ಇನ್ನೇನಿದ್ದರೂ ಮತಪ್ರಭು ಲೀಲೆ...
ಮಾಜಿ ಪ್ರಧಾನಿ, ಶಾಸಕ, ಎಂಎಲ್ಸಿ ಅಖಾಡದಲ್ಲಿ ಟಿ ಶೇ. 78ರಷ್ಟು ಮತದಾನ ನಿರೀಕ್ಷೆ
-ದಯಾಶಂಕರ ಮೈಲಿ
ಕನ್ನಡಪ್ರಭ ವಾರ್ತೆ, ಹಾಸನ, ಏ. 16
ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಬಹಿರಂಗ ಮತ್ತು ಒಳರಂಗದ ಪ್ರಚಾರವೆಲ್ಲವೂ ಬುಧವಾರ ಅಂತ್ಯಗೊಂಡಿತು. ಇನ್ನೇನಿದ್ದರೂ ಮತದಾರ ಪ್ರಭುವಿನಾಟ. ಯಾರತ್ತ ಮತದಾರನ ಚಿತ್ತ ಎಂಬುದು ನಿಗೂಢವಾಗಿಯೇ ಇದೆ. ಯಾರ ಪರ ತೀರ್ಪು ಕೊಡಬೇಕು ಎಂಬ ಗುಟ್ಟನ್ನಿಟ್ಟುಕೊಂಡೇ ಮತದಾರ ಗುರುವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ತನ್ನ ಹಕ್ಕನ್ನು ಚಲಾಯಿಸಲಿದ್ದಾನೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತನ್ನ ತವರು ಜಿಲ್ಲೆಯ ಆಶೀರ್ವಾದ ಬೇಡಿದ್ದಾರೆ. ಹಾಗೆಯೇ ಅರಕಲಗೂಡು ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಎ.ಮಂಜು ಈಗ ಕಾಂಗ್ರೆಸ್ನಿಂದ ಲೋಕಸಭೆ ಅಭ್ಯರ್ಥಿ, ಸಜ್ಜನ ರಾಜಕಾರಣಿಯೆಂದೇ ಹೆಸರಾಗಿರುವ ವಿಧಾನಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಲ್ಲದೇ ಅಮ್ ಆದ್ಮಿ ಅಭ್ಯರ್ಥಿ ಸಂತೋಷ್ ಮೋಹನ್, ಬಿಎಸ್ಪಿ ಅಭ್ಯರ್ಥಿ ಎ.ಪಿ. ಅಹಮ್ಮದ್ ಮತ್ತು ಪಕ್ಷೇತರ ಅಭ್ಯರ್ಥಿ ಡಾ. ಭಾನುಪ್ರಕಾಶ್ ಅವರೂ ಜನಮನ ಸೆಳೆಯಲು ಬೇಕಾದ ಪ್ರಚಾರ ನಡೆಸಿದ್ದಾರೆ.
ಚಾರಿತ್ರ್ಯ ಮತ್ತು ವ್ಯಕ್ತಿತ್ವ: ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಹಿನ್ನೆಲೆ, ಚಾರಿತ್ರ್ಯ ಮತ್ತು ವ್ಯಕ್ತಿತ್ವದ ಆಧಾರದ ಮೇಲೆ ಮತದಾನ ನಡೆಯುವ ನಿರೀಕ್ಷೆ ಮತ್ತು ಸಾಧ್ಯತೆಗಳಿವೆ. ಏನೇ ಹಣ, ಹೆಂಡದ ಹೊಳೆ ಹರಿಸಿದರೂ, ಅಧಿಕಾರದ ಬಲ ಬಳಸಿಕೊಂಡರೂ ಈ ಚುನಾವಣೆಯಲ್ಲಿ ಜಾತಿಗಿಂತ ಹೆಚ್ಚಾಗಿ ಅಭ್ಯರ್ಥಿಗಳ ಚಾರಿತ್ರ್ಯ, ವ್ಯಕ್ತಿತ್ವವನ್ನು ನೋಡಿಯೇ ಜನರು ಮತ ನೀಡುವುದು ಸತ್ಯ ಎನ್ನುತ್ತಾರೆ ನಾಗರಿಕ ವೇದಿಕೆ ಸಂಚಾರ ಡಾ. ಶರತ್ ಕುಮಾರ್.
ವಿಜಯಶಂಕರ್ ಶ್ರಮ: ಈ ಬಾರಿ ಕಣಕ್ಕಿಳಿದಿರುವ ವಿಜಯಶಂಕರ್ ಒಲ್ಲದ ಮನಸ್ಸಿನಿಂದ ಈ ಬಾರಿ ಸ್ಪರ್ಧಿಸಿದ್ದಾರೆ. ಆದ್ದರಿಂದ ನಿರೀಕ್ಷಿತ ರೀತಿಯಲ್ಲಿ ಟೇಕ್ ಆಪ್ ಆಗುವುದಿಲ್ಲ ಎಂದೇ ರಾಜಕೀಯ ವಲಯದಲ್ಲಿ ಹೇಳಲಾಗುತ್ತಿತ್ತು. ಆದರೆ, ಬಿಜೆಪಿ ಮುಖಂಡರಿಗಿಂತ ಹೆಚ್ಚಾಗಿ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪ್ರಚಾರ ಮಾಡಿ ಜನಮನ ತಲುಪಲು ಅವಿರತ ಶ್ರಮಿಸಿದ್ದಾರೆ. ಇದಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ಜನಮನ್ನಣೆ ಸಿಕ್ಕಿದೆ ಎಂದೇ ಹೇಳಲಾಗುತ್ತಿದೆ.
ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಸುರೇಶ್ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಬಿ.ಆರ್. ಗುರುದೇವ್, ಬಿಜೆಪಿ ಜಿಲ್ಲಾಧ್ಯಕ್ಷ ರೇಣುಕುಮಾರ್, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಮತ್ತಿತರರು ಪ್ರಾಮಾಣಿಕವಾಗಿ ಪ್ರಚಾರ ಮಾಡಿದ್ದಾರೆ.
ಗೌಡರೂ ಹಿಂದೆ ಬಿದ್ದಿಲ್ಲ: ಮಾಜಿ ಪ್ರಧಾನಿ ದೇವೇಗೌಡರು ಕೆಲವೇ ದಿನಗಳು ಮಾತ್ರ ಜಿಲ್ಲಾದ್ಯಂತ ಪ್ರವಾಸ ಮಾಡಿ, ಮತಯಾಚನೆ ಮಾಡಿದ್ದಾರೆ. ಆದರೆ ಮಾಜಿ ಎಚ್.ಡಿ. ರೇವಣ್ಣ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಎಚ್,ಎಸ್. ಪ್ರಕಾಶ್, ಕೆ.ಎಂ. ಶಿವಲಿಂಗೇಗೌಡ, ಪಟೇಲ್ ಶಿವರಾಂ, ಸಿ.ಎನ್. ಬಾಲಕೃಷ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಮಾತ್ರವಲ್ಲದೇ ಪಕ್ಷದ ಆನೇಕ ಮುಖಂಡರು ಗೌಡರ ಗೆಲುವಿಗೆ ಹಗಲಿರುಳು ದುಡಿದ್ದಾರೆ.
ಮಂಜು ಉತ್ತಮ ಪ್ರಚಾರ: ಕಾಂಗ್ರೆಸ್ ಅಭ್ಯರ್ಥಿ ಮಂಜು ಪರ ಘಟಾನುಘಟಿಗಳೇ ಬಂದು ಪ್ರಚಾರ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಎಸ್.ಎಂ. ಕೃಷ್ಣ, ಸಿ.ಎಂ. ಇಬ್ರಾಹಿಂ, ಸಚಿವರಾದ ಡಿ.ಕೆ. ಶಿವಕುಮಾರ್, ಡಾ.ಎಚ್.ಸಿ. ಮಹಾದೇವಪ್ಪ, ಮಾಜಿ ಸಚಿವ ಬಿ. ಶಿವರಾಂ, ವಿಧಾನಪರಿಷತ್ ಸದಸ್ಯ ಎಸ್.ಎಂ. ಆನಂದ್, ಹಾಗೂ ಜಿಲ್ಲೆಯ ಮುಖಂಡರು ಉತ್ತಮ ರೀತಿಯಲ್ಲೇ ಪ್ರಚಾರ ಮಾಡಿದ್ದಾರೆ. ಅಲ್ಲದೇ ಅಭ್ಯರ್ಥಿ ಮಂಜು, ತಮ್ಮದೇ ರಿವಾಜು, ಶೈಲಿಯಲ್ಲಿ ಪ್ರಚಾರ ಮಾಡಿದ್ದಾರೆ.
ಅತಿ ಹೆಚ್ಚು ಮತದಾನದ ನಿರೀಕ್ಷೆ
2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಶೇ. 69.17ರಷ್ಟು ಮತದಾನವಾಗಿತ್ತು. 2014ನೇ 16ನೇ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಶೇ. 78ರಷ್ಟು ಮತದಾನ ಆಗುವ ಸಂಭವವಿದೆ. ಸ್ವೀಪ್ ಸಮಿತಿ ಜಿಲ್ಲಾದ್ಯಂತ ಮತದಾನದ ಬಗ್ಗೆ ಜಾಥಾ, ಬೀದಿನಾಟಕ ಮತ್ತಿತರ ಮಾಧ್ಯಮಗಳ ಮೂಲಕ ಪರಿಣಾಮಕಾರಿಕಾರಿ ಜಾಗೃತಿ ಮೂಡಿಸಿದೆ. ಅಲ್ಲದೇ ಜನರೂ ಉತ್ಸಾಹದಿಂದ ಪ್ರಜಾಪ್ರಭುತ್ವದ ಮಹತ್ವದ ಪ್ರಕ್ರಿಯೆಯಾದ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಮಾತ್ರವಲ್ಲ, ನಗರದಲ್ಲೂ ಹೆಚ್ಚಿನ ಮತದಾನವಾಗುವ ಸಾಧ್ಯತೆಗಳಿವೆ.
ಏಕವಚನ ಪ್ರಹಸನ
ಚುನಾವಣೆ ವೇಳೆ ಅಭಿವೃದ್ಧಿ ವಿಚಾರಗಳ ಬಗ್ಗೆಯೂ ಪ್ರಸ್ತಾಪ ಮಾಡಲಾಯ್ತಲ್ಲದೇ, ವೈಯಕ್ತಿಕ ನೆಲೆಗಟ್ಟಿನಲ್ಲಿ ನಿಂದನೆ ಕೂಡ ನಡೆಯಿತು. ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರತಿಪಕ್ಷಗಳ ನಾಯಕರನ್ನು ಏಕವಚನ ಬಳಸಿ ನಿಂದಿಸಲಾಯಿತು.
ಪಕ್ಷಾಂತರ ಪರ್ವ
ಚುನಾವಣೆ ವೇಳೆ ಪಕ್ಷದಿಂದ ಪಕ್ಷಕ್ಕೆ ಹಾರುವ ಮರಕೋತಿಯಾಟವೂ ನಡೆಯಿತು. ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್ಗೆ, ಜೆಡಿಎಸ್ಗೆ ಮತ್ತು ಜೆಡಿಎಸ್ನಿಂದ ಕಾಂಗ್ರೆಸ್ಗೆ ಹಲವಾರು ಮಂದಿ ಸೇರ್ಪಡೆಯಾದರು. ಕೆಜೆಪಿ ಮುಖಂಡರಾದ ಅಗಿಲೆ ಯೋಗೀಶ್ ಮತ್ತಿತರು ಕಾಂಗ್ರೆಸ್ಗೆ ಸೇರಿದ 2 ದಿನಗಳಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡರು.
ಅಹಿತಕರ ಘಟನೆಗಳು ನಡೆಯಲಿಲ್ಲ
ಪ್ರಚಾರದ ಸಮಯದಲ್ಲಿ ರಾಜಕೀಯ ಪಕ್ಷಗಳ ನಡುವೆ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಇದು ನೆಮ್ಮದಿ ತರುವ ಸಂಗತಿಯೇ. ಅಲ್ಲಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದನ್ನು ಬಿಟ್ಟರೇ ಘೋರ ಅಪರಾಧಗಳೇನು ನಡೆದಿಲ್ಲ.
ಮತದಾರರು ಎಷ್ಟೆಷ್ಟು?
ಒಟ್ಟು ಮತದಾರರು 15, 59, 655
ಪುರುಷರು 7,88, 309
ಮಹಿಳೆಯರು 7, 12, 258
ತೃತೀಯ ಲಿಂಗಿಗಳು 88
ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಲ್ಲದೇ ಅಮ್ ಆದ್ಮಿ ಅಭ್ಯರ್ಥಿ ಸಂತೋಷ್ ಮೋಹನ್, ಬಿಎಸ್ಪಿ ಅಭ್ಯರ್ಥಿ ಎ.ಪಿ. ಅಹಮ್ಮದ್ ಮತ್ತು ಪಕ್ಷೇತರ ಅಭ್ಯರ್ಥಿ ಡಾ. ಭಾನುಪ್ರಕಾಶ್ ಅವರೂ ಜನಮನ ಸೆಳೆಯಲು ಬೇಕಾದ ಪ್ರಚಾರ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

