ಜೇನುಕಲ್ ಜಾತ್ರೆ ಇಂದಿನಿಂದ
ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಏ. 15 ಮತ್ತು 16ರವರೆಗೆ ನಡೆಯಲಿದೆ ಎಂದು ಶ್ರೀ ಜೇನುಕಲ್ ಸಿದ್ದೇಶ್ವರ ಕ್ಷೇತ್ರಾಭಿವೃದ್ಧಿ ಮಂಡಳಿ ಗೌರವಾಧ್ಯಕ್ಷ ಜಿ.ಎಸ್. ಗುರುಸಿದ್ದಪ್ಪ ತಿಳಿಸಿದ್ದಾರೆ. ಜೇನುಕಲ್ ಸಿದ್ದೇಶ್ವರ ಸಮುದಾಯ ಭವನದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ನಿಮಿತ್ತ ಜಾತ್ರಾ ಮಹೋತ್ಸವವನ್ನು ತಡೆ ಹಿಡಿಯಲಾಗಿದೆ ಎಂಬ ಸುದ್ದಿ ಹರಡಿದೆ. ಇದು ಸತ್ಯಕ್ಕೆ ದೂರವಾಗಿದ್ದು ಮಾಮೂಲಿಯಂತೆ ಜಾತ್ರಾ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮ ವಿವರ: ಏ. 15ರಂದು ಮಂಗಳವಾರ ಬೆಳಗ್ಗೆ ಧ್ವಜಾರೋಹಣ, ಬೆಟ್ಟದ ಮೇಲೆ ಅಂಕುರಾರ್ಪಣೆ, ನೂರೊಂದೆಡೆ ಸೇವೆ, ಸಂಜೆ 7 ಗಂಟೆಗೆ ಬಸವೇಶ್ವರ ಸ್ವಾಮಿ ಉತ್ಸವ, ಗದ್ದುಗೆ ಮಂಟಪದಲ್ಲಿ ಸಾಮ್ರಾಜ್ಯೋತ್ಸವ, ಹುಲಿವಾಹನ, ಸೂರ್ಯಮಂಡಲೋತ್ಸವ, ಬೆಳ್ಳಿಪಲ್ಲಕ್ಕಿ ಉತ್ಸವ, ಬಿಲ್ವ ವೃಕ್ಷೋತ್ಸವ, ಹರಕೆ ತೀರಿಸುವವರಿಗೆ ಬಾಯಿಬೀಗ, ಚಂದ್ರ ಮಂಡಲೋತ್ಸವ, ಅಗ್ನಿಕುಂಡ ಸೇವೆ ಹಾಗೂ ಕೆಂಚಮ್ಮನವರ ದೇವಸ್ಥಾನದಲ್ಲಿ ಗುಗ್ಗಳಸೇವೆ ನೆರವೇರಲಿದೆ. ಏ. 16ರಂದು ಬುಧವಾರ ಬೆಳಗ್ಗೆ ಮಹಾಮಂಗಳಾರತಿ ನಂತರ ನಡೆಮುಡಿ ಸೇವೆ ತೇರುಮಂಟಪದಲ್ಲಿ ಮಹಾಮಂಗಳಾರತಿ ನೆರವೇರಿಸಿ, ಶ್ರೀ ಸ್ವಾಮಿಯವರನ್ನು ರಥದಲ್ಲಿ ಕುಳ್ಳರಿಸಲಾಗುವುದು. 6ರಿಂದ 7 ಗಂಟೆಯವರೆಗೆ ಮಹಾದಿವ್ಯ ರಥೋತ್ಸವ ಜರುಗಲಿದೆ ಎಂದು ತಿಳಿಸಿದ್ದಾರೆ.
ಜೆಡಿಎಸ್ಗೆ ದಸಂಸ ಬೆಂಬಲ
ಹಾಸನ: ಲೋಕಸಭಾ ಚುನಾನಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ, ಕಾಂಗ್ರೆಸನ್ನು ವಿರೋಧಿಸಿ ಜೆಡಿಎಸ್ ಬೆಂಬಲಿಸಿ, ಎಚ್.ಡಿ. ದೇವೇಗೌಡರನ್ನು ಗೆಲ್ಲಿಸಲು ದಲಿತ ಸಂಘರ್ಷ ಸಮಿತಿ ನಿರ್ಣಯಿಸಿದೆ ಎಂದು ದಸಂಸ ಜಿಲ್ಲಾ ಸಂಘಟನ ಸಂಚಾಲಕ ಎಚ್.ಎನ್. ಅಣ್ಣಯ್ಯ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹಲವು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿದ್ದಾರೆ. ಮೂರು ರಾಜಕೀಯ ಪಕ್ಷಗಳನ್ನು ಗಮನದಲ್ಲಿ ಇಟ್ಟುಕೊಂಡು ಜಿಲ್ಲಾ ದಸಂಸ ಶಾಖೆ ನಿರ್ಣಯ ತೆಗೆದುಕೊಂಡಿದೆ ಎಂದರು.
ಕಾಂಗ್ರೆಸ್ಗೆ ವಿರೋಧ: ಬಿಜೆಪಿ ಕೋಮುವಾದಿ ಪತ್ರ ಮತ್ತು ಕರ್ನಾಟಕದಲ್ಲಿ ಆಡಳಿತದಲ್ಲಿದ್ದ 5 ವರ್ಷಗದಲ್ಲಿ ಸಂಪೂರ್ಣ ಭ್ರಷ್ಟಾಚಾರದ ಸರ್ಕಾರವಾಗಿತ್ತು ಹಾಗಾಗಿ ಬಿಜೆಪಿಯನ್ನು ತಿರಸ್ಕರಿಸಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಜಿಲ್ಲೆಯಲ್ಲಾಗಲೀ, ರಾಜ್ಯದಲ್ಲಾಗಲಿ, ರಾಷ್ಟ್ರದಲ್ಲಾಗಲಿ ದೇವೇಗೌಡರು ಮಾಡಿರುವಂತಹ ಉತ್ತಮ ಕೆಲಸಗಳನ್ನು ಮಾಡಿಲ್ಲ. ಆದ್ದರಿಂದ ಕಾಂಗ್ರೆಸ್ ಅನ್ನು ವಿರೋಧಿಸಲಾಗುತ್ತಿದೆ ಎಂದರು. ಮುಖಂಡರಾದ ರಮೇಶ್ ದೊಡ್ಡನಾಗರ, ರಾಜಶೇಖರ್, ಕೃಷ್ಣಯ್ಯ, ಅಪ್ಸರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

