ಹಾಸನ

ಅಹಿಂದ ಅಸ್ತಿತ್ವಕ್ಕೂ ಮುನ್ನ ಆ ವರ್ಗಕ್ಕೆ ಗೌಡರ ಶ್ರಮವಿದೆ

Published On :

ಹಾಸನ: ಅಹಿಂದ ಪರಿಕಲ್ಪನೆ ಬರುವ ಮೊದಲೇ ಆ ಸಮುದಾಯಗಳ ಏಳಿಗೆಗಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಶ್ರಮಿಸಿ, ಅನೇಕ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ ಹೇಳಿದ್ದಾರೆ.
ನಗರದಲ್ಲಿ  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ಎಂದರೆ  ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು. ಅಹಿಂದ ಎನ್ನುವ ಪರಿಕಲ್ಪನೆಯೊಂದಿಗೆ ಪ್ರಚಾರಕ್ಕೆ ಹೊರಟವರೆಂದರೆ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮತ್ತು ಸಿಎಂ ಸಿದ್ದರಾಮಯ್ಯ. ಇಬ್ರಾಹಿಂ ಜೆಡಿಎಸ್ ಬಿಟ್ಟ ನಂತರ ಇದುವರೆಗೂ ಕಾಂಗ್ರೆಸ್ ಅವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ವಿಷಾದಿಸಿದರು.
ದೇವೇಗೌಡರು ಅಲ್ಪಸಂಖ್ಯಾತ ಸಮುದಾಯದ ಮುಖಂಡ ಮಿರಾಜುದ್ದೀನ್ ಪಟೇಲ್ ಅವರನ್ನು ರಾಜ್ಯ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿದ್ದಲ್ಲದೇ ಪಕ್ಷದ ರಾಜ್ಯಘಟಕದ ಅಧ್ಯಕ್ಷರನ್ನಾಗಿಯೂ ನೇಮಕ ಮಾಡಿದ್ದರು.
ಅಲ್ಪಸಂಖ್ಯಾತರಿಗೆ ಅವಕಾಶ: ಇತರೆ ಅಲ್ಪಸಂಖ್ಯಾತರ ಮುಖಂಡ ಸಯ್ಯದ್ ಮುಜಿರ್ ಆವರನ್ನು ಕರ್ನಾಟಕ ವಿಧಾನ ಪರಿಷತ್ ಸದ್ಯಸರನ್ನಾಗಿ ಮಾಡಿದ್ದರು. ಜಮಿರ್ ಅಹಮದ್ ಖಾನ್ ಅವರು 2 ನೇ ಬಾರಿ ಶಾಸಕರಾಗಿ ಆಯ್ಕೆಯಾಗಲು ಕಾರಣರಾದರು. ಎಚ್.ಡಿ. ದೇವೇಗೌಡರ ಸಚಿವ ಸಂಪುಟದಲ್ಲಿ ಪ್ರಬಲ ಖಾತೆಯಾದ ಗೃಹ ಖಾತೆಯನ್ನು ಜವಬ್ದಾರಿಯನ್ನು ರೋಷನ್ ಬೇಗ್ ಅವರಿಗೆ ವಹಿಸಿದ್ದರು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತ ಸಮುದಾಯಕ್ಕೆ ಔದ್ಯೋಗಿಕವಾಗಿ ಮತ್ತು ಶೈಕ್ಷಣಿಕವಾಗಿ ಶೇ. 4ರಷ್ಟು ಮೀಸಲಾತಿ ಕಲ್ಪಿಸಿದ್ದರು. ಆ ನಡೆ ಭಾರತದಲ್ಲಿಯೇ ಪ್ರಥಮ ಎಂದರು.
ಜನಜನಿತ: ಇತ್ತಿಚಿನ ಬೆಳವಣಿಗೆಗಳಲ್ಲಿ ಹಿರಿಯರಾದ ಜಾಫರ್ ಷರೀಫ್ ಅವರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಂಡ ರೀತಿ ಇಡೀ ಅಲ್ಪಸಂಖ್ಯಾತ ಸಮುದಾಯಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ. ಇದು ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ಕಡೆಗಣಿಸಿ ಅವರನ್ನು ಕೇವಲ ವೋಟ್ ಬ್ಯಾಂಕ್‌ಗಾಗಿ ಮಾತ್ರ ಬಳಸಿಕೊಳ್ಳುತ್ತಿರುವುದು ಜನಜನಿತ ಎಂದು ತಿಳಿಸಿದರು.
ಗೌಡರಿಗೆ ಕೀರ್ತಿ: ದೇವೇಗೌಡರು ಮುಖ್ಯಮಂತ್ರಿಯಾದ ಸಮಯದಲ್ಲಿ ಹಿಂದುಳಿದ ವರ್ಗಗಳಿಗೆ ಮತ್ತು ಮಹಿಳೆಯರಿಗೆ ಕರ್ನಾಟಕ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಥಮ ಬಾರಿಗೆ ಮೀಸಲಾತಿ ಕಲ್ಪಿಸಿದರು. ರಾಜಕೀಯವಾಗಿ ಅಧಿಕಾರ ವಂಚಿತರಾಗಿದ್ದ ಹಿಂದುಳಿದ ವರ್ಗದ ಲಕ್ಷಾಂತರ ಜನರಿಗೆ ನಾನಾ ಸ್ಥಾನಮಾನಗಳನ್ನು ಗಳಿಸಲು ನೆರವಾದ ಕೀರ್ತಿದೇವೇಗೌಡರಿಗೆ ಸಲ್ಲುತ್ತದೆ ಎಂದರು.
ಅಷ್ಟೇ ಅಲ್ಲ, ಹಿಂದುಳಿದ ವರ್ಗಕ್ಕೆ ಸೇರಿದ್ದ ಸಿದ್ದರಾಮಯ್ಯ ಅವರನ್ನು ಹಿಂದೆ ಉಪಮುಖ್ಯಮಂತ್ರಿ ಮಾಡಿದ್ದೂ ದೇವೇಗೌಡರು. ಈ ವರ್ಗದ ಇತರೆ ಮುಖಂಡರಾದ ವಿ.ಎಸ್. ಉಗ್ರಪ್ಪ, ಎಚ್.ಸಿ. ನೀರಾವರಿ, ಬಂಡೆಪ್ಪ ಕಾಶೆಂಪುರ, ಡಾ. ಹುಲಿನಾಯ್ಕರ್, ಡಿ.ಟಿ. ಜಯಕುಮಾರ್, ಕೋದಂಡರಾಮಯ್ಯ, ಚಿಕ್ಕಮಗಳೂರಿನ ಕೃಷ್ಣಮೂರ್ತಿ ಸೇರಿದಂತೆ ಇನ್ನೂ ಹಲವರಿಗೆ ರಾಜಕೀಯ ಶಕ್ತಿಯನ್ನು ಧಾರೆಯೆದರು ಎಂದು ಹೇಳಿದರು.
ಹೊಳೆನರಸೀಪುರ ತಾಲೂಕಿನ ಅಣ್ಣೇಚಾಕನಹಳ್ಳಿ ದೊಡ್ಡೇಗೌಡರನ್ನು ಎಂಎಲ್‌ಸಿ ಆಗಿಸಿ, ಡಾ. ದೊಡ್ಡೇಗೌಡರನ್ನು ಕೆಪಿಎಸ್‌ಸಿ ಅಧ್ಯಕ್ಷರಾಗಿ ಮಾಡಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ ಎಂದರು. ್ವಾಮಿಯವರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮತ್ತು ರಾಜ್ಯದ ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ಮಾಡಿದರು. ಚಂದ್ರಪ್ರಸಾದ್ ತ್ಯಾಗಿಯವರನ್ನು ಕೊಳಚೆ ನಿರ್ಮೂಲನಾ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿದ್ದರು.
ಮೀಸಲಾತಿ ಇಲ್ಲದ ಸಮಯದಲ್ಲಿಯೇ ಬಾಲಕೃಷ್ಣಮೂರ್ತಿ ಮತ್ತು ಜಿ.ಟಿ ಇಂದಿರಾ ರವರನ್ನು ಹಾಸನ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷರನ್ನಾಗಿ ಮಾಡಿದ್ದು ಗೌಡರಲ್ಲವೇ  ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಯುವ ಜೆಡಿಎಸ್ ಕಾರ್ಯದರ್ಶಿ ಹೊಂಗೆರೆ ರಘು,  ಎಪಿಎಂಸಿ ನಿರ್ದೇಶಕ ಡಿ.ಸಿ. ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.