ಬಾಲಕೃಷ್ಣ ದಂಪತಿ ಮತಯಾಚನೆ
ಚನ್ನರಾಯಪಟ್ಟಣ: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ದೇವೇಗೌಡ ಪರ ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ಅವರ ಪತ್ನಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮಾ ಬಾಲಕೃಷ್ಣ ಅವರು, ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯವನ್ನು ಮಂಗಳವಾರ ಸಂಜೆವರಗೆ ಕೈಗೊಂಡರು.
ಮಾಜಿ ಪ್ರಧಾನಿಯಾಗಿ ಸ್ಪರ್ಧೆಯಲ್ಲಿರುವವರು ಇವರೊಬ್ಬರೇ ಎಂದ ಬಾಲಕೃಷ್ಣ, ಸಂಕಷ್ಟದಲ್ಲಿರುವ ಜನತೆಯ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿರುವ ದೇವೇಗೌಡ ಲೋಕಸಭೆ ಪ್ರವೇಶಿಸಿದರೆ ತೃತೀಯ ರಂಗದಲ್ಲಿ ಯಾವುದಾದರೂ ಒಂದು ಸ್ಥಾನ ಪಡೆದು ಜಿಲ್ಲೆಯ ಅಭಿವೃದ್ಧಿಗೆ ಕಾರಣರಾಗುತ್ತಾರೆ ಎಂದು ತಿಳಿಸಿದರು.
ರಸ್ತೆ ಅಪಘಾತ: ಮಹಿಳೆ ಸಾವು
ಹಾಸನ: ನಗರದ ರೇಲ್ವೆ ಬ್ರಿಡ್ಜ್ ಬಳಿ ರಸ್ತೆ ಅಪಘಾತದಲ್ಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ತಾಲೂಕಿನ ಹನುಮಂತಪುರ ಗ್ರಾಮದ ಕಮಲಮ್ಮ (53) ಎಂಬುವರೆ ಸಾವನಪ್ಪಿದ ದುರ್ದೈವಿ ಮಹಿಳೆ. ಕಮಲಮ್ಮನವರು ಹನುಮಂತಪುರದಿಂದ ನಗರಕ್ಕೆ ಪುತ್ರಿಯ ಜೊತೆ ಆಕ್ಟಿವ್ ಹೊಂಡದಲ್ಲಿ ಬರುತ್ತಿದ್ದಾಗ ರೇಲ್ವೆ ಗೇಟ್ ಹತ್ತಿರ ಇರುವ ರಸ್ತೆ ಹುಬ್ಬಿನ ಬಳಿ ಬ್ರೇಕ್ ಹಾಕಿದಾಗ ಹಿಂಬದಿ ಕುಳಿತಿದ್ದ ಕಮಲಮ್ಮನವರು ಕೆಳಗೆ ಬಿದ್ದ ಸಂದರ್ಭದಲ್ಲಿ ಎದುರುನಿಂದ ಬಂದ ಆಲುಗೆಡ್ಡೆ ಲಾರಿ ಕಮಲಮ್ಮನವರ ಮೇಲೆ ಹರಿದಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
'ಕಾಂಗ್ರೆಸ್ಗೆ ಮತ ನೀಡಿ'
ಹಾಸನ: ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರನ್ನು ಜಿಲ್ಲೆಯ ಜನತೆ ಬೆಂಬಲಿಸಿ ಗೆಲುವಿಗೆ ಸಹಕರಿಸುವಂತೆ ಎಂದು ದಲಿತ ಸಂಘಟನೆಗಳ ಸಂಯುಕ್ತ ವೇದಿಕೆ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಕೆ. ಸಂದೇಶ್ ಮನವಿ ಮಾಡಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ದಿನದಿಂದ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇವುಗಳಿಂದ ಕ್ರಮವಾಗಿ ಸಾಲ ಪಡೆದಿದ್ದ ದಲಿತ ವರ್ಗದವರು, ಹಿಂದುಳಿದವರು, ಅಲ್ಪಸಂಖ್ಯಾತ ಸಮುದಾಯದ ಎಲ್ಲಾ ವಿಧದ ಸಾಲ ಮತ್ತು ಬಡ್ಡಿಯನ್ನು ಸಂಪೂರ್ಣವಾಗಿ ಮನ್ನ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ದಲಿತ ಸಂಘಟನೆ ಸಂಯುಕ್ತ ವೇದಿಕೆ ಹಾಗೂ ಮಾದಿಗ ಸಂಘಟನೆ ಒಕ್ಕೂಟದ ಗೌರವಾಧ್ಯಕ್ಷ ಟಿ.ವಿ. ಶಿವರಾಮಯ್ಯ, ಉಪಾಧ್ಯಕ್ಷ ಗಣೇಶ್ ವೇಲಾಪುರಿ, ಪ್ರಧಾನ ಕಾರ್ಯದರ್ಶಿ ಎಚ್.ಪಿ. ಶಂಕರರಾಜು, ಜಂಟಿ ಕಾರ್ಯದರ್ಶಿ ಡಿ.ಇ. ಜನಾರ್ಧನ್, ಸಹ- ಕಾರ್ಯದರ್ಶಿ ಕೆ.ಆರ್. ಕೃಷ್ಣಕುಮಾರ್ ಹಾಗೂ ಇತರರು ಇದ್ದರು.
ಜಾತೀಯತೆ ಇನ್ನೂ ಜೀವಂತ
ಬೇಲೂರು: ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಹಾಗೂ ಸಮಾನತೆಯನ್ನು ಆದರ್ಶವಾಗಿಟ್ಚುಕೊಂಡು ಯುವಕರು ಪಾಲನೆ ಮಾಡಿದಲ್ಲಿ ಜಾತೀಯತೆಗೆ ಕಡಿವಾಣ ಹಾಕಲು ಸಾಧ್ಯ ಎಂದು ಪುರಸಭೆ ಸದಸ್ಯ ಬಿ.ಎಲ್. ಧರ್ಮೇಗೌಡ ಅಭಿಪ್ರಾಯಪಟ್ಟರು.ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿರುವ ಅಂಬೇಡ್ಕರ್ ನಗರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 60 ದಶಕಗಳಾಗಿದ್ದರೂ ಇಂದಿಗೂ ಜಾತಿಯತೆ ಇದೆ. ಎಲ್ಲಾ ವರ್ಗದವರಿಗೂ ಸಮನಾದ ಸಾಮಾಜಿಕ ನ್ಯಾಯ ದೊರಕಿದಾಗ ಮಾತ್ರ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಬೆಲೆ ಕೊಟ್ಟಂತಾಗುತ್ತದೆ. ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಹಾಗೂ ಅವರು ನೀಡಿರುವ ಮಾರ್ಗದರ್ಶನವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಅರುಣ್ ಕುಮಾರ್, ಸತೀಶ್, ಶಾತಮ್ಮ, ತೀರ್ಥಕುಮಾರ್, ಕಾಯಿ ಶಿವಾನಂದ್, ಬಿರಟೆ ಮನೆ ಸುರೇಶ್, ದೇವರಾಜು, ರಂಗನಾಥ್ ಇತರರು ಇದ್ದರು.
ವಿದ್ಯುತ್ ತಂತಿ ತಗುಲಿ ತೆಂಗಿನ ಮರಕ್ಕೆ ಬೆಂಕಿ
ಬೇಲೂರು: ಬೇಲೂರಿನ ಜೆ.ಪಿ ನಗರದಲ್ಲಿನ ಬಸವರಾಜು ಎಂಬುವರ ಮನೆಯ ಕಾಂಪೌಂಡ್ ಒಳಗಿರುವ ತೆಂಗಿನ ಮರದ ಪಕ್ಕ ವಿದ್ಯುತ್ ತಂತಿ ಹಾದಿಹೋಗಿದ್ದು, ಸೋಮವಾರ ತೆಂಗಿನ ಮರದ ಗರಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡಿತ್ತು. ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು.
ನ್ಯಾಯಾಲಯ ಉದ್ಘಾಟನೆ
ಹೊಳೆನರಸೀಪುರ: ಹೆಚ್ಚಿರುವ ಪ್ರಕರಣಗಳ ಶೀಘ್ರ ಇತ್ಯರ್ಥ್ಯ ಹಾಗೂ ಸುಗಮ ನ್ಯಾಯಾಲಯ ವ್ಯವಸ್ಥೆಗಾಗಿ ಪಟ್ಟಣದಲ್ಲಿನ ನ್ಯಾಯಾಲಯ ಸಮುಚ್ಛಯದಲ್ಲಿ ಅಪರ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಆರಂಭಿಸಲಾಗುತ್ತಿದೆ ಎಂದು ಇಲ್ಲಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಕಂಬೇಗೌಡ ತಿಳಿಸಿದರು. ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಅಪರ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದುವರೆಗೂ ತಾಲೂಕಿನಲ್ಲಿ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯವಿದ್ದು, ಈಗ ಅಪರ ನ್ಯಾಯಾಲಯವು ಆರಂಭಗೊಳ್ಳುತ್ತಿರುವುದರಿಂದಾಗಿ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥ ಸುಗಮವಾಗಲಿದೆ ಎಂದರು.
ಹೆಚ್ಚುವರಿ ನ್ಯಾಯಾಲಯಗಳು: ಇದೇ ರೀತಿಯಲ್ಲಿ ಹೊಳೆನರಸೀಪುರವೂ ಸೇರಿದಂತೆ ಹಾಸದನಲ್ಲಿ ಹೆಚ್ಚುವರಿಯಾಗಿ ಎರಡು ಅಪರ ನ್ಯಾಯಾಲಯಗಳು, ಚನ್ನರಾಯಪಟ್ಟಣ, ಅರಕಲಗೂಡಿನಲ್ಲಿ ಒಂದು ಅಪರ ನ್ಯಾಯಾಲಯವು ಆರಂಭಗೊಳ್ಳುತ್ತಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

