ಮಾರುಕಟ್ಟೆ ಸ್ಥಳಾಂತರಿಸಲು ಪುರಸಭೆ ವಿಫಲ
ಅರಸೀಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಪುರಸಭೆಯ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಹೋಗುವ ಗ್ರಾಹಕರಿಗೆ ಇನ್ನಿಲ್ಲದ ಕಿರಿಕಿರಿಯ ವಾತಾವರಣ ಉಂಟಾಗುತ್ತಿದೆ.
ನೂತನ ತರಕಾರಿ ಮಾರುಕಟ್ಟೆ ನಿರ್ಮಾಣವಾಗಿ ಒಂದು ದಶಕವೇ ಕಳೆದರೂ ಸ್ಥಳಾಂತರ ಮಾಡುವಲ್ಲಿ ಪುರಸಭಾ ಆಡಳಿತದ ವೈಫಲ್ಯ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರ ಆರೋಪ.
ಪಟ್ಟಣದ ವ್ಯಾಪ್ತಿಯಲ್ಲಿ 27 ವಾರ್ಡ್ಗಳಿದ್ದು, ಜನಸಂಖ್ಯೆ ಕೂಡ ಹೆಚ್ಚಾಗುತ್ತಲೇ ಬಂದಿದೆ. ಆದರೆ, ಇಲ್ಲಿನ ಪುರಸಭೆಯ ತರಕಾರಿ ಮಾರುಕಟ್ಟೆ ಮಾತ್ರ ಕಳೆದ ನಾಲ್ಕು ದಶಕಗಳ ಹಿಂದೆ ಪ್ರಾರಂಭವಾದಾಗ ಹೇಗಿತ್ತೋ ಈಗಲೂ ಹಾಗೇ ಇದೆ. ವಿಶೇಷವಾದ ಹಬ್ಬ ಹರಿದಿನಗಳಲ್ಲಿ ಈ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟುಗಳು ಜೋರಾಗಿಯೇ ನಡೆಯುತ್ತಿರುತ್ತವೆ. ಈ ಎಲ್ಲಾ ಸಂದರ್ಭಗಳಲ್ಲೂ ಈ ಜಾಗ ಜನರಿಂದ ಗಿಜಿಗುಟ್ಟುತ್ತದೆ.
ಕೆಲವು ವ್ಯಾಪಾರಸ್ಥರು ಪಾದಚಾರಿಗಳು ಓಡಾಡುವ ದಾರಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ, ಸಣ್ಣ ಜಾಗದಲ್ಲಿಯೇ ತರಕಾರಿಗಳ ಖರೀದಿ ನಡೆಸಬೇಕಾದ ಪರಿಸ್ಥಿತಿ ಇದೆ. ಅಲ್ಲದೇ, ಈ ಮಾರುಕಟ್ಟೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಬಿ.ಎಚ್. ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿ ಅನೇಕ ವ್ಯಾಪಾರಸ್ಥರಿಗೆ ತಮ್ಮ ವ್ಯಾಪಾರ ವ್ಯವಹಾರವನ್ನು ಮಾಡಲು ಅನಿವಾರ್ಯವಾಗಿ ಅನುವು ಮಾಡಿಕೊಡಲಾಗುತ್ತಿದೆ.
ಇನ್ನು ಹೂ ಮತ್ತು ಹಣ್ಣು, ಹಂಪಲು ಮಾರಾಟ ಮಾಡುವ ವ್ಯಾಪಾರಿಗಳಿಗೂ ಈ ಮಾರುಕಟ್ಟೆಯಲ್ಲಿ ಸೂಕ್ತ ವ್ಯವಸ್ಥೆ ಪುರಸಭೆ ಕಲ್ಪಿಸಿಕೊಟ್ಟಿಲ್ಲ. ಹಾಗಾಗಿ, ಸಣ್ಣ ವ್ಯಾಪಾರಿಗಳು ಕೈಗಾಡಿಗಳ ಮೇಲೆ ಹೂ, ಹಣ್ಣು ಇಟ್ಟುಕೊಂಡು ಬಿ.ಎಚ್. ರಸ್ತೆಯ ಎರಡು ಬದಿಗಳಲ್ಲಿ ನಿಲ್ಲುತ್ತಿದ್ದಾರೆ. ವಾಹನ ಸವಾರರಿಗೆ ಇದರಿಂದ ತೊಂದರೆಯಾಗುತ್ತಿದೆ.
ಪಾರ್ಕಿಂಗ್ ಸಮಸ್ಯೆ: ಮಾರುಕಟ್ಟೆ ಬರುವ ಗ್ರಾಹಕರಿಗೆ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಅನೇಕ ವೇಳೆ ರಸ್ತೆಯಲ್ಲಿಯೇ ಗ್ರಾಹಕರು ವಾಹನಗಳನ್ನು ನಿಲ್ಲಿಸಿ ವ್ಯಾಪಾರಕ್ಕಿಳಿಯುತ್ತಾರೆ. ಇದು ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಜಗಳಕ್ಕೂ ಕಾರಣವಾಗುತ್ತಿದೆ.
ಮೂಲಭೂತ ಸೌಲಭ್ಯ ಇಲ್ಲ: ಮಾರುಕಟ್ಟೆಯ ಆವರಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಅಗತ್ಯವಾದ ಶೌಚಾಲಯದ ವ್ಯವಸ್ಥೆಯಂತೂ ಇಲ್ಲವೇ ಇಲ್ಲ.
ಜನಪ್ರತಿನಿಧಿಗಳು ಈ ಬಗ್ಗೆ ಶೀಘ್ರ ಗಮನ ಹರಿಸಿ, ಇಲ್ಲಿಯ ಅವಾಂತರಗಳಿಗೆ ತೆರೆ ಎಳೆಯಬೇಕಾಗಿದೆ.
ಅನುಕೂಲತೆಯುಳ್ಳ ಹೊಸ ಮಾರುಕಟ್ಟೆ
ಮಾಜಿ ಶಾಸಕ ಜಿ.ವಿ. ಸಿದ್ದಪ್ಪನವರ ಅವಧಿಯಲ್ಲಿ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯಡಿ ವಿಶಾಲವಾದ ಸಂತೆ ಮೈದಾನದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣವಾಗಿ ದಶಕಗಳೇ ಕಳೆದಿವೆ. ಇಲ್ಲಿ ಎಲ್ಲ ರೀತಿಯ ಸೌಲಭ್ಯ ಇದೆ. ವಿಶಾಲವಾದ ಮೈದಾನವಿದೆ. ಇಲ್ಲಿ ಎಲ್ಲಾ ವ್ಯಾಪಾರಸ್ಥರಿಗೆ ಸ್ಥಳಾವಕಾಶ ಒದಗಿಸಬಹುದಾಗಿದೆ. ಆದರೆ, ಕಟ್ಟಡಗಳ ಬಾಡಿಗೆ ಹೆಚ್ಚಾಗುವ ಕಾರಣದಿಂದಾಗಿ ಅಲ್ಲಿಗೆ ವ್ಯಾಪಾರಿಗಳು ಬರಲು ಸಿದ್ಧರಿಲ್ಲ. ಹೀಗಾಗಿ, ಪಟ್ಟಭದ್ರ ಹಿತಾಸಕ್ತಿಗಳು ಹಳೇ ಮಾರುಕಟ್ಟೆಯನ್ನು ಹೊಸ ಮಾರುಕಟ್ಟೆಗೆ ಪಟ್ಟಭದ್ರ ಹಿತಾಸಕ್ತಿಗಳಿಗೆ ದಾಸರಾಗಿ ಜನಹಿತ ಮರೆಯಲಾಗುತ್ತಿದೆ ಎಂದೂ ದೂರಲಾಗುತ್ತಿದೆ.
-ಪಿ. ಶಾಂತಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

