ಇರ್ಷಾದ್ ಶ್ರೇಷ್ಠ ಶಿಕ್ಷಣತಜ್ಞ
ಹೊಳೆನರಸೀಪುರ: ಅಂತಾರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆ ನವದೆಹಲಿ ಅವರು 2013-14ನೇ ಶೈಕ್ಷಣಿಕ ವರ್ಷದಲ್ಲಿ ಬೆಸ್ಟ್ ಎಜುಕೇಷನಿಸ್ಟ್ ಪ್ರಶಸ್ತಿಯನ್ನು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ, ಸಹ ಪ್ರಾಧ್ಯಾಪಕ ಹಾಗೂ ಹಾಲಿ ಪ್ರಾಂಶುಪಾಲ ಪ್ರೊ. ಎಂ.ಬಿ. ಇರ್ಷಾದ್ ಅವರಿಗೆ ಘೋಷಿಸಿದ್ದಾರೆ.
2010 ರಿಂದ 2013ರವರೆಗೆ ಪ್ರೊ. ಎಂ.ಬಿ. ಇರ್ಷಾದ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನವದೆಹಲಿಯ ಅಂತಾರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಯು ನೀಡಿದೆ. ನಮ್ಮ ಭಾರತೀಯ ಮೂರ್ತ- ಅಮೂರ್ತ ಮತ್ತು ನೈಸರ್ಗಿಕ ಪರಂಪರೆಗಳನ್ನು ಯಶಸ್ವಿ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಸೇವೆ ಸಲ್ಲಿಸಿರುವುದಕ್ಕಾಗಿ ಪ್ರೊ.ಎಂ.ಬಿ. ಇರ್ಷಾದ್ ಅವರಿಗೆ ಬೆಸ್ಟ್ ಎಜಕೇಷನಿಸ್ಟ್ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಲಭಿಸಿರುವ ಸುದ್ದಿಯನ್ನು ಕೇಳಿ ಹರ್ಷಿಸಿದ ಪ್ರೊ.ಎಂ.ಬಿ. ಇರ್ಷಾದ್ ಅವರು ಈ ಪ್ರಶಸ್ತಿಯನ್ನು ತನ್ನ ಆಶಯಗಳೊಂದಿಗೆ ಕೈಜೋಡಿಸಿ ಸಾಧನೆಗೆ ಸಹಕರಿಸಿದ ವಿದ್ಯಾರ್ಥಿ ಸಮೂಹಕ್ಕೆ ಅರ್ಪಿಸುವುದಾಗಿ ಹೇಳಿದ್ದಾರೆ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಸಿ. ಮಲ್ಲೇಶ್, ಇರ್ಷಾದ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪಿ.ಆರ್. ಶಾಂತ ಸಂತಸ ವ್ಯಕ್ತಪಡಿಸಿ, ಉತ್ತಮ ಆಡಳಿತಗಾರರಾಗಿ, ವಿಚಾರವಂತರಾಗಿ ಪ್ರೊ.ಎಂ.ಬಿ. ಇರ್ಷಾದ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲದೇ, ಸಾಮಾಜಿಕ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ದೇವಾಲಯಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿ, ಜನಜಾಗೃತಿಯನ್ನು ಈಗಾಗಲೇ ಮೂಡಿಸಿರುವುದರಿಂದ ಅನೇಕ ಪ್ರಶಸ್ತಿಗಳನ್ನು ಅವರಿಗೆ ಲಭಿಸಿದೆ.
ಪ್ರೊ.ಎಂ.ಬಿ. ಇರ್ಷಾದ್ ಅವರಿಗೆ ಪ್ರಶಸ್ತಿ ದೊರಕಿರುವ ಬಗ್ಗೆ ಕಾಲೇಜಿನ ಹಳೆಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ಎಂ.ಎನ್. ಜೈಪ್ರಕಾಶ್, ಲಯನ್ಸ್ ಸಂಸ್ಥೆ, ರೋಟರಿ ಕ್ಲಬ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾರ್ಯಾಗಾರ
ಹಾಸನ: ಕರ್ನಾಟಕದಲ್ಲಿನ ಮಹತ್ವವಾದ ವನ್ಯಜೀವಿ ಸಂರಕ್ಷಣಾ ವಿಷಯಗಳ ಮೇಲೆ ಬೆಳಕು ಚೆಲ್ಲಲು ಹಾಗೂ ಅಗತ್ಯವಾದ ಜಾಗೃತಿಯನ್ನು ಮೂಡಿಸಲು ವನ್ಯಜೀವಿ ತಜ್ಞ ಸಂಜಯ ಗುಬ್ಬಿ ನೇತೃತ್ವದ ನೇಚರ್ ಕನ್ಸರ್ವೇಷನ್ ಫೌಂಡೇಶನ್ ವತಿಯಿಂದ ವೈಜ್ಞಾನಿಕ- ಸಂರಕ್ಷಣಾ ಶಿಕ್ಷಣ ಕಾರ್ಯಾಗಾರಗಳನ್ನು ಪತ್ರಕರ್ತರಿಗಾಗಿ ಆಯೋಜಿಸಿದೆ. ಅದಕ್ಕೆ ಜಿಲ್ಲಾ ಪತ್ರಕರ್ತರ ಸಂಘದ ಸಹಕಾರವನ್ನೂ ಕೋರಿದ್ದಾರೆ.
ಸಕಲೇಶಪುರ ತಾಲೂಕಿನ ಹಾನುಬಾಳು ಬಳಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಮೇ 7 ಮತ್ತು 8ರಂದು ನಡೆಯುವ ಕಾರ್ಯಾಗಾರದಲ್ಲಿ ಜಿಲ್ಲೆಯ 20 ಮಂದಿ ಆಸಕ್ತ ಪತ್ರಕರ್ತರು ಭಾಗವಹಿಸಬಹುದಾಗಿದೆ.
ಆಸಕ್ತರು ಭಾಗವಹಿಸಲು ಮನವಿ ಮಾಡಿದ್ದಾರೆ. ಪತ್ರಕರ್ತರು ಹೆಸರು ಕೊಡಬೇಕು. (ಮೊದಲು ನೊಂದಾಯಿಸಿಕೊಂಡ 20 ಮಂದಿಯ ಹೆಸರು ಅಂತಿಮಗೊಳಿಸಲಾಗುವುದು). 20 ಮಂದಿಗೆ ಮಾತ್ರ ಅವಕಾಶ ಇರುವುದರಿಂದ ಒಂದು ಪತ್ರಿಕೆಯಿಂದ ಒಬ್ಬರಿಗೆ ಮಾತ್ರ ಅವಕಾಶ. ಪತ್ರಕರ್ತರು ಹೆಸರು ನೀಡಬೇಕಾಗಿ ಕೋರಲಾಗಿದೆ.
ಬಾಲವಿಜ್ಞಾನಿ ಗೌರವಕ್ಕೆ ದೀಪಿಕಾ ಪಾತ್ರ
ಚನ್ನರಾಯಪಟ್ಟಣ: ಪಟ್ಟಣ ಸಮೀಪದ ಕೆರೆಚಿಕ್ಕೇನಹಳ್ಳಿ ಗ್ರಾಮದ ರತ್ನ ಮತ್ತು ಸಿ.ಕೆ. ನಂಜಪ್ಪನವರ ಪುತ್ರಿ ಸಿ.ಎನ್. ದೀಪಿಕ ಬಾಲವಿಜ್ಞಾನಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಚೆನೈನ ನವಲೂರು ಎಂಬಲ್ಲಿರುವ ಅಗ್ನಿ ಕಾಲೇಜ್ ಆಫ್ ಟೆಕ್ನಾಲಜಿ ಎಂಜಿನಿಯರಿಂಗ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಇಂಡಿಯನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಫೇರ್ ಎಂಬ ರಾಷ್ಟ್ರಮಟ್ಟದ ವಿಜ್ಞಾನ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಸುದಾನ ಶಾಲೆಯ ಹಿರಿಯ ಹಾಗೂ ಕಿರಿಯ ತಂಡಗಳು ಭಾಗವಹಿಸಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ರಾಷ್ಟ್ರ ಪ್ರಶಸ್ತಿಯೊಂದಿಗೆ ಅವರು ಚಿನ್ನದ ಪದಕ ಪಡೆದರು. ಒಂದು ಸಾಮಾನ್ಯ ಕಳೆ ಗಿಡದಿಂದ ಯಾವುದೇ ಖರ್ಚುಗಳಿಲ್ಲದೆ ಅದರ ನಾರುಗಳನ್ನು ತೆಗೆದು ಅದನ್ನು ಮ್ಯಾಟ್, ಪರದೆ, ಹಗ್ಗಗಳ ತಯಾರಿಯಲ್ಲಿ ಹೇಗೆ ಬಳಸಬಹುದು ಎಂಬುದನ್ನು ಇವರು ತಮ್ಮ ಪ್ರಾಜೆಕ್ಟ್ನಲ್ಲಿ ತೋರಿಸಿಕೊಟ್ಟಿದ್ದಾರೆ. ಕಳೆ ನಿರ್ಮೂಲನಾ ಸಮಸ್ಯೆಯೂ ಇದರೊಂದಿಗೆ ಬಗೆಹರಿಯುತ್ತದೆ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದರು. ದೀಪಿಕಾ ಅವರು ಜೂನ್ 1ರಿಂದ ಯೂರೋಪಿನ ಹಾಲೆಂಡ್ನಲ್ಲಿ ನಡೆಯುವ ಅಂತಾರಾಷ್ಟ್ರೀಯ ವಿಜ್ಞಾನ ಒಲಂಪಿಯಾಡ್ನಲ್ಲಿ ಭಾಗವಹಿಸಲು ಐ.ಎನ್.ಇ.ಎಸ್.ಪಿ.ಒ ನಿಂದ ಆಯ್ಕೆಯಾಗಿದ್ದಾರೆ.
ದೀಪಿಕಾಗೆ ಪಟ್ಟಣದ ಸಮಾಜ ಸೇವಕ ಗಜಾನನಮನೋಹರ್, ಪರಿಸರಪ್ರೇಮಿ ಸಿ. ಎನ್. ಅಶೋಕ್, ಯೋಗಗುರೂಜಿ ಚೇತನ್, ಧನುಶ್ರೀ, ಲಾವಣ್ಯ, ಜಗದೀಶ್ ಶುಭಕೋರಿದ್ದಾರೆ.
ಗುರುಚನ್ನಬಸವೇಶ್ವರ ಜಾತ್ರೆ
ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿ ಬೊಮ್ಮಸಮುದ್ರ ಗ್ರಾಮದಲ್ಲಿ ಗುರುಚನ್ನಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ನಾನಾ ಬಗೆಯ ಪೂಜಾ ಕೈಂಕರ್ಯಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿದವು.
ಸೋಮವಾರ ಬೆಳಗ್ಗೆ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಪಾದಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಚೌಡೇಶ್ವರಿ ದೇವಿ, ಕರಿಯಮ್ಮ ದೇವಿ ಸಮ್ಮುಖದಲ್ಲಿ ಮೆರವಣಿಗೆ ಆರಂಭಿಸಲಾಯಿತು. ಮೆರವಣಿಗೆಯಲ್ಲಿ ನಂದಿಧ್ವಜ ಕುಣಿತ, ಕರಡೆ ವಾದ್ಯ, ಸೇರಿದಂತೆ ನಾನಾ ಬಗೆಯ ಜಾನಪದ ಕಲಾತಂಡಗಳು ಭಾಗವಹಿಸಿ ಉತ್ಸವಕ್ಕೆ ರಂಗು ನೀಡಿದವು.
ಗುರು ಚನ್ನಬಸವೇಶ್ವರ ಸ್ವಾಮಿಯನ್ನು ಬೆಳ್ಳಿಪಲ್ಲಕ್ಕಿಯಲ್ಲಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮವನ್ನು ತಳಿರು ತೋರಣಗಳಿಂದ ಶೃಂಗರಿಸಿದ್ದರು. ಇದೇ ವೇಳೆ ಮಹಿಳೆಯರು ಪೂರ್ಣಕುಂಭ ಹೊತ್ತು ದೇವರ ಹರಕೆ ತೀರಿಸಿದರು.
ಸೆಂಟ್ರಲ್ ಪೊಲೀಸ್ ಕ್ಯಾಂಟೀನ್ ತೆರೆಯಲು ನಿರ್ಧಾರ
ಹಾಸನ: ಅರೆಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಯೋಧರ ಕುಟುಂಬಗಳಿಗೆ ನೆರವಾಗಲು ನಗರದಲ್ಲಿ ಒಂದು ಸೆಂಟ್ರಲ್ ಪೊಲೀಸ್ ಕ್ಯಾಂಟೀನ್ ತೆರೆಯಲು ಜಿಲ್ಲಾ ನಿವೃತ್ತ ಅರೆಸೇನಾ ಪಡೆ ಯೋಧರ ಒಕ್ಕೂಟ ನಿರ್ಧರಿಸಿದೆ.
ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ನಿವೃತ್ತ ಅರೆಸೇನಾ ಪಡೆ ಯೋಧರ ಒಕ್ಕೂಟದ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಆರ್.ಎಂ. ಹನುಮಂತಪ್ಪ ಮಾತನಾಡಿ, ಬಿಎಸ್ಎಫ್, ಸಿಆರ್ಪಿಎಫ್, ಸಿಐಎಸ್ಎಫ್, ಐಟಿಬಿಪಿ, ಎಸ್ಎಸ್ಬಿ ಮತ್ತು ಅಸ್ಸಾಂ ರೈಫಲ್ ಮತ್ತಿತರ ಅರೆಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಯೋಧರಿಗಾಗಿ ಹಾಸನ ನಗರದಲ್ಲಿ ಸೆಂಟ್ರಲ್ ಪೊಲೀಸ್ ಕ್ಯಾಂಟೀನ್ ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಹುಚ್ಚಮ್ಮ ದೇವಿ ಜಾತ್ರಾ ಮಹೋತ್ಸವ
ಹಾರನಹಳ್ಳಿ (ಅರಸೀಕೆರೆ ತಾ.): ಇಲ್ಲಿಗೆ ಸಮೀಪದ ಯಳವಾರೆ ಗ್ರಾಮ ದೇವತೆ ಶ್ರೀ ಹುಚ್ಚಮ್ಮ ದೇವಿಯವರ ಜಾತ್ರ ಮಹೋತ್ಸವು ಮಂಗಳವಾರದಿಂದ ಪ್ರಾರಂಭವಾಗಿದ್ದು, ಏ. 24ರ ಗುರುವಾರದ ವರಗೆ ನಡೆಯಲಿದೆ.
ಮಂಗಳವಾರ ಶ್ರೀ ಹುಚ್ಚಮ್ಮ ದೇವಿಯವರ ಮೂಲ ಸನ್ನಿದಾನದಲ್ಲಿ ಬೆಳಗ್ಗೆ ಧ್ವಜಾರೋಹಣ, ಬಾನ, ಮದುವಣಗಿತ್ತಿ ಶಾಸ್ತ ಹುಚ್ಚಮ್ಮ ದೀವಿ ಕೋಡಮ್ಮದೇವಿಯವರ ಮಡ್ಲಕ್ಕಿ ಸೇವೆ, ಬಾಯಿಬೀಗ ಹಾಗೂ ಮಂಗಳರಾತಿ ನೆರವೇರಿದವು. ಏ. 23ರಂದು ರಾತ್ರಿ ಗುಗ್ಗಳಸೇವೆ, ಗಂಗಾಸ್ನಾನ, ಕೋಡಿಗಲಲ್ಸೇವೆ ಹಾಗೂ ಮಂಗಳಾರತಿ ನಡೆಯಲಿದೆ. ಏ. 24ರಂದು ಬೆಳಗ್ಗೆ 7ರಿಂದ 7.30ಕ್ಕೆ ಹುಚ್ಚಮ್ಮದೇವಿ ಕೋಡಮ್ಮದೇವಿ ಯವರ ಸಿಡಿಸೇವೆ, ಉಯ್ಯಲೆಸೇವೆ, 8ರಿಂದ 8.30ರವಗೆ ಜೇನುಕಲ್ ಸಿದೇಶ್ವರ ಸ್ವಾಮಿಯವರ ರಥೋತ್ಸವ, 8.30ರಿಂದ 9ರವರೆಗೆ ಚೆಲುವರಾಯ ಸ್ವಾಮಿಯವರ ಬೆಳ್ಳಿಕತ್ತಿ ಸೇವೆ, 9.30ಕ್ಕೆ ಹುಚ್ಚಮ್ಮ ಮಹಾ ರಥೋತ್ಸವವ ನಡೆಯಲಿದೆ. ಈ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಳ್ಳಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

