ಹಾಸನ

ಕ್ಲೈಮ್ಯಾಕ್ಸ್‌ನತ್ತ ಪ್ರಚಾರ

Published On :

-ದಯಾಶಂಕರ ಮೈಲಿ
ಹಾಸನ: ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರ ಮಂಗಳವಾರ ಸಂಜೆ 5ಕ್ಕೆ ಅಂತ್ಯಗೊಳ್ಳುತ್ತಿದ್ದು, ನಂತರದಲ್ಲಿ ಒಳರಂಗದ ಪ್ರಚಾರ ತೀವ್ರಗೊಳ್ಳುತ್ತದೆ.
ಮತದಾನಕ್ಕೆ 2 ದಿನಗಳು ಮುಂಚಿತವಾಗಿ ಆಡುವ ಆಟ, ನಡೆಸುವ ಚಮತ್ಕಾರವೇ ಮುಖ್ಯ ಎಂದು ಭಾವಿಸಿಕೊಂಡು ರಾಜಕೀಯ ಪಕ್ಷಗಳ ನಾಯಕರು, ತೆರೆಮರೆಯಲ್ಲಿ ಆಸೆ, ಆಮಿಷಗಳನ್ನು ಒಡ್ಡಿ ಮತ ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ತಿಂಗಳಿನಿಂದ ಸುಡು ಬಿಸಿಲು, ಸೆಕೆಯನ್ನು ಲೆಕ್ಕಸಿದರೇ ಊರೂರು ಅಲೆದು ಪ್ರಚಾರ ನಡೆಸಿದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಅಂತಿಮ ಕ್ಷಣದವರೆಗೂ ಮತ ಪಡೆಯಲು ಬೇಕಾದ ತಂತ್ರ, ಕುತಂತ್ರಗಳನ್ನು ಅನುಸರಿಸುವುದನ್ನು ತಳ್ಳಿ ಹಾಕುವಂತಿಲ್ಲ.
ಸೋಮವಾರ ಮಧ್ಯಾಹ್ನ ಭಾರಿ ಬಿರುಗಾಳಿಯಿಂದ ಕೂಡಿ ಮಳೆ ಆಯಿತು. ಇದರಿಂದ ರಾಜಕೀಯ ಪಕ್ಷಗಳ ಪ್ರಚಾರ ಅಸ್ತವ್ಯಸ್ತಗೊಂಡಿತ್ತು. ಮೋಡ ಕವಿದ ವಾತಾವರಣ ದ ನಡುವೆಯೇ ಸಂಜೆ 5ರ ನಂತರ ಪ್ರಚಾರ ಮಾಡಲಾಯಿತು. ಪ್ರಮುಖ ರಾಜಕೀಯ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳ ಪರ ರಾಜ್ಯ, ರಾಷ್ಟ್ರೀಯ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರೇ., ಕಣದಲ್ಲಿ ಇರುವ ಬಿಎಸ್ಪಿ, ಅಮ್ ಆದ್ಮಿ ಮತ್ತು ಪಕ್ಷೇತರ ಸದಸ್ಯರು ಪ್ರಚಾರ ನಡೆಸಿ, ಗೆಲ್ಲಿಸಲು ಮನವಿ ಮಾಡಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪರ, ಲೋಕಸಭಾ ಕ್ಷೇತ್ರದಲ್ಲಿ ಇರುವ 6 ಜೆಡಿಎಸ್ ಶಾಸಕರು, ಮುಖಂಡರಲ್ಲದೇ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮತ್ತು ಅರಕಲಗೂಡು ತಾಲೂಕಿನ ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾ ರಮೇಶ್ ಕೂಡಾ ಗೌಡರ ಪರ ಪ್ರಚಾರ ನಡೆಸಿದ್ದಾರೆ.
ವಾಕ್ಸಮರ: ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಪರ, ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಕೆ. ಶಿವಕುಮಾರ್, ಎಚ್.ಸಿ. ಮಹಾದೇವಪ್ಪ, ಎಚ್.ಎಸ್. ಮಹಾದೇವಪ್ರಸಾದ್, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಮತ್ತು ಕ್ಷೇತ್ರದ ಇಬ್ಬರು ಕಾಂಗ್ರೆಸ್ ಶಾಸಕರಲ್ಲದೇ ಆ ಪಕ್ಷದ ಮುಖಂಡರು ತೀವ್ರ ಪ್ರಚಾರ ನಡೆಸಿ, ಗೌಡರ ವಿರುದ್ಧ ವಾಕ್ಸಮರವನ್ನೇ ನಡೆಸಿದರು. ಜೆಡಿಎಸ್ ಮುಖಂಡರು, ಕಾಂಗ್ರೆಸ್, ಬಿಜೆಪಿ ಮುಖಂಡರ ವಿರುದ್ಧ ಟೀಕಾ ಪ್ರಹಾರ ನಡೆಸಿದರೇ, ಕಾಂಗ್ರೆಸಿಗರು, ಹೆಚ್ಚು ಟಾರ್ಗೆಟ್ ಮಾಡಿದ್ದು ಗೌಡರನ್ನೇ. ಆದರೂ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಗೆ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಪರ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಸುರೇಶ್ ಕುಮಾರ್ ಮತ್ತಿತರು ಪ್ರಚಾರ ನಡೆಸಿ, ಎದುರಾಳಿ ಪಕ್ಷಗಳ ವಿರುದ್ಧ ಟೀಕೆ ಮಾಡಿದರು. ಅದರಲ್ಲೂ ಅವರ ಟೀಕೆಗಳು ಹೆಚ್ಚಾಗಿ ಕಾಂಗ್ರೆಸ್ ವಿರುದ್ಧ ಮೊಳಗಿದ್ದೇ ಹೆಚ್ಚು.

ಗುರುವಾರದವರೆಗೆ ಮದ್ಯ ಇಲ್ಲ
ಏ. 15ರಂದು ಸಂಜೆ 6ರಿಂದ ಏ. 17ರ ರಾತ್ರಿ 12ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮಂಗಳವಾರ ಎಲ್ಲಾ ಮದ್ಯದಂಗಡಿಗಳಿಗೆ ಬೀಗ ಮುದ್ರೆ ಹಾಕಲಾಗುವುದು. ಅಕ್ರಮವಾಗಿ ಮದ್ಯ ಮಾರಾಟ ಮಾಡಿದವರಿಗೆ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಹೂವಪ್ಪಗೌಡ ತಿಳಿಸಿದ್ದಾರೆ.

ಶಾಂತ ಮತದಾನಕ್ಕೆ ಸಜ್ಜು
ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಶಾಂತಿಯುತ ಮತದಾನಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎರಡು ಬಾರಿ ತರಬೇತಿ ನೀಡಲಾಗಿದ್ದು, ಮತಯಂತ್ರಗಳು ಸುಸೂತ್ರವಾಗಿ ಕೆಲಸ ನಿರ್ವಹಿಸಲು ಕ್ರಮ ಜರುಗಿಸಲಾಗಿದೆ.

ಸಂಜೆ 6ರವರೆಗೆ ಮತದಾನ
ಈ ವರ್ಷ 11 ಗಂಟೆಗಳವರೆಗೆ ನಿರಂತರವಾಗಿ ಮತದಾನ ನಡೆಯಲಿದೆ. ಏ. 17 ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನಿರಂತರವಾಗಿ ಮತದಾನ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.