ಹಾಸನ

ಸ್ವಜನ ಪಕ್ಷಪಾತ ರಾಜಕಾರಣಕ್ಕೆ ತಿಲಾಂಜಲಿ ನೀಡಿ: ಅಶ್ವಿನಿ ರೈ ಕರೆ

Published On :

ಹೊಳೆನರಸೀಪುರ: ಜಿಲ್ಲೆಯಲ್ಲಿನ ಸ್ವಜನಪಕ್ಷಪಾತದ ರಾಜಕಾರಣಕ್ಕೆ ತಿಲಾಂಜಲಿ ನೀಡುವ ದೃಷ್ಟಿಯಿಂದಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಜನ ಬೆಂಬಲಿಸಲಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಾಗೂ ಹಾಸನ ಜಿಲ್ಲಾ ವೀಕ್ಷಕ ಅಶ್ವಿನಿ ಕುಮಾರ್ ರೈ ಹೇಳಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದ ಆಸೆಗಾಗಿ ಎಂದಿಗೂ ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಂಡಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿದ್ದ ಕೇಂದ್ರ ಮಂತ್ರಿಗಳನ್ನು ಮುಲಾಜಿಲ್ಲದೇ ಜೈಲಿಗೆ ಕಳಿಸಿದೆ ಎಂದರು.
ವರವಾಗಲಿದೆ: ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, ಭ್ರಷ್ಟಾಚಾರ ರಹಿತವಾಗಿ ಹಾಗೂ ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮ ಕುಟುಂಬದವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೆ, ಸ್ವಜನಪಕ್ಷಪಾತ ನಡೆಸದೇ ಸ್ವಾರ್ಥ ರಾಜಕಾರಣಕ್ಕಾಗಿ ಅಂಟಿಕೂರದೇ ಆಡಳಿತ ನೀಡಿದ್ದಾರೆ. ತಮ್ಮ ಹತ್ತು ತಿಂಗಳ ಅವಧಿಯಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೂಡ ಅದೇ ರೀತಿಯ ಆದರ್ಶದ ಆಡಳಿತ ನಡೆಸಿದ್ದಾರೆ. ಹಲವು ಜನಪರ ಯೋಜನೆಗಳನ್ನು ನೀಡಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ವರವಾಗಲಿದೆ ಎಂಬ ವಿಶ್ವಾಸವನ್ನು ಅಶ್ವನಿ ಕುಮಾರ್ ರೈ ತಿಳಿಸಿದರು.
ಶ್ರೀರಕ್ಷೆ: ಪ್ರಧಾನಿಯಾಗುವ ಅವಕಾಶ ದೊರೆತರೂ ಸೋನಿಯಾ ಗಾಂಧಿ ಅವರು ಆ ಹುದ್ದೆಗೆ ಆಸೆಪಡಲಿಲ್ಲ. ಇದನ್ನು, ಕಾಂಗ್ರೆಸನ್ನು ಕುಟುಂಬ ರಾಜಕೀಯದ ಪಕ್ಷ ಎಂದು ಟೀಕಿಸುವವರು ಅರ್ಥ ಮಾಡಿಕೊಳ್ಳಬೇಕು ಎಂದು ಅಶ್ವಿನಿ ಕುಮಾರ್ ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತಂದ ಲೋಕಪಾಲ್ ಮಸೂದೆ, ಭೂಸ್ವಾಧೀನ ಮಸೂದೆ, ಆಹಾರ ಭದ್ರತೆ ಕಾಯ್ದೆ ಯೋಜನೆಗಳೇ ಕಾಂಗ್ರೆಸ್ ಗೆಲವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಹಾಸನ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮಧುಕರ್ ಗೌಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ. ಹರೀಶ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೇಯಸ್ ಪಟೇಲ್, ತಾಲೂಕು ಪರಿಶಿಷ್ಟ ವರ್ಗಗಳ ವಿಭಾಗದ ಅಧ್ಯಕ್ಷ ವಕೀಲ ಮಂಜುನಾಥ್, ತಾ.ಪಂ. ಮಾಜಿ ಅಧ್ಯಕ್ಷ ಲಕ್ಕೂರು ಬಸವರಾಜು, ಎಚ್.ಟಿ. ಲಕ್ಷ್ಮಣ್, ರಾಧಾಕೃಷ್ಣಬಾಬು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.