ಸೆಸ್ಕ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ
ಆಲೂರು: ಪಟ್ಟಣದ ನಾನಾ ಬಡಾವಣೆಗಳಲ್ಲಿ ಕಳೆದ 5 ದಿನಗಳಿಂದ ವಿದ್ಯುತ್ ಸರಬರಾಜಿಲ್ಲದೆ ತೀವ್ರ ತೊಂದರೆ ಉಂಟಾಗಿದ್ದು, ಈ ಬಗ್ಗೆ ಹಲವಾರು ಬಾರಿ ಸೆಸ್ಕ್ ಅಧಿಕಾರಿಗಳಿಗೆ ದೂರು ನೀಡಿದರೂ ಅದಕ್ಕೆ ಸ್ಪಂದಿಸದ ಕಾರಣ, ರೊಚ್ಚಿಗೆದ್ದ ಜನತೆ ಪಟ್ಟಣದ ಸೆಸ್ಕ್ ಕಚೇರಿಗೆ ಸೋಮವಾರ ಬೀಗ ಜಡಿದು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ದಿಗ್ಬಂಧನ ಹಾಕಿದರು.
ದೂರು: ಕಳೆದ ಹಲವಾರು ದಿನಗಳಿಂದ ದೊಡ್ಡಬೀದಿ, ಪಟ್ಟಣ ಪಂಚಾಯ್ತಿ ಹಿಂಭಾಗದ ಪ್ರದೇಶ, ಸುಣ್ಣದ ಬೀದಿ ಸೇರಿದಂತೆ ನಾನಾ ಬಡಾವಣೆಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದು ಜನರು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಗೃಹಿಣಿಯರು ಹಾಗೂ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಅಧಿಕಾರಿಗಳಿಗೆ ಈ ಬಗ್ಗೆ ಹಲವಾರು ಬಾರಿ ದೂರು ನೀಡಿದ್ದರೂ ಉತ್ತರ ನೀಡದೆ ಮನಸೋ ಇಚ್ಛೆ ವರ್ತಿಸುತ್ತಾರೆ. ದೂರವಾಣಿ ಕರೆ ಮಾಡಿದರೆ ದೂರವಾಣಿಯನ್ನು ಸ್ವೀಕರಿಸುವವರೇ ಇಲ್ಲ. ಅಧಿಕಾರಿಗಳ ಮೊಬೈಲ್ಗೆ ಕರೆ ಮಾಡಿದರೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಜನವರಿಯಿಂದಲೂ ರಾತ್ರಿ ವೇಳೆಯಲ್ಲಿ ವಿದ್ಯುತ್ ಕೈಗೊತ್ತಿರುವುದು ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆ ಉಂಟುಮಾಡಿದೆ. ಮೇಣದ ಬತ್ತಿಯ ಬೆಳಕಿನಲ್ಲಿ ಓದಿ ಉತ್ತಮ ಅಂಕಗಳನ್ನು ಪಡೆಯಲು ಹರಸಾಹಸ ಪಡೆಯುವ ಒತ್ತಡಕ್ಕೆ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಇದು ನೇರವಾಗಿ ಪರೀಕ್ಷಾ ಫಲಿತಾಂಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂಬುದು ಪ್ರತಿಭಟನಾಕಾರರ ಅಳಲಾಗಿತ್ತು.
ಗೃಹಿಣಿಯರಿಗೂ ತೊಂದರೆ: ಇನ್ನು, ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿರುವ ಮಹಿಳೆಯರೂ ತಮಗಾಗುತ್ತಿರುವ ತೊಂದರೆಗಳನ್ನು ವಿವರಿಸಿದರು. ವಿದ್ಯುತ್ ವ್ಯತ್ಯಯದಿಂದ ಮಿಕ್ಸರ್, ಗ್ರೈಂಡರ್ ಉಪಯೋಗಿಸಿ ಅಡುಗೆ ಮಾಡಲು ಆಗುತ್ತಿಲ್ಲ. ಅಲ್ಲದೇ, ಬೇಸಿಗೆಯಾದ್ದರಿಂದ ರಾತ್ರಿ ವೇಳೆ ಫ್ಯಾನ್ ಇಲ್ಲದೇ ಮಲಗುವುದೂ ಕಷ್ಟವಾಗುತ್ತಿದೆ. ಕಳ್ಳಕಾಕರಿಗಂತೂ ಇದು ವರದಾನ ಎಂಬಂಥ ಪರಿಸ್ಥಿತಿ ಇದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ಮೂರ್ತಿ ಶೆಟ್ಟಿ, ಸೆಸ್ಕ್ನ ಎಇಇ ಉಮಾಶಂಕರ್ ಹಾಗೂ ಜೆಇ ಸುಂದರೇಗೌಡ ಮುಂತಾದವರು ಪ್ರತಿಭಟನಾಕಾರರ ಮನವೊಲಿಸಿ ವಿದ್ಯುತ್ ಸಮಸ್ಯೆ ನೀಗಿಸುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಪಪಂ ಅಧ್ಯಕ್ಷೆ ನೀಲುಫರ್, ಸದಸ್ಯರಾದ ಜಾಫರ್, ಮಂಜುನಾಥ್, ಗಂಗಾಧರ್, ಶಿವಣ್ಣ, ಛಲವಾದಿ ಮಹಾಸಭಾದ ಅಧ್ಯಕ್ಷ ಎ.ಟಿ.ಮಲ್ಲೇಶ್, ಕ್ಯಾಂಟೀನ್ ನಾಗರಾಜ್, ಧರ್ಮಪ್ಪ, ಪ್ರಶಾಂತ್ ಗಾಂಧಿ, ಅಸ್ಲಂ ಪಾಷ, ಶಿವಣ್ಣ ಇತರರು ಇದ್ದರು.
ಆತಂಕದಲ್ಲಿ ಜನರು
ಈಗಾಗಲೇ ಸುತ್ತಮುತ್ತಲ ಗ್ರಾಮಗಳೂ ಸೇರಿದಂತೆ ತಾಲೂಕಿನಾದ್ಯಂತ ಹಲವಾರು ಡಕಾಯಿತಿ, ದರೋಡೆ, ಮನೆಗಳ್ಳತನ, ಕತ್ತಲಲ್ಲಿ ಮಹಿಳೆಯರ ಸರಗಳ್ಳತನ ಪ್ರಕರಣಗಳಂತಹ ಘಟನೆಗಳು ನಡೆಯುತ್ತಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಅಲ್ಲದೇ, ವಿದ್ಯುತ್ ಸಮಸ್ಯೆಯಿಂದ ನೀರು ಶುದ್ಧೀಕರಿಸುವ ಯಂತ್ರಗಳೂ ಕೆಲಸ ಮಾಡುತ್ತಿಲ್ಲವಾದ್ದರಿಂದ ಕಲುಷಿತ ನೀರನ್ನೇ ಕುಡಿಯುವಂತಾಗಿದೆ ಎಂದು ಅಸಹನೆ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

