಡಿಸಿರುವ ಸಿಮೆಂಟ್ ಲೈನಿಂಗ್ ಕಾಮಗಾರಿ ಕಳಪೆಮಟ್ಟದ್ದಾಗಿದೆ ಎಂದು ಸಮಾಜ ಸೇವಕ ಬೂದನೂರು ನಾಗರಾಜ್ ಆರೋಪಿಸಿದ್ದಾರೆ. ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸರ್ಕಾರ ನೀಡಿದ್ದ ಆದೇಶವನ್ನು ಗಾಳಿಗೆ ತೂರಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಣ ಮಾಡುವ ದುರುದ್ದೇಶದಿಂದ ಗುತ್ತಿಗೆದಾರರು ತೀರಾ ಕಳಪೆ ಮಟ್ಟದಲ್ಲಿ ಕಾಮಗಾರಿ ನಿರ್ಮಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗುತ್ತಿದ್ದು, ಇಂತಹ ಕಳಪೆ ಕಾಮಗಾರಿ ಕುರಿತು ರೈತರು ಸಲ್ಲಿಸಿದ ಮನವಿಗೆ ಬೆಲೆಯಿಲ್ಲದಂತಾಗಿದೆ ಎಂದು ಅವರು ಆರೋಪಿಸಿದರು.
ಕಳಪೆ ಕಾಮಗಾರಿ ಹೇಗೆ?: ಸಮೀಪದ ಕೇರಳಾಪುರ ಪಂಚಾಯ್ತಿ ವ್ಯಾಪ್ತಿಗೆ ಬರುವ ಬೂದನೂರು ಗ್ರಾಮದ ಬಳಿ ನಡೆಯುತ್ತಿರುವ 53ನೇ ಹಾರಂಗಿ ನಾಲಾ ತೂಬಿನ ಕಾಮಗಾರಿಗೆ ಬಳಸುತ್ತಿರುವ ಮರಳು ತೀರಾ ಕಳಪೆ ಮಟ್ಟದ್ದಾಗಿದೆ ಎಂದ ನಾಗರಾಜ್, ಈ ಹಿಂದೆಯೇ ಮಾಡಿದ ಹಳೆಯ ಸಿಮೆಂಟ್ ಲೈನಿಂಗ್ ಅನ್ನು ಸಾಕಷ್ಟು ದೂರ ತೆಗೆಯದೆ ಅದರ ಮೇಲೆ ಸಿಮೆಂಟ್ ತಿಳಿ ಲೇಪಿಸಿ ಕಾಮಗಾರಿ ಮಾಡಲಾಗಿದೆ. ಈಗಾಗಾರುವ ಸಿಮೆಂಟ್ ಲೈನಿಂಗ್ಗೆ ಸರಿಯಾಗಿ ನೀರು ಹಾಕಿ ಕ್ಯೂರಿಂಗ್ ಮಾಡಿಲ್ಲ. ಹಾಗಾಗಿ, ಸಿಮೆಂಟ್ ಲೈನಿಂಗ್ಗಳೂ ಈಗಾಗಲೇ ಬಿರುಕುಬಿಟ್ಟಿವೆ. ಇದನ್ನು ನಿರ್ವಹಿಸುತ್ತಿರುವ ಚನ್ನರಾಯಪಟ್ಟಣ ಮೂಲದ ಗುತ್ತಿಗೆದಾರನೇ ಇದಕ್ಕೆ ಸ್ಪಷ್ಟೀಕರಣ ಕೊಡಬೇಕು ಎಂದು ನಾಗರಾಜ್ ಗುಡುಗಿದರು.
ಒತ್ತುವರಿ ತೆರವಿನಲ್ಲೂ ಅಕ್ರಮ?: ಇನ್ನು ನಾಲಾ ತೂಬಿನ ಎರಡೂ ಬದಿ ಎತ್ತಿನ ಗಾಡಿಗಳು ಓಡಾಡಲು ಅನುಕೂಲವಾಗಲು ದಾರಿ ನಿರ್ಮಿಸಬೇಕು. ಹೀಗೆ, ನಾಲಾ ಬದಿಯ ಜಾಗಗಳು ಅಲ್ಲಲ್ಲಿ ರೈತರಿಂದ ಒತ್ತುವರಿ ಮಾಡಲಾಗಿತ್ತು. ಇದನ್ನು ತೆರವುಗೊಳಿಸಲಾಗಿದೆ. ಆದರೆ, ಕೆಲವು ಒತ್ತುವರಿಗಳನ್ನು ತೆರವುಗೊಳಿಸಿಲ್ಲ. ಉದಾಹರಣೆಗೆ, ಇದೇ ಊರಿನ ಅಣ್ಣೇಗೌಡ ಎಂಬಾತನ ಮನೆ ಪಕ್ಕದ ನಾಲೆಯ ಜಾಗ ಒತ್ತುವರಿಯಾಗಿದ್ದರೂ, ಅಧಿಕಾರಿಗಳು ಸುಮ್ಮನಿದ್ದಾರೆ. ಇದರರ್ಥ ಏನು ಎಂದು ನಾಗರಾಜ್ ಪ್ರಶ್ನಿಸಿದರು.
ಎಚ್ಚರಿಕೆ: ಹಣ ಬಲ ಇರುವವರಿಗೆ ಒಂದು ನ್ಯಾಯ, ಬಡ ರೈತರಿಗೆ ಮತ್ತೊಂದು ನ್ಯಾಯ ಮಾಡಲಾಗುತ್ತಿದೆ ಎಂದು ಟೀಕಿಸಿದ ಅವರು, ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಮೂಕ ಪ್ರೇಕ್ಷಕರಂತೆ ಇದ್ದು, ಗುತ್ತಿಗೆದಾರರೊಂದಿಗೆ ಸಹಕರಿಸುತ್ತಿರುವ ಇಲಾಖೆಯ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ, ಮುಖ್ಯ ಎಂಜಿನಿಯರ್ ಅವರಿಗೆ ಈ ಬಗ್ಗೆ ಪತ್ರ ಬರೆಯುವುದಾಗಿ ಅವರು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

