ಈ ಬಾರಿ ಶೇ.5 ಮತ ಹೆಚ್ಚಳ
ಕನ್ನಡಪ್ರಭ ವಾರ್ತೆ ಹಾಸನ ಏ.20
ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪ್ರಚಾರಕ್ಕಿಂತ ಚುನಾವಣಾ ಆಯೋಗ ಮತದಾನದ ಮಹತ್ವದ ಕುರಿತು ನಡೆಸಿರುವ ಪ್ರಚಾರವೇ ಹೆಚ್ಚು. ಮತದಾನದ ಶೇಕಡವಾರು ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ಒಂದು ತಿಂಗಳ ಕಾಲ ಪ್ರಯತ್ನ ನಡೆಸಿದೆ. ಅದಕ್ಕೆ ಪ್ರತಿಫಲವಾಗಿ ಜಿಲ್ಲೆಯಲ್ಲಿ ಶೇ.73.50ರಷ್ಟು ಮತದಾನವಾಗಿದೆ.
ಚುನಾವಣಾ ದಿನಾಂಕ ಘೋಷಣೆ ಆಗಿ ನೀತಿ ಸಂಹಿತೆ ಜಾರಿಯಾದ ದಿನದಿಂದಲೂ ಅಧಿಕಾರಿಗಳು ಮತದಾನದ ಬಗ್ಗೆ ಪ್ರಚಾರದಲ್ಲೇ ತೊಡಗಿಕೊಂಡು, ಅದಕ್ಕಾಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಸ್ವೀಪ್ ಸಮಿತಿ ಕೂಡ ರಚನೆ ಮಾಡಿದ್ದರು.
ಕಳೆದ ಒಂದು ತಿಂಗಳಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಸ್ವೀಪ್ ಸಮಿತಿ ಕೈಗೊಂಡಿದೆ. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನೆ, ಜಾಗೃತಿ ಜಾಥಾ, ಬೀದಿ ನಾಟಕ, ಎತ್ತಿನಗಾಡಿಯ ಮೂಲಕ ಪ್ರಚಾರ, ಬೈಕ್ ರ್ಯಾಲಿ, ಬಸ್ಗಳಿಗೆ ಫಲಕ, ಕಲಾ ತಂಡಗಳ ಮೆರವಣಿಗೆ, ತೊಗಲಗೊಂಬೆ ಪ್ರದರ್ಶನ, ಕರಪತ್ರ ವಿತರಣೆ ಸೇರಿದಂತೆ ಹತ್ತು-ಹಲವು ಕಾರ್ಯಕ್ರಮಗಳ ಮೂಲಕ ಮತದಾರನ ಮನಮುಟ್ಟುವ ಪ್ರಯತ್ನ ಮಾಡಿದೆ.
ಅದರ ಜೊತೆಗೆ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ 100 ಮತಗಟ್ಟೆಗಳನ್ನು ಗುರುತಿಸಿ ಪ್ರತಿ ಮತಗಟ್ಟೆಯ 100 ಮಂದಿಯ ಅಭಿಪ್ರಾಯ ಸಂಗ್ರಹಿಸಿ ಮತದಾನ ಕಡಿಮೆ ಆಗಲು ಕಾರಣ ತಿಳಿದು ಜಾಗೃತಿ ಮೂಡಿಸಿದೆ. ಮತದಾನ ಜಾಗೃತಿಗಾಗಿ ಚುನಾವಣಾ ಆಯೋಗದಿಂದ ಈಗಾಗಲೇ 8 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇ.69.17ರಷ್ಟು ಮತದಾನವಾಗಿದ್ದು, ಈ ಬಾರಿ ಶೇ.73.50ರಷ್ಟು ಮತದಾನ ಆಗಿದೆ. ಆದ್ರೆ ಅಧಿಕಾರಿಗಳು ಶೇ.80ರಷ್ಟು ಮತದಾನವಾಗುವ ನಿರೀಕ್ಷೆ ಹೊಂದಿದ್ದರು.
1998ರಲ್ಲೇ ಅಧಿಕ: ಸಾಮಾನ್ಯವಾಗಿ ವಿಧಾನಸಭೆಗಿಂತ ಲೋಕಸಭೆ ಚುನಾವಣೆಗೆ ಕಡಿಮೆ ಮತದಾನವಾಗುವುದು ವಾಡಿಕೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ ನಡೆಸಿದರೂ ಶೇ.79ರಷ್ಟು ಮತದಾನವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಶೇ.80 ದಾಟುವುದೇ ಸಾಧನೆ ಎಂಬುದು ಸ್ವೀಪ್ ಸಮಿತಿ ಲೆಕ್ಕಾಚಾರವಾಗಿತ್ತು. ಆದರೆ 1952ರಿಂದ 2009ರ ವರೆಗಿನ ಶೇಕಡವಾರು ಮತದಾನದ ವಿವರ ಗಮನಿಸಿದರೆ 1998ರಲ್ಲೇ ಅತ್ಯಧಿಕ ಶೇ.73.74 ರಷ್ಟು ಮತದಾನ ನಡೆದಿದೆ.
ಕನಿಷ್ಠ ಎಂದರೆ ಮೊದಲ ಚುನಾವಣೆ 1952ರಲ್ಲಿ ಶೇ.48.51ರಷ್ಟು ಮತದಾನ ನಡೆದಿದ್ದು, ಒಂದು ಬಾರಿ ಮಾತ್ರ 1957ರಲ್ಲಿ ಮತದಾನವೇ ನಡೆಯಲಿಲ್ಲ. ಏಕೆಂದರೆ ಸಿದ್ದನಂಜಪ್ಪ ಎಂಬವರು ಅವಿರೋಧ ಆಯ್ಕೆಯಾಗಿದ್ದರು.
ಈ ಬಾರಿ ಮತದಾರರಿಗೆ ಜಾಗೃತಿ ಮೂಡಿಸಿದ ಚುನಾವಣಾ ಆಯೋಗ, ಅಗತ್ಯ ಎನಿಸಿರುವ ಕಡೆ ಮತಗಟ್ಟೆಗೆ ತಲುಪಲು ಬಸ್ ವ್ಯವಸ್ಥೆಯನ್ನೂ ಮಾಡಿದೆ. ಅಲ್ಲದೇ ಮತದಾನದ ಸ್ಲಿಪ್ನ್ನು ಮನೆ-ಮನೆಗೆ ಚುನಾವಣಾ ಆಯೋಗ ತಲುಪಿಸಿದ ಪರಿಣಾಮವಾಗಿ 2009ಕ್ಕಿಂತ ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿದೆ.
ಏ.17ರಂದು ನಡೆದ ಮತದಾನದಲ್ಲಿ ಈ ಬಾರಿ ಪ್ರಮಾಣ ಹೆಚ್ಚಾಗಿರುವುದರಿಂದ ಚುನಾವಣಾ ಆಯೋಗ ನಡೆಸಿರುವ ಪ್ರಯತ್ನಕ್ಕೆ ಫಲ ದೊರಕಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

