ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮೇಳ
ಹೊಳೆನರಸೀಪುರ: ಅಲ್ಲಿ ಸಂಭ್ರಮವಿತ್ತು, ಅಲ್ಲಿ ಕೊಳ್ಳುವವರು ಮತ್ತು ಮಾರುವವರ ನಡುವೆ ಉತ್ಸಾಹಭರಿತ ಬಾಂಧವ್ಯವಿತ್ತು. ತಿನ್ನುವವರಿಗೆ ಬಗೆ ಬಗೆಯ ತಿನಿಸುಗಳು, ಬಾಯಾರಿದರೆ ಎಳನೀರು, ತಂಪು ಮಜ್ಜಿಗೆ, ಜ್ಯೂಸ್, ಐಸ್ ಕ್ರೀಮ್... ಇತ್ಯಾದಿ. ಹೆಣ್ಣುಮಕ್ಕಳಿಗೆ ಪ್ರಿಯವಾದ ಅಲಂಕಾರಿಕ ವಸ್ತುಗಳ ಭಂಡಾರವಿತ್ತು. ಫ್ಯಾಷನ್‌ಗಾಗಿ ವೈವಿಧ್ಯಮಯ ಬಟ್ಟೆಗಳು, ಹಾಡು- ಕುಣಿತ, ದೆವ್ವಗಳ ಭೀಬತ್ಸತೆ ಎಲ್ಲವೂ ಅಲ್ಲಿ ತುಂಬಿತ್ತು... ಇದು ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಾಣಿಜ್ಯ ಮೇಳದಲ್ಲಿ ಮೇಳೈಸಿತ್ತು.
ಇಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ಸೋಮವಾರ ಕಾಲೇಜಿನ ಹೊರ ಆವರಣದಲ್ಲಿ ಆಯೋಜಿಸಲಾಗಿದ್ದ ವಾಣಿಜ್ಯ ಮೇಳವು ಕೊಡು- ಕೊಳ್ಳುವವರ ಭರಾಟೆಯ ನಡುವೆ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು.
ವಾಣಿಜ್ಯ ಅನುಭವ: ವಿದ್ಯಾರ್ಥಿನಿಯರು ತಮ್ಮ ಶೈಕ್ಷಣಿಕ ಜೀವನದ ನಂತರ ಕೇವಲ ಸರ್ಕಾರಿ ಉದ್ಯೋಗವನ್ನೇ ತಮ್ಮ ಜೀವನದ ಗುರಿಯಾಗಿಸಿಕೊಳ್ಳದೇ, ಸ್ವಯಂ ಉದ್ಯೋಗವೂ ಕೂಡ ಬದುಕನ್ನು ಕಟ್ಟಿಕೊಡಬಲ್ಲದು ಎಂಬ ಭರವಸೆ ಹಾಗೂ ಉತ್ಸಾಹವನ್ನು ವಿದ್ಯಾರ್ಥಿನಿಯರಲ್ಲಿ ತುಂಬುವ ಉದ್ದೇಶದಿಂದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಜಿ. ರಾಜಶೇಖರ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಗುಂಪು ಗುಂಪಾಗಿ ಸೇರಿಕೊಂಡು ವೈವಿಧ್ಯಮಯ ತಿನಿಸು ತಯಾರಿಸಿ, ಅವುಗಳನ್ನು ಮಾರುವ ಜೊತೆಗೆ ಹಾಕಿದ ಬಂಡವಾಳಕ್ಕೆ ತಕ್ಕ ಲಾಭಾಂಶವನ್ನು ಹೇಗೆ ನಿರೀಕ್ಷಿಸಬಹುದು ಎನ್ನುವ ಪ್ರಾಯೋಗಿಕ ಅನುಭವವನ್ನೂ ವಾಣಿಜ್ಯ ಮೇಳ ನೀಡಿತು.
ವಾಣಿಜ್ಯ ಮೇಳದಲ್ಲಿ ಬಾಯಲ್ಲಿ ನೀರೂರಿಸುವ ಪಾಲಕ್ ಪಲಾವ್, ಹೋಳಿಗೆ, ಚಿತ್ರಾನ್ನ, ಬದನೆಕಾಯಿ ಎಣ್ಣೆಗಾಯಿ, ಗೊಜ್ಜವಲಕ್ಕಿ, ಚಟ್ನಿಪುಡಿ, ರವೆ ಉಂಡೆ, ಕಡಲೆಕಾಳು ಉಸುಲಿ, ಪಾನಿಪೂರಿ, ಸ್ಥಳದಲ್ಲೇ ತಯಾರಿಸುತ್ತಿದ್ದ ಬಿಸಿ ಬಿಸಿ ಅಕ್ಕಿ ರೊಟ್ಟಿ, ಮಸಾಲ ರೊಟ್ಟಿ, ಉದ್ದಿನ ಕಡುಬು, ಸಂಡಿಗೆ, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಚುರುಮುರಿ ಒಂದೇ ಎರಡೇ... ಬಿಸಿಲಿನಲ್ಲಿ ದಣಿವಾರಿಸಿಕೊಳ್ಳಲು ಮಾವಿನಕಾಯಿ ಜ್ಯೂಸ್, ಮಸಾಲ ಮಜ್ಜಿಗೆ, ಎಳನೀರು, ಐಸ್ ಕ್ರೀಮ್, ಫ್ರೂಟ್ ಸಲಾಡ್, ಎಲ್ಲರ ಮನಕೊಪ್ಪುವ ಮದರಂಗಿಯ ಚಿತ್ತಾರ, ಸೌಂದರ್ಯ ವರ್ಧಕಗಳು, ಬಗೆ ಬಗೆಯ ಚಿತ್ತಾರದ ಬಟ್ಟೆಗಳು, ಮನರಂಜನಾ ಆಟಗಳು ವಾಣಿಜ್ಯ ಮೇಳದಲ್ಲಿ ಕಂಡುಬಂದವು.
ಮೇಳವನ್ನು ಇಲ್ಲಿನ ಕೆನರಾ ಬ್ಯಾಂಕಿನ ವ್ಯವಸ್ಥಾಪಕರಾದ ಉಪ್ಪಾರ್ ಉದ್ಘಾಟಿಸಿ, ಮೇಳದಲ್ಲಿನ ಖಾದ್ಯಗಳ ಸವಿಯನ್ನೂ ಸವಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಸವಣ್ಣ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಚಂದ್ರಕುಮಾರ್, ಪ್ರೊ.ಜಿ.ಜಿ. ರಾಜಶೇಖರ್ ಅವರಲ್ಲದೇ ಕಾಲೇಜಿನ ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ವಾಣಿಜ್ಯ ಮೇಳವನ್ನು ವೀಕ್ಷಿಸುವ ಜೊತೆಗೆ ವೈವಿಧ್ಯಮಯ ತಿನಿಸುಗಳ ಸವಿಯನ್ನು ಸವಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

