ಬರೀ ಗೊಂದಲ, ಗದ್ದಲ
ಅರಕಲಗೂಡು: ಅರಕಲಗೂಡು ವಿಧಾನಸಭಾ ಕ್ಷೇತ್ರದ ಮತದಾನದ ನಂತರ ಮತಯಂತ್ರಗಳನ್ನು ಹಿಂದಕ್ಕೆ ಪಡೆಯಲು ಗೊತ್ತುಪಡಿಸಿದ್ದ ಸ್ಥಳವಾದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ ಗುರುವಾರ ರಾತ್ರಿ ವೇಳೆಗೆ ಗೊಂದಲಮಯವಾಗಿ ಹೋಗಿತ್ತು. ಚುನಾವಣಾ ಅಧಿಕಾರಿಗಳು ಮತ್ತು ತಾಲೂಕು ಆಢಳಿತ ಅಗತ್ಯ ಎಲ್ಲಾ ವ್ಯವಸ್ಥೆ ರೂಪಿಸಿತ್ತಾದರೂ, ಸಂಜೆ ವೇಳೆಗೆ ವರುಣನ ಆರ್ಭಟದಿಂದಾಗಿ ಎಲ್ಲವೂ ಅಸ್ಥವ್ಯಸ್ಥಗೊಂಡವು.
ಸಂಜೆ ಸುಮಾರು 6.30ರ ವೇಳೆಗೆ ಮಳೆಯ ಅಬ್ಬರ ಆರಂಭವಾಗುತ್ತಿತ್ತು. ಮತಕೇಂದ್ರಗಳಿಂದ ಮತಯಂತ್ರಗಳನ್ನು ಹೊತ್ತ ಸಿಬ್ಬಂದಿ ಡಿ ಮಸ್ಟರಿಂಗ್ ಕೇಂದ್ರಕ್ಕೆ ಸಿಬ್ಬಂದಿ ಬರಲಾರಂಭಿಸಿದ್ದರು. ಆರಂಭದಲ್ಲಿ ಕೆಲವೇ ಕೇಂದ್ರಗಳಿಂದ ಬರುತ್ತಿದ್ದವರ ಸಂಖ್ಯೆ ಕಾಲಕ್ರಮೇಣ ಹೆಚ್ಚತೊಡಗಿತು. ಕೇವಲ ಒಂದು ಗಂಟೆಯಲ್ಲಿ ಸುಮಾರು 8-10 ಬಸ್ಸುಗಳು ಮತಯಂತ್ರಗಳನ್ನು ಹೊತ್ತು ಡಿ ಮಸ್ಟರಿಂಗ್ ಕೇಂದ್ರದತ್ತ ಬಂದವು.
ಎಲ್ಲರಿಗೂ ಮತ ಯಂತ್ರಗಳನ್ನು ಕೊಟ್ಟು ಮನೆಗೆ ತೆರಳುವ ತವಕ.ಇದೇ ವೇಳೆಗೆ ಮಳೆಯ ಜೊತೆಗೆ ಗುಡುಗು- ಸಿಡಿಲಿನ ಆರ್ಭಟ ಬೇರೆ. ಇದೇ ವೇಳೆ ಬೀಸಿದ ಬಿರುಗಾಳಿಗೆ ಚುನಾವಣಾ ಸಿಬ್ಬಂದಿಗಳಿಗಾಗಿ ನಿರ್ಮಿಸಿದ್ದ ಶ್ಯಾಮಿಯಾನ ನೆಲಕ್ಕುರುಳಿತು. ಸದ್ಯ ಮಳೆ ಇದ್ದುದರಿಂದ ಅದರ ಕೆಳಗೆ ಯಾರೂ ಕುಳಿತಿರಲಿಲ್ಲ. ಮತಯಂತ್ರಗಳನ್ನು ಹಿಂದಕ್ಕೆ ಪಡೆಯಲು ಬ್ಯಾರಿಕೇಡ್ ನಿರ್ಮಿಸಲಾಗಿತ್ತಾದರೂ ಅದು ಅವೈಜ್ಞಾನಿಕವಾಗಿತ್ತು. ಒಬ್ಬ ವ್ಯಕ್ತಿಯೇ ಹೋಗುವುದು ಕಷ್ಟ ಎನಿಸಿತ್ತಾದರೂ ಅದೇ ಬ್ಯಾರಿಕೇಡ್ನಲ್ಲಿ ಹಿಂದಿರುಗುವ ಮಾರ್ಗವನ್ನೂ ಸೂಚಿಸಲಾಗಿತ್ತು. ಇದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿತ್ತು. ನೂಕು ನುಗ್ಗಲು ಏರ್ಪಟ್ಟಿತು. ಬ್ಯಾರಿಕೇಡ್ಗಳು ಮುರಿದು ಬಿದ್ದವು.
ಈ ವೇಳೆ ತಾಲೂಕು ಮಟ್ಟದ ಅಧಿಕಾರಿಯೊಬ್ಬರು ಚುನಾವಣಾ ಸಿಬ್ಬಂದಿಗಳನ್ನು ಸಾಂತ್ವನಗೊಳಿಸಿ ನಿಧಾನವಾಗಿ, ಸಾಲು ಸಾಲಾಗಿ ಬರುವಂತೆ ಹೇಳಲು ಹೋಗುತ್ತಿದ್ದಾಗ, ಸಿಬ್ಬಂದಿಯೊಬ್ಬ ಅಧಿಕಾರಿಯನ್ನೇ ಅವಾಚ್ಯ ಶಬ್ದದಿಂದ ನಿಂದಿಸುತ್ತಾ ಕೊರಳು ಪಟ್ಟಿಗೇ ಕೈ ಹಾಕಿಬಿಟ್ಟ. ಕೂಡಲೇ ಅಲ್ಲಿದ್ದ ಕೆಲವರು ಮಧ್ಯೆ ಪ್ರವೇಶಿಸಿ ಮುಂದೆ ಆಗಬಹುದಾಗಿದ್ದ ಗಲಾಟೆ ತಪ್ಪಿಸಿದರು.
ಶಾರ್ಟ್ ಸರ್ಕ್ಯೂಟ್: ಇತ್ತ ಮಳೆಯ ನಡುವೆ ಸಿಡಿಲಿಗೆ ಸಿಲುಕಿ ಡಿ ಮಸ್ಟರಿಂಗ್ ಕೇಂದ್ರದ ಕಂಪ್ಯೂಟರ್ ಶಾರ್ಟ್ ಸಕ್ಯೂಟ್ಗೆ ಒಳಗಾಯಿತು. ಜನರೇಟರ್ ಕೂಡಾ ಸುಟ್ಟುಹೋಯಿತು. ಮಿಂಚು ಗುಡುಗಿನ ಫಲವಾಗಿ ಪಟ್ಟಣದಲ್ಲಿ ವಿದ್ಯುತ್ ಕಡಿತಗೊಂಡಿತು. ಎಲ್ಲೆಲ್ಲಿಯೂ ಕತ್ತಲು ಆವರಿಸಿತು. ಮತಯಂತ್ರಗಳನ್ನು ಇಟ್ಟುಕೊಂಡ ಸಿಬ್ಬಂದಿಗೆ ಭದ್ರವಾಗಿಟ್ಟು, ತಾಲೂಕು ಆಢಳಿತಕ್ಕೆ ತಲುಪಿಸಿ ಕೈ ತೊಳೆದುಕೊಳ್ಳುವ ತವಕದಲ್ಲಿದ್ದರೆ, ತಾಲೂಕು ಆಡಳಿತಕ್ಕೆ ತನ್ನ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕೆಂಬ ಗೊಂದಲ.
ಪೊಲೀಸರ ಕೊರತೆ: ಒಂದು ಹಂತದಲ್ಲಿ ಮತ ಯಂತ್ರ ತಂದ ಸಿಬ್ಬಂದಿ ಮತಯಂತ್ರ ಹಿಂದಿರುಗಿಸುವ ವೇಳೆ ತೀರಾ ನೂಕು ನುಗ್ಗಲು ಏರ್ಪಟ್ಟಿತು.ಸ್ಥಳದಲ್ಲಿ ಇದ್ದದು ಒಂದೆರಡು ಪೊಲೀಸ್ ಸಿಬ್ಬಂದಿ ಮಾತ್ರ. ನೂಕು ನುಗ್ಗಲು ತಡೆಯಲು ಹೊರಟ ಪೊಲೀಸರ ಮೇಲೆಯೇ ಮಾತಿನ ದಾಳಿಗೆ ಬಿದ್ದರು ಚುನಾವಣಾ ಸಿಬ್ಬಂದಿ. ಕತ್ತಲಲ್ಲಿ ಯಾರುಏನೂ ಒಂದೂ ಅರಿಯದಾಯಿತು. ಅನಾಗರೀಕರಂತೆ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದುದು ಕೇಳಿ ಬಂತು. ಮತ್ತೆ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಬ್ಬರು ಪೊಲೀಸರ ಕೈ ತಿರುಚಿದರು. ಆ ಇಬ್ಬರೂ ಪೊಲೀಸರು ನೋವು ಅನುಭವಿಸುತ್ತಿದ್ದಾರೆ. ಕತ್ತಲಲ್ಲಿ ಯಾರು ಎಂಬುದು ಪತ್ತೆಯಾಗಿಲ್ಲ. ಒಟ್ಟಾರೆ, ಕೊನೆ ಗಳಿಗೆಯ ಕೆಲ ಅವಾಂತರಗಳನ್ನು ಹೊರತುಪಡಿಸಿದರೆ ಕ್ಷೇತ್ರದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದೆ ಎಂದು ಹೇಳಲಡ್ಡಿಯಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

