ನೀರೆಯರಿಗೆ ನಿರಂತರ ಅಭಯ 'ಹಸ್ತ'
ಬೇಲೂರು: ಕಾಂಗ್ರೆಸ್ ರಾಜಕೀಯವಾಗಿ ಮಹಿಳೆಯರಿಗೆ ವಿಶೇಷ ಸವಲತ್ತುಗಳನ್ನು ನೀಡುವ ಮೂಲಕ ಅವರನ್ನು ಸಮಾಜದಲ್ಲಿ ಗುರುತಿಸುವ ಕೆಲಸ ಮಾಡಿದೆ ಎಂದು ಮಾಜಿ ಸಚಿವೆ ಮೋಟಮ್ಮ ಅಭಿಪ್ರಾಯಪಟ್ಟರು.
ತಾಲೂಕಿನ ಕನಾಯಕನಹಳ್ಳಿ ಗ್ರಾಮದಲ್ಲಿ ಭಾನುವಾರ ನಡದೆ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಮಹಿಳೆಯರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದು, ಈ ಹಿಂದೆ ಅವರದೆ ಆದ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರದಲ್ಲಿ, ನಂತರ ಯಡಿಯೂರಪ್ಪ ಸರ್ಕಾರದಲ್ಲಿ ಶೋಭಾ ಸಚಿವೆ ಆಗಿದ್ದು, ಬಿಟ್ಟರೆ ಇನ್ನಾವುದೇ ಮಹಿಳೆಗೆ ಅಧಿಕಾರ ಕೊಟ್ಟಿಲ್ಲ. ವಿಮಲಾಗೌಡರಂಥ ಪ್ರಜ್ಞಾವಂತ ಮಹಿಳೆಯರಿದ್ದರೂ, ಅವರಿಗೆ ಸಚಿವ ಸ್ಥಾನ, ಮಹಿಳಾ ಆಯೋಗ, ಅಭಿವೃದ್ಧಿ ನಿಗಮದಲ್ಲಿ ಅಧಿಕಾರ ದೊರಕಲಿಲ್ಲ. ಕಾಂಗ್ರೆಸ್ ಮೊದಲಿನಿದಂಲೂ ಮಹಿಳೆಯರ ಶ್ರೇಯೋಭಿಲಾಷಿ ಎನ್ನುವುದಕ್ಕೆ ಪ್ರತಿ ಮಂತ್ರಿ ಮಂಡಲದಲ್ಲಿ ಮಹಿಳೆಯರಿಗೆ ಸಚಿವ ಸ್ಥಾನ ನೀಡಿದ್ದು, ರಾಣಿ ಸತೀಶ್, ಮೋಟಮ್ಮ, ಮನೋರಮಾ, ಉಮಾಶ್ರೀ ಹಾಗೂ ಇನ್ನಿತರ ಅನೇಕರು ಮಂತ್ರಿ ಸ್ಥಾನ ಅಲಂಕರಿಸಿದ್ದಾರೆ ಎಂದು ತಿಳಿಸಿದರು.
ಈ ದೇಶದಲ್ಲಿ ಅಬಲೆಯರಾಗಿದ್ದ ಮಹಿಳೆಯರನ್ನು ಗುರುತಿಸಿ ಅವರಿಗೆ ಸ್ವಾವಲಂಬಿ ಜೀವನ ನಡೆಸಲು ಸಹಾಯ ಹಸ್ತವನ್ನು ನೀಡಿದ್ದು ಕಾಂಗ್ರೆಸ್. ದೇಶದಲ್ಲಿ ಶೇ.60 ಮಹಿಳೆಯರಿದ್ದರೂ ಯಾವುದೇ ಪಕ್ಷ ಮಹಿಳೆಯರ ಪರವಾಗಿ ಕಾನೂನು ರೂಪಿಸುವುದು ಸೇರಿದಂತೆ ಅವರ ಆರ್ಥಿಕ ಅಭಿವೃದ್ಧಿಗೆ ಮುಂದಾಗಿಲ್ಲ. ಆದರೆ ಕಾಂಗ್ರೆಸ್ ಮಹಿಳೆಯರ ಪರವಾಗಿದ್ದು ಅವರ ಆರ್ಥಿಕ ಏಳಿಗೆಗೆ ಸ್ತ್ರೀ ಶಕ್ತಿಯಂತಹ ಸಂಘಗಳನ್ನು ರೂಪಿಸಿ ಅವರ ಬದುಕು ಹಸನಾಗುವಂತೆ ಮಾಡಿದೆ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಶೇ.33 ರಷ್ಟು ಮೀಸಲಾತಿ ಜಾರಿಗೆ ತಂದ ಪರಿಣಾಮ ಇಂದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯ್ತಿ ಹಾಗೂ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೂ ಅಧಿಕಾರ ಗದ್ದುಗೆ ಹಿಡಿಯುವ ಮಟ್ಟಕ್ಕೆ ಬರಲು ಕಾರಣವಾಯಿತು ಎಂದು ಮೋಟಮ್ಮ ಅಭಿಪ್ರಾಯಪಟ್ಟರು.
ಶಾಸಕ ವೈ ಎನ್.ರುದ್ರೇಶ್ಗೌಡ ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿ ನಿರ್ಮಾಣ ಆಗಿರುವ ಸಾಕಷ್ಟು ಜಲಾಶಯಗಳು ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿದೆ. ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳು ಲೋಕಸಭೆ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆ ಆಗಲಿದ್ದು ಎ.ಮಂಜು ಬಹುಮತದಿಂದ ವಿಜಯ ಸಾಧಿಸಲಿದ್ದಾರೆ ಎಂದರು. ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಮತ ನೀಡುವಾಗ ನಿಮ್ಮ ಗ್ರಾಮಕ್ಕೆ ಏನು ಮಾಡಿದ್ದಾರೆ. ಇಲ್ಲಿಂದ ಏನನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬುದನ್ನು ತುಲನೆ ಮಾಡಿ ಮತದಾನ ಮಾಡಿ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಿ.ಕೆ ಚಂದ್ರಕಲಾ, ಲಲಿತಮ್ಮ, ನಿಂಗೇಗೌಡ, ಪುರಸಭಾ ಸದಸ್ಯ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

