ಘನೋದ್ದೇಶಗಳು ನೆನೆಗುದಿಗೆ
ದೇಶದ ಮಹತ್ವದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ ದೇವೇಗೌಡರು ತಾವು ಪ್ರತಿನಿಧಿಸಿದ್ದ ಹಾಸನ ಕ್ಷೇತ್ರ ದೇಶದ ನಕ್ಷೆಯಲ್ಲಿ ಪಸರಿಸುವಂತೆ ಮಾಡಿದರು. ಹಾಸನ ಕ್ಷೇತ್ರಕ್ಕೆ ಹಲವಾರು ಘನೋದ್ದೇಶ ಯೋಜನೆಗಳು ಜಾರಿಯಾದವು. ಆದರೆ, ಅವು ಅರ್ಧಕ್ಕೆ ನಿಂತಿರುವ ಬಗ್ಗೆ, ಈಗ ಚುನಾವಣೆಯಲ್ಲಿ ಮತ ಕೇಳುತ್ತ ಅಭಿವೃದ್ಧಿಯನ್ನು ಜಪಿಸುತ್ತಿರುವ ಜನಪ್ರತಿನಿಧಿಗಳು ಉತ್ತರಿಸಬೇಕಾಗಿದೆ. ಅವರು ಉತ್ತರಿಸುವರೇ ಎಂಬುದು ಕ್ಷೇತ್ರದ ಮತದಾರನ ಯಕ್ಷ ಪ್ರಶ್ನೆಯಾಗಿದೆ.
- ದಯಾಶಂಕರ ಮೈಲಿ
ಹಾಸನ: ಜಿಲ್ಲೆಯಲ್ಲಿ ಅಭಿವೃದ್ಧಿನೇ ಆಗಿಲ್ಲ ಎಂದು ಹೇಳಲಿಕ್ಕೆ ಆಗದಿದ್ದರೂ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬೆನ್ನುಲುಬಾಗಿ ನಿಲ್ಲುವಂತಹ ಮಹತ್ತರವಾದ, ಜನಪರವಾದ ಘನೋದ್ದೇಶದಿಂದ ಕೂಡಿದ ಯೋಜನೆಗಳು ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವುದು ಆಳುವ ಸರ್ಕಾರಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯತನಕ್ಕೆ ಹಿಡಿದ ಕೈಗನ್ನಡಿಯೇ.
ಇಲ್ಲಿನ ವಿಮಾನ ನಿಲ್ದಾಣ ಆಗಿದ್ದರೇ ಹಾಸನ ಜಿಲ್ಲೆಯ ರೈತರ ಕೃಷಿ ಉತ್ಪನ್ನಗಳಲ್ಲದೇ ಕೊಡಗು, ಮೈಸೂರು, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳ ರೈತರ ಕೃಷಿ ಉತ್ಪನ್ನಗಳು ವಿದೇಶಗಳಿಗೆ ರಫ್ತಾಗುತ್ತಿತ್ತು. ಜೊತೆಗೆ ಇಲ್ಲಿನ ವಿಶೇಷ ಕೈಗಾರಿಕಾ ವಲಯದಲ್ಲಿ ತಯಾರಾಗುವ ವಸ್ತುಗಳು ಹೊರದೇಶಗಳಿಗೆ ಹೋಗಲು ಮತ್ತು ಹೊರದೇಶಗಳಿಂದ ಕೈಗಾರಿಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು ತರಿಸಿಕೊಳ್ಳಲು ಸುಲಭವಾಗುತ್ತಿತ್ತು. ಆದರೆ, ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಲೇ ಇಲ್ಲ. ಇದಲ್ಲದೇ, ಬೆಂಗಳೂರು ಮತ್ತು ಹಾಸನ ರೈಲು ಮಾರ್ಗ 166 ಕಿ. ಮೀ ಉದ್ದದ ನಿರ್ಮಾಣ ಕಾಮಗಾರಿ 18 ವರ್ಷಗಳಾದರೂ ಪೂರ್ಣಗೊಂಡಿಲ್ಲ. ಇದಾಗಿದ್ದರೇ, ಜನರು 2 ಗಂಟೆಯಲ್ಲಿ ಬೆಂಗಳೂರಿಗೆ ಹೋಗಬಹುದಿತ್ತು.
ಇನ್ನು ರು. 339 ಕೋಟಿ ಅಂದಾಜು ವೆಚ್ಚದ ಚಿಕ್ಕನಾಯಕನಹಳ್ಳಿ- ದುದ್ದ- ಹಾಸನ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯೂ ಪೂರ್ಣಗೊಂಡಿಲ್ಲ.
2004 ರಿಂದ 2008ರವರೆಗೆ ಹಾಸನ ಜಿಲ್ಲೆಯ ಪಾಲಿಗೆ ಸುವರ್ಣಯುಗ. ಆ ಅವಧಿಯಲ್ಲಿ ಇದ್ದ ಕಾಂಗ್ರೆಸ್-ಜೆಡಿಎಸ್, ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರಗಳಲ್ಲಿ ಜಿಲ್ಲೆಗೆ ಸುಮಾರು ರು. 2500 ಕೋಟಿ ನಾನಾ ಅಭಿವೃದ್ದಿ ಯೋಜನೆಗಳಿಗೆ ಹರಿದು ಬಂದಿತ್ತು. ಇದು ರಾಜಕೀಯ ವಲಯದಲ್ಲಿ ಭಾರಿ ಟೀಕೆಗೂ ತುತ್ತಾಗಿತ್ತು ಎಂಬುದು ಇಲ್ಲಿ ಉಲ್ಲೇಖನಾರ್ಹವೇ. ಆಗ ಸಾವಿರಾರು ಯುವಕ, ಯುವತಿಯರಿಗೆ ಉದ್ಯೋಗ ನೀಡುವ ಕೈಗಾರಿಕೆಗಳು ಬಂದವು, ಶಿಕ್ಷಣ ಸಂಸ್ಥೆಗಳು ಆರಂಭವಾದವು. ಆದರೆ 2009 ರಿಂದ 2014 ರವರೆಗೆ ಜಿಲ್ಲೆಗೆ ನಿರೀಕ್ಷಿತ ಮಟ್ಟದ ಅನುದಾನಗಳು ಸಿಗುತ್ತಿಲ್ಲ. ಬಜೆಟ್ಗಳಲ್ಲೂ ಕಡೆಗಣಿಸಲಾಗಿದೆ ಎಂದೇ ಹೇಳಬಹುದು. ಹಾಸನ ನಗರದ ಹೊರವಲಯದಲ್ಲಿ ಆರಂಭಿಸಿರುವ ಪಶು ವೈದ್ಯಕೀಯ ಕಾಲೇಜು, ಕೃಷಿ ವಿಶ್ವವಿದ್ಯಾನಿಲಯ ಮತ್ತು ಹಾಸನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸಾಕಷ್ಟು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬೇಕಾದ ಹಣವನ್ನು ಬಿಡುಗಡೆ ಮಾಡಿಲ್ಲ. ಕೃಷಿ ವಿವಿ ಆಡಳಿತ ಮಂಡಳಿ ಕಾಲೇಜಿನ ಮಾನ್ಯತೆ ಪಡೆದುಕೊಳ್ಳಲು ಪ್ರತಿ ವರ್ಷ ಹರಸಾಹಸ ಪಡಬೇಕಾಗಿದೆ. ಜಿಲ್ಲೆಯ ದೊಡ್ಡಾಸ್ಪತ್ರೆ ಎಂದೇ ಕರೆಯುವ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು 350 ಹಾಸಿಗೆಗಳಿಂದ 750 ಹಾಸಿಗೆಯುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಬೇಕಾದ ಹಣವನ್ನು ನೀಡಿಲ್ಲ. ಈಗ ಹೊಸದಾಗಿ ನಿರ್ಮಿಸಿರುವ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಗೆ ಕಟ್ಟಡ ಮೂಲ ಸೌಕರ್ಯ ಒದಗಿಸಲು ವೈದ್ಯಕೀಯ ಶಿಕ್ಷಣ ಸಚಿವರು, ಬೆಂಗಳೂರಿಗೆ ಹೋದ ಕ್ಷಣ ರು. 10 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದರು. ಅವರು ಹೋಗಿ 7 ತಿಂಗಳಾಯ್ತು. ಇನ್ನು ಹಣ ಬಿಡುಗಡೆಯಾಗಿಲ್ಲ. ಮೂಲ ಸೌಲಭ್ಯಗಳ ಕೊರತೆ ಪರಿಣಾಮ ವೈದ್ಯಕೀಯ ಕಾಲೇಜಿಗೆ 16 ಸ್ನಾತಕೋತ್ತರ ಕೋರ್ಸ್ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಹಾಸನ ನಗರದ ಹೊರವಲಯದಲ್ಲಿ ಇರುವ ಹೈಟೆಕ್ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಇರುವ ರೈಲ್ವೆ ಹಳಿ ಬಳಿ ಮೇಲ್ಸುತುವೆ ನಿರ್ಮಿಸಲು ರೈಲ್ವೆ ಇಲಾಖೆ ರು. 94 ಕೋಟಿ ಅಂದಾಜು ವೆಚ್ಚದ ಪಟ್ಟಿ ತಯಾರಿಸಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಹಣ ನೀಡಿಲ್ಲ. ಅದನ್ನು ಕೊಡಿಸುವ ಬಗ್ಗೆಯೂ ಗಮನಹರಿಸಿಲ್ಲ. ಹಾಸನ ಡೈರಿ ವೃತ್ತದಿಂದ ಬೇಲೂರು ರಸ್ತೆಗೆ ಸಂಪರ್ಕ ಕಲ್ಪಿಸಲು ಅಡ್ಡಿಯಾಗಿರುವ ಭೂ ಸ್ವಾಧೀನ ಸಮಸ್ಯೆಯನ್ನು ಬಗೆಹರಿಸಿಲ್ಲ.
1996 ರಲ್ಲಿ ಹಾಸನ ಹೊರವಲಯದಲ್ಲಿ ಇರುವ ಬೂವನಹಳ್ಳಿ ಸಮೀಪ ವಿಮಾನ ನಿಲ್ದಾಣ ಸ್ಥಾಪಿಸಲು 530 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರು. 1200 ವೆಚ್ಚದಲ್ಲಿ ವಿಮಾನ ನಿಲ್ದಾಣ ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಒಡಂಬಡಿಕೆಯಾಗಿತ್ತು. 2007 ರಲ್ಲಿ ಮಾಜಿ ಪ್ರಧಾನಿ ದೇವೇಗೌಡರು. ಕಾಮಗಾರಿ ಆರಂಭಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದ್ದರು. ಆದರೆ ಕೇಂದ್ರ ವಿಮಾನಯಾನ ನಿರ್ದೇಶನಾಲಯದಿಂದ ಬೇಕಾದ ಸಹಕಾರ ಸಿಗದೇ ನೆನೆಗುದಿಗೆ ಬಿದ್ದಿದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ 1996 ರಲ್ಲೇ ಬೆಂಗಳೂರು- ನೆಲಮಂಗಲ- ಶ್ರವಣಬೆಳಗೊಳ- ಹಾಸನ ನಡುವೆ ರೈಲ್ವೆ ಮಾರ್ಗ ನಿರ್ಮಾಣವನ್ನು ರು. 416 ಕೋಟಿ ವೆಚ್ಚದಲ್ಲಿ ಮಾಡಲು ಅನುಮತಿ ಸಿಕ್ಕಿ ಕಾಮಗಾರಿಯೂ ಆರಂಭವಾಯಿತು. ಆದರೆ ಕುಣಿಗಲ್ ಸಮೀಪ ಭೂಮಿ ಸ್ವಾಧೀನ ಮಾಡಿಕೊಳ್ಳುವಲ್ಲಿ ಎದುರಾಗಿರುವ ಸಮಸ್ಯೆಯನ್ನು ರಾಜ್ಯ ಸರ್ಕಾರ ಪರಿಹರಿಸಿಕೊಡುತ್ತಿಲ್ಲ. ಅಲ್ಲದೇ ತನ್ನ ಪಾಲಿನ ಹಣವನ್ನು ನೀಡುತ್ತಿಲ್ಲ. ವಿಳಂಬದ ಪರಿಣಾಮ ಈಗ ಅದರ ವೆಚ್ಚದ ಪ್ರಮಾಣ ರು. 530 ಕೋಟಿಗಳಿಗೆ ಏರಿದೆ. ಹೀಗೆ ರಾಜ್ಯ ರೈಲ್ವೆ ಕಾಮಗಾರಿಗಳು ಪೂರ್ಣಗೊಳ್ಳಲು ರಾಜ್ಯ ಸಹಕಾರ ನೀಡುತ್ತಿಲ್ಲ ಎಂದು ರೈಲ್ವೆ ಸಚಿವರಾಗಿದ್ದ ಖರ್ಗೆ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ತೋಟಗಾರಿಕೆ ಇಲಾಖೆ ವರದಿ ಪ್ರಕಾರವೇ ಅರಸೀಕೆರೆ ತಾಲೂಕಿನಲ್ಲಿ ಮಳೆಯಿಲ್ಲದೇ ತೇವಾಂಶದ ಕೊರತೆಯಿಂದ 7 ಲಕ್ಷ ಮತ್ತು ಚನ್ನರಾಯಪಟ್ಟಣದಲ್ಲಿ 4.28 ಲಕ್ಷ ತೆಂಗಿನ ಮರಗಳು ಒಣಗಿ ಹೋಗಿವೆ. ಈ ಬಗ್ಗೆ 2 ಬಾರಿ ಕೇಂದ್ರ ತಜ್ಞರ ತಂಡ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ನೀಡಿದೆ. ಇಲ್ಲಿಯವರೆಗೂ ನಯಾಪೈಸೆ ನೀಡಿಲ್ಲ.
ಜಿಲ್ಲೆಯ 7 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಯಿತು. ಪರಿಹಾರ ನೀಡಲಿಲ್ಲ.
ಚಿಕ್ಕನಾಯಕನಹಳ್ಳಿ- ದುದ್ದ- ರಸ್ತೆ ಕಾಮಗಾರಿ ಗುತ್ತಿಗೆದಾರ ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತ ನಂತರ ರಸ್ತೆ ಕಾಮಗಾರಿ ಕುಂಠಿತಗೊಂಡಿತು. ಚುರುಕುಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ.
ನೆನೆಗುದಿಗೆ ಬಿದ್ದಿರುವ ಪ್ರಮುಖ ಯೋಜನೆಗಳು
- ಬೆಂಗಳೂರು ಮತ್ತು ಹಾಸನ ರೈಲು ಮಾರ್ಗ 166 ಕಿ. ಮೀ ಉದ್ದದ ನಿರ್ಮಾಣ ಕಾಮಗಾರಿ 18 ವರ್ಷಗಳಾದರೂ ಪೂರ್ಣಗೊಂಡಿಲ್ಲ.
- ಹಾಸನ ಡೈರಿ ವೃತ್ತದಿಂದ ಬೇಲೂರು ರಸ್ತೆಗೆ ಸಂಪರ್ಕ ಕಲ್ಪಿಸಲು ಅಡ್ಡಿಯಾಗಿರುವ ಭೂ ಸ್ವಾಧೀನ ಸಮಸ್ಯೆಯನ್ನು ಬಗೆಹರಿಸಿಲ್ಲ.
- ರು. 339 ಕೋಟಿ ಅಂದಾಜು ವೆಚ್ಚದ ಚಿಕ್ಕನಾಯಕನಹಳ್ಳಿ- ದುದ್ದ- ಹಾಸನ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯೂ ಪೂರ್ಣಗೊಂಡಿಲ್ಲ.
- ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು 350 ಹಾಸಿಗೆಗಳಿಂದ 750 ಹಾಸಿಗೆಯುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಬೇಕಾದ ಹಣವನ್ನು ನೀಡಿಲ್ಲ.
-ಬೆಂಗಳೂರಿಗೆ ಹೋದ ಕ್ಷಣ ರು. 10 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದರು. ಅವರು ಹೋಗಿ 7 ತಿಂಗಳಾಯ್ತು. ಇನ್ನು ಹಣ ಬಿಡುಗಡೆಯಾಗಿಲ್ಲ.
- ಮೂಲ ಸೌಲಭ್ಯಗಳ ಕೊರತೆ ಪರಿಣಾಮ ವೈದ್ಯಕೀಯ ಕಾಲೇಜಿಗೆ 16 ಸ್ನಾತಕೋತ್ತರ ಕೋರ್ಸ್ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
-ಮಳೆಯಿಲ್ಲದೇ ತೇವಾಂಶದ ಕೊರತೆಯಿಂದ 7 ಲಕ್ಷ ಮತ್ತು ಚನ್ನರಾಯಪಟ್ಟಣದಲ್ಲಿ 4.28 ಲಕ್ಷ ತೆಂಗಿನ ಮರಗಳು ಒಣಗಿ ಹೋಗಿವೆ.
-ಜಿಲ್ಲೆಯ 7 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಯಿತು. ಪರಿಹಾರ ಮಾತ್ರ ನೀಡಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

